ಬೆಂಗಳೂರು: ವಿಕ್ಕಿ ಕೌಶಲ್ ಹಾಗೂ ಸಾರಾ ಅಲಿ ಖಾನ್ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಜರಾ ಹಟ್ಕೆ ಜರಾ ಬಚ್ ಕೆ ( Zara Hatke Zara Bach Ke) ಚಿತ್ರೀಕರಣದ ನಂತರ ಮತ್ತೆ ನಿರ್ದೇಶಕ ದಿನೇಶ್ ವಿಜನ್ ಅವರ ಜತೆ ನಟ ಕೈ ಜೋಡಿಸುತ್ತಿದ್ದಾರೆ. ಈ ಬಾರಿ ನಟ ರಶ್ಮಿಕಾ ಮಂದಣ್ಣ (Rashmika Mandanna) ಜತೆ ತೆರೆ ಹಂಚಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಐತಿಹಾಸಿಕ ವಿಚಾರ ಆಧರಿಸಿ ಸಿನಿಮಾ ಸಿದ್ಧಗೊಳ್ಳುತ್ತಿದ್ದು, ಇದಕ್ಕೆ ‘ಛವಾ’ (Chhava) ಎಂದು ಹೆಸರು ಇಡಲಾಗಿದೆ. ಈ ಸಿನಿಮಾಗೆ ರಶ್ಮಿಕಾ ವಿಶೇಷವಾದ ತಯಾರಿ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ವರದಿಯ ಪ್ರಕಾರ, ಮರಾಠಾ ರಾಜ ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಮಗ ಛತ್ರಪತಿ ಸಂಭಾಜಿ ಮಹಾರಾಜನ ಪಾತ್ರವನ್ನು ವಿಕ್ಕಿ ನಿಭಾಯಿಸಲಿದ್ದಾರೆ. ಚಿತ್ರದ ಪ್ರೊಡಕ್ಷನ್ ಹಂತ ಭರದಿಂದ ಸಾಗಿದೆ. “ಚಿತ್ರವು ಪ್ರಾಥಮಿಕವಾಗಿ ಸಂಭಾಜಿ ಮಹಾರಾಜರ ಶೌರ್ಯ ಅವರ ತ್ಯಾಗ ಮತ್ತು ಯುದ್ಧಗಳನ್ನು ಗೆಲ್ಲುವ ತಂತ್ರಗಳ ಬಗ್ಗೆ ಇದ್ದರೂ, ಗಂಡ ಮತ್ತು ಹೆಂಡತಿಯ ನಡುವಿನ ಭಾವನಾತ್ಮಕ ಪ್ರೇಮಕಥೆಯನ್ನು ಸಹ ಒಳಗೊಂಡಿದೆ. ಮರಾಠ ಸಾಮ್ರಾಜ್ಯದಿಂದ ಸಂಭಾಜಿ ದೂರ ಇದ್ದಾಗ ಅವರ ಹೆಂಡತಿ ಎಲ್ಲವನ್ನೂ ನಿರ್ವಹಿಸುತ್ತಿದ್ದರು ಎನ್ನುವುದು ವಿಶೇಷ. ಈ ವಿಚಾರ ಕೂಡ ಸಿನಿಮಾದಲ್ಲಿ ಹೈಲೈಟ್ ಆಗಲಿದೆ.
ಮೊದಲಿನಿಂದಲೂ ಚಿತ್ರತಂಡ ರಶ್ಮಿಕಾ ಅವರೇ ಈ ಪಾತ್ರಕ್ಕೆ ಸೂಕ್ತ ಎಂದು ನಿರ್ಧರಿಸಿತ್ತು ಎನ್ನಲಾಗಿದೆ. ಬಳಿಕ ಅವರ ಲುಕ್ ಟೇಸ್ಟ್ ಮಾಡಿದ ಮೇಲೆ ಚಿತ್ರತಂಡ ಇವರೇ ನಾಯಕಿ ಎಂದು ತೀರ್ಮಾನಿಸಿದೆ ಎಂದು ಮೂಲವು ಬಹಿರಂಗಪಡಿಸಿದೆ.
ರಶ್ಮಿಕಾ ಈಗಾಗಲೇ ಈ ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದಾರೆ. ಧ್ವನಿತರಬೇತಿಯನ್ನು ಪಡೆಯುತ್ತಿದ್ದಾರೆ. ಕತ್ತಿ ಕಾಳಗ, ಕುದುರೆ ಸವಾರಿ ಮತ್ತು ಬಿಲ್ಲುಗಾರಿಕೆಯಲ್ಲಿ ಪ್ರವೀಣನಾಗಲು ನಾಲ್ಕು ತಿಂಗಳ ಕಾಲ ತರಬೇತಿಯನ್ನು ವಿಕ್ಕಿ ಅವರು ಪಡೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಈ ಪ್ರಾಜೆಕ್ಟ್ ಅನ್ನು ದೊಡ್ಡದಾಗಿ ಮಾಡಲು ತಾಂತ್ರಿಕವಾಗಿಯೂ ಪಳಗಿದವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ; Rashmika Mandanna: ನಿಜವಾದ ಕರ್ಣ ಗುರು ನೀನು ಎಂದ ನೆಟ್ಟಿಗರು; ರಶ್ಮಿಕಾಗೆ ಪರಂವಃ ಸ್ಟುಡಿಯೋಸ್ ವಿಶ್
‘ಸ್ತ್ರೀ’, ‘ಭೇಡಿಯಾ’ ಮೊದಲಾದ ಸಿನಿಮಾಗಳಿಗೆ ಬಂಡವಾಳ ಹೂಡಿದ ಮ್ಯಾಡಾಕ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ʻಛಾವಾʼ ಸಿನಿಮಾ ಈ ಪ್ರೊಡಕ್ಷನ್ ಹೌಸ್ನ ಮೊದಲ ಐತಿಹಾಸಿಕ ಯೋಜನೆಯಾಗಿದೆ. ಈ ಯೋಜನೆ ವಿಕ್ಕಿ ಮತ್ತು ರಶ್ಮಿಕಾ ಅವರ ಮೊದಲ ಸಹಯೋಗವಾಗಿದೆ. ಈ ಹಿಂದೆ ಒಳಉಡುಪುಗಳ ಜಾಹೀರಾತಿಗಾಗಿ ಒಟ್ಟಿಗೆ ಕೆಲಸ ಮಾಡಿದ್ದರು.
ವಿಕ್ಕಿ ಕೌಶಲ್ ಕೊನೆಯದಾಗಿ ಕಿಯಾರಾ ಆಡ್ವಾಣಿ ಮತ್ತು ಭೂಮಿ ಪೆಡ್ನೇಕರ್ ಅವರೊಂದಿಗೆ ʻಗೋವಿಂದ ನಾಮ್ ಮೇರಾʼದಲ್ಲಿ ಕಾಣಿಸಿಕೊಂಡಿದ್ದರು. ಮತ್ತೊಂದೆಡೆ ರಶ್ಮಿಕಾ ಕೊನೆಯದಾಗಿ ʻಮಿಷನ್ ಮಜ್ನುʼ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜತೆ ಕಾಣಿಸಿಕೊಂಡಿದ್ದರು.