Site icon Vistara News

Vidya Balan: ಪೊಲೀಸ್‌ ಠಾಣೆ ಮೆಟ್ಟಿಲೇರಿದ ವಿದ್ಯಾ ಬಾಲನ್‌; ನಟಿಗೆ ಎದುರಾದ ಸಮಸ್ಯೆ ಏನು?

vidya balan

vidya balan

ಮುಂಬೈ: ಬಾಲಿವುಡ್‌ನ ಜನಪ್ರಿಯ ನಟಿ ವಿದ್ಯಾ ಬಾಲನ್‌ (Vidya Balan) ಮುಂಬೈ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾರೆ. ವ್ಯಕ್ತಿಯೊಬ್ಬರು ಅವರ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಮ್‌ ಖಾತೆ ತೆರೆದು ಉದ್ಯೋಗದ ಆಮಿಷ ಒಡ್ಡಿ ಹಣ ಪೀಕುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೀಗಾಗಿ ವಿದ್ಯಾ ಬಾಲನ್‌ ಇದೀಗ ಕಾನೂನಿನ ಮೊರೆ ಹೋಗಿದ್ದಾರೆ.

ಜನರನ್ನು ವಂಚಿಸುವ ಉದ್ದೇಶದಿಂದ ಕಿಡಿಗೇಡಿಗಳು ವಿದ್ಯಾ ಬಾಲನ್​ ಅವರ ಹೆಸರಿನಲ್ಲಿ ಇ-ಮೇಲ್​ ಖಾತೆಯನ್ನೂ ತೆರೆದು ಆ ಮೂಲಕ ಅನೇಕರಿಗೆ ಸಂದೇಶ ಕಳುಹಿಸಿದ್ದಾರೆ. ಈ ಮೂಲಕ ಸಾರ್ವಜನಿಕರು ಮಾತ್ರವಲ್ಲ ಚಿತ್ರರಂಗದಲ್ಲಿ ಇರುವ ಸೆಲೆಬ್ರಿಟಿಗಳನ್ನೂ ವಂಚಿಸಲು ಪ್ರಯತ್ನಿಸಲಾಗಿದೆ. ವಿದ್ಯಾ ಬಾಲನ್​ ಹೆಸರಿನಲ್ಲಿ ನಡೆಯುತ್ತಿರುವ ಈ ಮೋಸ ಇತ್ತೀಚೆಗೆ ಕಾಸ್ಟ್ಯೂಮ್​ ಡಿಸೈನರ್​ ಒಬ್ಬರಿಗೆ ತಿಳಿದಿತ್ತು. ಅವರು ಅದನ್ನು ನಟಿಯ ಗಮನಕ್ಕೆ ತಂದಿದ್ದರು. ಕೂಡಲೇ ಎಚ್ಚೆತ್ತುಕೊಂಡ ವಿದ್ಯಾ ಬಾಲನ್​ ದೂರು ದಾಖಲಿಸಿದ್ದಾರೆ.

ʼʼನನ್ನ ಹೆಸರನ್ನು ಬಳಸಿಕೊಂಡು ಕೆಲವರು ಹಣ ಮಾಡುತ್ತಿದ್ದಾರೆ. ನನ್ನ ಹೆಸರನ್ನು ಅವರು ದುರ್ಬಳಕ್ಕೆ ಮಾಡುತ್ತಿದ್ದಾರೆ. ನನ್ನ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಖಾತೆ ತೆರೆದು ಇಂತಹ ಕೆಲಸ ಮಾಡುತ್ತಿರುವವರನ್ನು ಪತ್ತೆ ಮಾಡಬೇಕುʼʼ ಎಂದು ವಿದ್ಯಾ ಬಾಲನ್‌ ದೂರಿನಲ್ಲಿ ತಿಳಿಸಿದ್ದಾರೆ.

