Site icon Vistara News

ಲೈಗರ್‌ ಪ್ರಮೋಶನ್‌ಗೆ ಮಾಲ್‌ಗೆ ಹೋಗಿ, ಅಲ್ಲಿರೋಕೆ ಆಗದೆ ವಾಪಸ್‌ ಬಂದ ವಿಜಯ್‌ ದೇವರಕೊಂಡ

Liger

ಮುಂಬಯಿ: ಬಹುನಿರೀಕ್ಷಿತ ಲೈಗರ್‌ ಸಿನಿಮಾ ಆಗಸ್ಟ್‌ 25ಕ್ಕೆ ತೆರೆ ಕಾಣಲಿದ್ದು, ನಟ ವಿಜಯ್‌ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಸಿನಿಮಾ ಪ್ರಮೋಶನ್‌ನಲ್ಲಿ ಫುಲ್‌ ಬ್ಯೂಸಿಯಾಗಿದ್ದಾರೆ. ಇತ್ತೀಚೆಗೆ ಇವರಿಬ್ಬರೂ ಮುಂಬೈ ಲೋಕಲ್‌ ರೈಲಿನಲ್ಲಿ ಒಟ್ಟಾಗಿ ಪ್ರಯಾಣ ಮಾಡಿ, ಲೈಗರ್‌ ಪ್ರಮೋಶನ್‌ ಮಾಡಿದ್ದರು. ಅದರ ಫೋಟೋ-ವಿಡಿಯೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾಗಳಲ್ಲಿ ಶೇರ್‌ ಮಾಡಿಕೊಂಡಿದ್ದರು. ಹಾಗೇ, ವಿಜಯ್‌ ಮತ್ತು ಅನನ್ಯಾ ನಿನ್ನೆ (ಜುಲೈ 31) ಲೈಗರ್‌ ಪ್ರಮೋಶನ್‌ಗಾಗಿ ಮುಂಬೈನ ಮಾಲ್‌ವೊಂದಕ್ಕೆ ಹೋಗಿದ್ದರು. ಅಲ್ಲಿ ಈ ಸಿನಿಮಾ ಪ್ರಮೋಶನ್‌ಗಾಗಿ ದೊಡ್ಡ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಆದರೆ ವಿಜಯ್‌ ದೇವರಕೊಂಡ ಮತ್ತ ಅನನ್ಯಾ ಪಾಂಡೆಗೆ ತುಂಬ ಹೊತ್ತು ಅಲ್ಲಿ ಇರಲು ಆಗಲೇ ಇಲ್ಲ. ಅರ್ಧಕ್ಕೇ ವಾಪಸ್‌ ಬಂದುಬಿಟ್ಟಿದ್ದಾರೆ.

ಅಂಥದ್ದೇನಾಯ್ತು?
ಜುಲೈ 31ರಂದು ಅವರು ವಿಜಯ್‌ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಸಮಯಕ್ಕೆ ಸರಿಯಾಗಿ ಮಾಲ್‌ಗೆ ಹೋಗಿದ್ದಾರೆ. ಆದರೆ ಅಲ್ಲಿ ಅಷ್ಟರಲ್ಲಾಗಲೇ ಅನೇಕ ಜನರು ಸೇರಿದ್ದರು. ಸಮಾರಂಭ ನಡೆಯುವ ಸ್ಥಳ ಅಭಿಮಾನಿಗಳಿಂದ ಫುಲ್‌ ಪ್ಯಾಕ್‌ ಆಗಿಬಿಟ್ಟಿತ್ತು. ಸರಿಯಾಗಿ ಕಾಲು ಇಡಲೂ ಆಗದಷ್ಟೂ ಜನರ ನೂಕುನುಗ್ಗಲು ಉಂಟಾಗಿತ್ತು. ಭಾರಿ ಗಲಾಟೆ ಇತ್ತು. ಅಭಿಮಾನಿಗಳ ಬಳಿ ಶಾಂತಿಯಿಂದ ಇರುವಂತೆ ವಿಜಯ್‌ ದೇವರಕೊಂಡ ಸ್ಟೇಜ್‌ ಮೇಲೆ ನಿಂತು ಮನವಿ ಮಾಡಿದರು. ʼಹೀಗೆ ಆದರೆ ಕಾಲ್ತುಳಿತ ಉಂಟಾಗುತ್ತದೆ. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳಿ. ಸಮಾಧಾನವಾಗಿರಿʼ ಎಂದು ಹೇಳಿದರು. ಆದರೆ ಅಲ್ಲಿನ ಪರಿಸ್ಥಿತಿ ಸುಧಾರಿಸುವ ಯಾವುದೇ ಲಕ್ಷಣವೂ ಕಾಣದ ಕಾರಣ, ಭದ್ರತೆಯನ್ನು ಪರಿಗಣಿಸಿ ಅವರು ಅರ್ಧದಲ್ಲೇ ಹೊರಬಂದರು.

ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿ, ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ʼನಿಮ್ಮ ಪ್ರೀತಿ ನೋಡಿ ನನ್ನ ಹೃದಯ ತುಂಬಿಬಂತು. ನೀವೆಲ್ಲ ಸುರಕ್ಷಿತವಾಗಿ, ಮನೆಗೆ ವಾಪಸ್‌ ಹೋಗಿದ್ದೀರಿ ಎಂದು ಭಾವಿಸಿದ್ದೇನೆ. ನಾನು ತುಂಬ ಹೊತ್ತು ನಿಮ್ಮೊಂದಿಗೆ ಸಮಯ ಕಳೆಯಬೇಕು ಎಂದುಕೊಂಡಿದ್ದೆ. ಆದರೆ ಆಗಲಿಲ್ಲʼ ಎಂದು ಬರೆದುಕೊಂಡಿದ್ದಾರೆ.

ಹಾಗೇ, ಮಾಲ್‌ನಲ್ಲಿ ನಡೆದ ಕಾರ್ಯಕ್ರಮದ ವಿಡಿಯೋವನ್ನು ಸಿನಿಮಾದ ಸಹ ನಿರ್ಮಾಪಕ ಚರ್ಮೆ ಕೌರ್‌ ಶೇರ್‌ ಮಾಡಿಕೊಂಡಿದ್ದಾರೆ. ʼಮುಂಬೈ ಜನರು ನಮ್ಮ ಮೇಲೆ ತೋರಿಸಿದ ಅಭಿಮಾನಕ್ಕೆ ಋಣಿ. ನಮ್ಮನ್ನು ಬೆಂಬಲಿಸಲು ಮಾಲ್‌ಗೆ ಬಂದಿದ್ದ ಎಲ್ಲರಿಗೂ ಧನ್ಯವಾದಗಳು. ಸ್ಥಳದಲ್ಲಿ ತುಂಬಿದ್ದ ಅಭಿಮಾನಿಗಳ ಸುರಕ್ಷತೆ ದೃಷ್ಟಿಯಿಂದ ಮಧ್ಯದಲ್ಲೇ ವಾಪಸ್‌ ಬರಬೇಕಾಯಿತು ಎಂದಿದ್ದಾರೆ.

ಇದನ್ನೂ ಓದಿ: Liger Trailer | ನೀನು ಫೈಟರ್‌ ಆದರೆ ನಾನು ಯಾರು? ಪ್ರಶ್ನಿಸಿದ ಲೆಜೆಂಡ್ ಮೈಕ್ ಟೈಸನ್, ಅಬ್ಬರಿಸಿದ ಲೈಗರ್‌

Exit mobile version