ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 170ನೇ ಸಿನಿಮಾ ʼವೆಟ್ಟೈಯಾನ್ʼ (Vettaiyan Movie) ಟೈಟಲ್ ಟೀಸರ್ ಮೂಲಕವೇ ಕುತೂಹಲ ಹೆಚ್ಚಿಸಿತ್ತು. ಅಮಿತಾಭ್ ಬಚ್ಚನ್ ಸೇರಿದಂತೆ ಬೃಹತ್ ತಾರಾಗಣವನ್ನು ಒಳಗೊಂಡಿರುವ ʼವೆಟ್ಟೈಯಾನ್ʼ ನಿರ್ಮಾಣದ ಕೊನೆಯ ಹಂತದಲ್ಲಿದೆ. ಈ ಚಿತ್ರಕ್ಕಾಗಿ ತಮಿಳಿನ ಸೂಪರ್ಸ್ಟಾರ್ ಮತ್ತು ಲೆಜೆಂಡರಿ ಬಾಲಿವುಡ್ ಸ್ಟಾರ್ 33 ವರ್ಷಗಳ ನಂತರ ಮತ್ತೆ ಒಂದಾಗುತ್ತಿದ್ದಾರೆ. ಸದ್ಯ ಮುಂಬೈನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಲೈಕಾ ಪ್ರೊಡಕ್ಷನ್ ಸಂಸ್ಥೆ ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ಒಟ್ಟಿಗೆ ಇರುವ ಫೋಟೊಗಳನ್ನು ಪೋಸ್ಟ್ ಮಾಡಿದೆ.
‘ಭಾರತೀಯ ಸಿನಿಮಾ ರಂಗದ ದಿಗ್ಗಜರು. ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ಮುಂಬೈನ ವೆಟ್ಟೈಯನ್ ಸಿನಿಮಾ ಸೆಟ್ನಲ್ಲಿ’ ಎಂದು ಲೈಕಾ ಪ್ರೊಡಕ್ಷನ್ಸ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. ರಜನಿಕಾಂತ್ ಹಾಗೂ ಅಮಿತಾಭ್ ಇಬ್ಬರೂ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ತಮಿಳು ನಟ ಸೂರ್ಯ ಅಭಿನಯದ ‘ಜೈ ಭೀಮ್’ ಚಿತ್ರದ ನಿರ್ದೇಶಕ ಟಿ.ಎಸ್. ಜ್ಞಾನವೇಲ್ ‘ವೆಟ್ಟೈಯಾನ್’ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಾಗೋದಿಕ್ಕೆ ಮತ್ತೊಂದು ಕಾರಣ ತಲೈವಾ ಹಾಗೂ ಬಿಗ್ ಬಿ ಸಂಗಮ. ಭಾರತೀಯ ಚಿತ್ರರಂಗದ ದಿಗ್ಗಜರಾದ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ವೆಟ್ಟೈಯಾನ್ ಸಿನಿಮಾ ಮೂಲಕ ಮೂರು ದಶಕದ ಬಳಿಕ ಮತ್ತೊಮ್ಮೆ ಒಟ್ಟಿಗೆ ನಟಿಸಿದ್ದಾರೆ. ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಈ ಅಭೂತಪೂರ್ವ ಸಮಾಗಮಕ್ಕೆ ವೇದಿಕೆ ನಿರ್ಮಿಸಿದೆ.
ಇದನ್ನೂ ಓದಿ: Jailer Cinema : ಬದರೀನಾಥ್ ದೇಗುಲಕ್ಕೆ ಭೇಟಿ ನೀಡಿದ ಸೂಪರ್ ಸ್ಟಾರ್ ರಜನಿಕಾಂತ್
ವೆಟ್ಟೈಯಾನ್’ ಚಿತ್ರದಲ್ಲಿ ರಜನಿಕಾಂತ್ ಅಮಿತಾಭ್ ಬಚ್ಚನ್ ಜೊತೆಯಲ್ಲಿ ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್, ಮಂಜು ವಾರಿಯರ್, ರಿತಿಕಾ ಸಿಂಗ್, ವಿಜಯನ್, ಜಿಎಂ ಸುಂದರ್, ರೋಹಿಣಿ, ಅಭಿರಾಮಿ, ರಾವ್ ರಮೇಶ್, ರಮೇಶ್ ತಿಲಕ್, ರಕ್ಷಣ್ ಸೇರಿದಂತೆ ಇನ್ನೂ ಅನೇಕ ಪ್ರಮುಖ ನಟರು ನಟಿಸಲಿದ್ದಾರೆ. ಹೀಗಾಗಿಯೇ ಇದು ಬಹು ತಾರಾಗಣದ ಚಿತ್ರವಾಗಲಿದೆ.
ವೆಟ್ಟೈಯಾನ್ ಸಿನಿಮಾಗೆ ರಾಕ್ ಸ್ಟಾರ್ ಖ್ಯಾತಿಯ ಅನಿರುದ್ಧ್ ರವಿಚಂದರ್ ಸಂಗೀತ, ಎಸ್.ಆರ್. ಕಥಿರ್ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಸಂಕಲನವಿರಲಿದೆ. ತಿರುವನಂತಪುರಂ, ತಿರುನೆಲ್ವೇಲಿ, ಚೆನ್ನೈ, ಮುಂಬೈ, ಆಂಧ್ರಪ್ರದೇಶ ಮತ್ತು ಹೈದರಾಬಾದ್ನಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ತಿಳಿಸಿದ್ದಾರೆ.