ʼʼವಿದ್ಯಾ ಬಾಲನ್‌ ಅವರ ನಕಲಿ ಇ-ಮೇಲ್​ ಖಾತೆ vidyabalanspeaks@gmail.com ಮತ್ತು ಇನ್‌ಸ್ಟಾಗ್ರಾಮ್‌ ಖಾತೆ vidya.balan.pvt ಮೂಲಕ ವಂಚಿಸಿರುವುದು ಬೆಳಕಿಗೆ ಬಂದಿದೆ. ಉದ್ಯೋಗಾವಕಾಶಗಳ ಸುಳ್ಳು ಭರವಸೆಗಳೊಂದಿಗೆ ವಂಚಕನು ಹಲವು ದಿನಗಳವರೆಗೆ ಈ ನಕಲಿ ಖಾತೆಗಳನ್ನು ಬಳಸಿದ್ದʼʼ ಎಂದು ಮೂಲಗಳು ತಿಳಿಸಿವೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಖಾರ್ ಠಾಣೆಯ ಪೊಲೀಸರು ಐಟಿ ಸೆಕ್ಷನ್ 66 (ಸಿ) ಅಡಿಯಲ್ಲಿ ಎಫ್ಐಆರ್ ದಾಖಲಿಸಿ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಈ ಹಿಂದೆ ಬಾಲಿವುಡ್‌ ಸಲ್ಮಾನ್‌ ಖಾನ್‌ ಹೆಸರಿನಲ್ಲಿ ಈ ರೀತಿಯ ವಂಚನೆ ನಡೆದಿತ್ತು.

ಇದನ್ನೂ ಓದಿ: Bollywood Update: ವಿದ್ಯಾ ಬಾಲನ್‌ ಜತೆ ಅಭಿನಯಿಸಿದ್ದ ನಟನ ಪ್ರೇಮ್‌ ʼಕಹಾನಿʼಗೆ ಕಂಕಣಭಾಗ್ಯ

2011ರಲ್ಲಿ ತೆರೆಕಂಡ ʼದಿ ಡರ್ಟಿ ಪಿಕ್ಚರ್‌ʼ ಬಾಲಿವುಡ್‌ ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡ ವಿದ್ಯಾ ಬಾಲನ್‌ ಸದ್ಯ ʼಡು ಔರ್‌ ಡು ಪ್ಯಾರ್‌ʼ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪ್ರತೀಕ್‌ ಗಾಂಧಿ, ಇಲಿಯಾನಾ ಡಿʼಕ್ರೂಜ್‌, ಸೆಂಧಿಲ್‌ ರಾಮಮೂರ್ತಿ ಮತ್ತಿತರರು ನಟಿಸುತ್ತಿದ್ದಾರೆ. ಶಿರ್ಶ ಗುಹ ಥಾಕುರ್ತ ನಿರ್ದೇಶನದ ಈ ಸಿನಿಮಾ ಮಾರ್ಚ್‌ 29ರಂದು ಬಿಡುಗಡೆಯಾಗಲಿದೆ. ಕಳೆದ ವರ್ಷ ವಿದ್ಯಾ ಬಾಲನ್‌ ಅಭಿನಯದ ʼನೀಯತ್‌ʼ ಸಿನಿಮಾ ತೆರೆಕಂಡಿತ್ತು. ಆದರೆ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ನಿರೀಕ್ಷಿತ ಗೆಲುವು ಸಾಧಿಸಿರಲಿಲ್ಲ. ಅಳೆದು ತೂಗಿ ಚಿತ್ರಗಳನ್ನು ಆಯ್ಕೆ ಮಾಡುವ ವಿದ್ಯಾ ಬಾಲನ್‌ ಹಿಂದಿಯ ಜತೆಗೆ ಮಲಯಾಳಂ, ತಮಿಳು, ತೆಲುಗು, ಮರಾಠಿ, ಬಂಗಾಳಿ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 2014ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪುರಸ್ಕಾರ ಮುಡಿಗೇರಿಸಿಕೊಂಡ ಅವರು ಮಹಿಳಾ ಪ್ರಧಾನ ಚಿತ್ರಗಳಿಂದಲೇ ಗುರುತಿಸಿಕೊಂಡಿದ್ದಾರೆ. ಕೇರಳ ಮೂಲದ ಇವರು 2003ರಲ್ಲಿ ತೆರೆಕಂಡ ʼಭಲೋ ಥೆಕೊʼ ಚಿತ್ರದ ಮೂಲಕ ಬಣ್ಣದ ಲೋಕ ಪ್ರವೇಶಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version