Site icon Vistara News

Vasishta Simha | ವಸಿಷ್ಠ ಸಿಂಹ ಅಭಿನಯದ ‘ಲವ್ ಲಿ’ ಸಿನಿಮಾದಲ್ಲಿ ಕೋಟಿ ರೂಪಾಯಿ ವೆಚ್ಚದ ಸೆಟ್

Vasishta Simha

ಬೆಂಗಳೂರು : ವಸಿಷ್ಠ ಸಿಂಹ (Vasishta Simha) ನಟನೆಯ ‘ಲವ್ ಲಿ’ ಸಿನಿಮಾ ಸೆಟ್ಟೇರಿದ ದಿನದಿಂದ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸಿನಿ ಪ್ರೇಕ್ಷಕರ ಗಮನ ಸೆಳೆಯುತ್ತಲೇ ಇದೆ. ಸಿಲಿಕಾನ್ ಸಿಟಿಯಲ್ಲಿ ಮೊದಲ ಹಾಗೂ ಎರಡನೇ ಶೆಡ್ಯೂಲ್ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಮಲ್ಪೆಯ ಪಡುಕರೆಯಲ್ಲಿ ಮೂರನೇ ಹಂತದ ಚಿತ್ರೀಕರಣದಲ್ಲಿ ತೊಡಗಿದೆ.

‘ಲವ್ ಲಿ’ ಚಿತ್ರೀಕರಣಕ್ಕೆಂದೇ ಪಡುಕರೆಯ ಕಡಲ ತೀರದಲ್ಲಿ ಒಂದು ಕೋಟಿ ವೆಚ್ಚದಲ್ಲಿ ಮನೆಯನ್ನು ನಿರ್ಮಾಣ ಮಾಡಲಾಗಿದೆ. ಕೇವಲ 25 ದಿನದಲ್ಲಿ ಈ ಮನೆ ನಿರ್ಮಾಣ ಮಾಡಲಾಗಿದ್ದು, ಕಳೆದ ಹತ್ತು ದಿನಗಳಿಂದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ವಸಿಷ್ಠ ಸಿಂಹ, ಸಾಧುಕೋಕಿಲ, ನಾಯಕಿ ಸ್ಟೆಫಿ ಪಟೇಲ್ ಸೇರಿದಂತೆ ಹಲವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ನಟ ವಸಿಷ್ಠ ಸಿಂಹ ಮಾತನಾಡಿ ʻʻಇದೊಂದು ಕಮರ್ಶಿಯಲ್ ಲವ್ ಸ್ಟೋರಿ ಸಿನಿಮಾ. ರೌಡಿಸಂ ಕಥಾಹಂದರ ಕೂಡ ಇದೆ. ನೈಜ ಘಟನೆಯಿಂದ ಸ್ಪೂರ್ತಿ ಪಡೆದು ಅದನ್ನು ಸಿನಿಮೀಯ ರೀತಿಯಲ್ಲಿ ಹೇಳ ಹೊರಟಿದ್ದೇವೆ. ಎಂಟರಿಂದ ಹತ್ತು ಭಾವನೆಗಳನ್ನು ಒಮ್ಮೆಲೆ ಕ್ಯಾರಿ ಮಾಡುವ ಅವಕಾಶ ಈ ಚಿತ್ರದಲ್ಲಿ ಸಿಕ್ಕಿದೆ. ಪಾತ್ರಕ್ಕೆ ಜೀವ ತುಂಬುವ ಕೆಲಸ ನಡೆಯುತ್ತಿದೆ. ಈ ಸಿನಿಮಾ ಸಿನಿ ಪ್ರಿಯರ ಮನಸ್ಸು ಗೆಲ್ಲುವುದರಲ್ಲಿ ಮರು ಮಾತಿಲ್ಲʼʼ ಎಂದು ತಿಳಿಸಿದರು.

ಇದನ್ನೂ ಓದಿ | Actress Haripriya | ವಸಿಷ್ಠ ಸಿಂಹ-ಹರಿಪ್ರಿಯಾ ನಿಶ್ಚಿತಾರ್ಥದ ಫೋಟೊಗಳು ವೈರಲ್‌!

ನಿರ್ದೇಶಕ ಚೇತನ್ ಕೇಶವ್ ಮಾತನಾಡಿ ʻʻ7 ದಿನಗಳ ಚಿತ್ರೀಕರಣ ನಡೆಸಿದರೆ ಶೇಕಡಾ 80ರಷ್ಟು ಚಿತ್ರೀಕರಣ ಪೂರ್ಣಗೊಳ್ಳಲಿದೆ. ಲಂಡನ್‌ನಲ್ಲೂ ಚಿತ್ರೀಕರಣ ಮಾಡಬೇಕಿದೆ. ಜನವರಿ ಮೊದಲ ವಾರದಲ್ಲಿ ಚಿತ್ರತಂಡ ಲಂಡನ್‌ಗೆ ತೆರಳಲಿದೆʼʼ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.

‘ಲವ್ ಲಿ’ ಚಿತ್ರವನ್ನು ಚೇತನ್ ಕೇಶವ್ ನಿರ್ದೇಶನ ಮಾಡುತ್ತಿದ್ದು, ವಸಿಷ್ಠ ಸಿಂಹಗೆ ನಾಯಕಿಯಾಗಿ ಜಾರ್ಖಂಡ್‌ ಮೂಲದ ಸ್ಟೆಫಿ ಪಟೇಲ್ ನಟಿಸುತ್ತಿದ್ದಾರೆ. ಸುಬ್ಬಲಕ್ಷ್ಮಿ ಸಂಸಾರ ಸೀರಿಯಲ್ ಖ್ಯಾತಿಯ ಸಮೀಕ್ಷಾ ಚಿತ್ರದಲ್ಲಿ ಪ್ರಮುಖ ರೋಲ್‌ನಲ್ಲಿ ಮಿಂಚಲಿದ್ದಾರೆ.

ಮಾಸ್ಟರ್ ಆನಂದ್ ಪುತ್ರಿ ವಂಶಿಕಾ, ಸಾಧುಕೋಕಿಲ, ದತ್ತಣ್ಣ, ಮಾಳವಿಕಾ, ಶೋಭ್ ರಾಜ್, ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ. ಲವ್ ಲಿ ಚಿತ್ರವನ್ನು ರವೀಂದ್ರ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಅಶ್ವಿನ್ ಕೆನಡಿ ಕ್ಯಾಮೆರಾ ವರ್ಕ್, ಹರೀಶ್ ಕೊಮ್ಮೆ ಸಂಕಲನ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ಇದನ್ನೂ ಓದಿ | Vasishta Simha and Haripriya | ಲೋಹದ ಹಕ್ಕಿಗಳ ನಿಲ್ದಾಣದಲ್ಲಿ ಸ್ಯಾಂಡಲ್‌ವುಡ್‌ ಲವ್‌ ಬರ್ಡ್ಸ್‌

Exit mobile version