Site icon Vistara News

Vedha Movie | ಶಿವರಾಜ್‌ ಕುಮಾರ್‌ 125ನೇ ಚಿತ್ರದ ನಿರ್ಮಾಪಕಿ ಗೀತಾ; ಪೋಸ್ಟರ್‌ ರಿಲೀಸ್‌

Vedha Movie

ಬೆಂಗಳೂರು : ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ನಟನೆಯ 125ನೇ ಸಿನಿಮಾ “ವೇದʼʼ (Vedha)ದ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಪೋಸ್ಟರ್‌ಗೆ ʼಡೋಂಟ್ ಫಿಯರ್, ಡೋಂಟ್ ಫರ್ಗಿವ್ʼ ಎನ್ನುವ ಟ್ಯಾಗ್ ಲೈನ್ ನೀಡಲಾಗಿದೆ.

ಈ ಸಿನಿಮಾದ ಮೂಲಕ ಗೀತಾ ಶಿವರಾಜ್​ಕುಮಾರ್ ಕೂಡ ನಿರ್ಮಾಪಕರಾಗಲಿದ್ದಾರೆ. ಇಂದು (ಜೂ.೨೩) ಅವರ ಹುಟ್ಟು ಹಬ್ಬವಾಗಿದ್ದರಿಂದ ಈ ನಿರ್ಮಾಣ ಸಂಸ್ಥೆಗೂ ಚಾಲನೆ ನೀಡಲಾಗಿದೆ. ಈ ಸಂಸ್ಥೆಗೆ ʼಗೀತಾ ಪಿಕ್ಚರ್ಸ್ʼ ಎಂದು ಹೆಸರಿಡಲಾಗಿದ್ದು, ಇದರ ಲೋಗೊವನ್ನು ಹಿರಿಯ ನಟ ಅನಂತ್ ನಾಗ್ ಬಿಡುಗಡೆಗೊಳಿಸಿದ್ದಾರೆ.

ಈ ಹಿಂದೆ ಶಿವಣ್ಣ ಅಭಿನಯದ ಭಜರಂಗಿ, ಭಜರಂಗಿ 2, ವಜ್ರಕಾಯ ಚಿತ್ರಗಳನ್ನು ನಿರ್ದೇಶಿಸಿದ್ದ ಎ.ಹರ್ಷ ಈ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ. ವೇದ ಸಿನಿಮಾ 1960ರ ದಶಕದಲ್ಲಿ ನಡೆಯುವ ಕತೆಯನ್ನು ಹೊಂದಿದೆ. ಈ ಚಿತ್ರದಲ್ಲಿ ಶಿವಣ್ಣನ ಮಗಳಾಗಿ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಸಹ ಕಾಣಿಸಿಕೊಳ್ಳಲಿದ್ದಾರೆ. ನಾಯಕಿಯಾಗಿ ಮಗಳು ಜಾನಕಿ ಧಾರಾವಾಹಿಯ ನಟಿ ಗಾನವಿ ಬಣ್ಣ ಹಚ್ಚಲಿದ್ದಾರೆ. ಇನ್ನುಳಿದಂತೆ ಕುರಿ ಪ್ರತಾಪ್, ಜಗ್ಗಪ್ಪ, ಉಮಾಶ್ರೀ ಪ್ರಮುಖ ಪಾತ್ರದಲ್ಲಿ ಕಾಣಿಸಲಿದ್ದಾರೆ.

ಬೆಂಗಳೂರು ಅರಮನೆ ಆವರಣದಲ್ಲಿ ನಡೆದ ವೇದ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮಕ್ಕೆ ದೊಡ್ಮನೆ ಕುಟುಂಬದ ಸದಸ್ಯರು ಸಾಕ್ಷಿಯಾದರು. ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಹಾಗೂ ಅವರ ಇಬ್ಬರು ಮಕ್ಕಳಾದ ವಂದಿತಾ ರಾಜ್ ಕುಮಾರ್, ದೃತಿ ರಾಜ್ ಕುಮಾರ್ ಕೂಡ ಇದ್ದರು. ಇವರಲ್ಲದೆ, ಅರುಣ್ ಸಾಗರ್, ದುನಿಯಾ ವಿಜಯ್, ನಿರ್ಮಾಪಕ ಕೆ ಪಿ ಶ್ರೀಕಾಂತ್, ರಾಕ್ ಲೈನ್ ವೆಂಕಟೇಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅತಿಥಿಯಾಗಿ ಆಗಮಿಸಿ ಈ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆದಿದ್ದು, ದೊಡ್ಮನೆ ಕುಟುಂಬ ಹಂಚಿರುವ ಪ್ರೀತಿ, ಗಳಿಸಿರುವ ಅಭಿಮಾನದ ಬಗ್ಗೆ ಮಾತನಾಡಿದರು. ವೇದ ಚಿತ್ರಕ್ಕೆ ಶುಭ ಹಾರೈಸಿದರು. ವೇದ ಮೋಷನ್ ಪೋಸ್ಟರ್ ನೋಡಿರುವ ಶಿವಣ್ಣನ ಫ್ಯಾನ್ಸ್ ಸಿನಿಮಾ ಯಾವಾಗ ಬಿಡುಗಡೆ ಆಗುತ್ತೆ ಎಂದು ಕಾತುರದಿಂದ ಕಾಯುತ್ತಿದ್ದೇವೆ ಎಂದು ಕಮೆಂಟ್‌ ಹಾಕುವ ಮೂಲಕ ಸಂತಸ ವ್ಯಕ್ತ ಪಡಿಸುತ್ತಿದ್ದಾರೆ.

Exit mobile version