Site icon Vistara News

Vijay Deverakonda | ಒಂದು ಮಹತ್ವದ ಸಂಕಲ್ಪ ಮಾಡಿ, ನೋಂದಣಿ ಮಾಡಿಸಿದ ವಿಜಯ ದೇವರಕೊಂಡ; ಅಮ್ಮನ ಸಾಥ್​

Vijay Deverakonda registered to donate organs

ಟಾಲಿವುಡ್​ ನಟ ವಿಜಯ್​ ದೇವರಕೊಂಡ ಒಂದು ಮಹತ್ವದ ಸಂಕಲ್ಪ ಮಾಡಿ, ಎಲ್ಲರಿಗೂ ಮಾದರಿಯಾಗಿದ್ದಾರೆ. ನೆಚ್ಚಿನ ನಟನ ನಿರ್ಧಾರ ಅವರ ಅನೇಕಾನೇಕ ಅಭಿಮಾನಿಗಳಲ್ಲಿ ಸ್ಫೂರ್ತಿ ತುಂಬಿದೆ. ಇತ್ತೀಚೆಗೆ ಹೈದರಾಬಾದ್​​ನಲ್ಲಿ ಖಾಸಗಿ ಆಸ್ಪತ್ರೆಯೊಂದು, ‘ಮಕ್ಕಳ ಲಿವರ್​ ಕಸಿ’ ಬಗ್ಗೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿಜಯ್​ ದೇವರಕೊಂಡ ತಾವೂ ಕೂಡ ಈಗಾಗಲೇ ಅಂಗಾಂಗ ದಾನ ಮಾಡಲು ಹೆಸರು ನೋಂದಣಿ ಮಾಡಿಸಿದ್ದಾಗಿ ತಿಳಿಸಿದ್ದಾರೆ. ‘ನಾನು ಮತ್ತು ನನ್ನ ಅಮ್ಮ ಮಾಧವಿ ಇಬ್ಬರೂ ಸೇರಿ ಅಂಗಾಂಗ ದಾನದ ಸಂಕಲ್ಪ ಮಾಡಿದ್ದೇವೆ. ಇಬ್ಬರೂ ನೋಂದಣಿ ಮಾಡಿಸಿದ್ದೇವೆ’ ಎಂದು ಹೇಳಿದ್ದಾರೆ.

‘ಅದೆಷ್ಟೋ ಸರ್ಜರಿಗಳನ್ನು ಸಾಧ್ಯಮಾಡಿ, ಯಶಸ್ವಿಗೊಳಿಸುವುದೇ ಅಂಗಾಂಗ ದಾನಿಗಳು ಎಂದು ವೈದ್ಯರು ನನಗೆ ತಿಳಿಸಿದ್ದಾರೆ. ಅದೆಷ್ಟೋ ಜನರು ಅಂಗಾಂಗ ದಾನಕ್ಕೆ ನೋಂದಣಿ ಮಾಡಿಸುವಾಗ, ಮಡಿದ ಪ್ರೀತಿಪಾತ್ರರ ಅಂಗಾಂಗಗಳನ್ನು ದಾನ ಮಾಡುವಾಗ ಭಾವುಕರಾಗುತ್ತಾರೆ. ನಿಜಕ್ಕೂ ಇದು ಒಂದು ಅದ್ಭುತ ಸಂಗತಿ ಎಂದೂ ನನಗೆ ಡಾಕ್ಟರ್ಸ್​ ತಿಳಿಸಿಕೊಟ್ಟಿದ್ದಾರೆ. ಉಳಿದ ದೇಶಗಳಿಗೆ ಹೋಲಿಸಿದರೆ, ದಕ್ಷಿಣ ಏಷ್ಯಾದ ದೇಶಗಳಲ್ಲಿ ಅಂಗಾಂಗ ದಾನಿಗಳು ಕಡಿಮೆ. ಈ ಬಗ್ಗೆ ಜನರಲ್ಲಿ ಅರಿವು ಇಲ್ಲ ಎಂಬುದನ್ನೂ ವೈದ್ಯರಿಂದ ಕೇಳಿ ತಿಳಿದುಕೊಂಡಿದ್ದೇನೆ’ ಎಂದು ವಿಜಯ್​ ದೇವರಕೊಂಡ ತಿಳಿಸಿದ್ದಾರೆ.

‘ನಾನು ನನ್ನ ಎಲ್ಲ ಅಂಗಾಂಗಳನ್ನೂ ದಾನ ಮಾಡುತ್ತೇನೆ. ಹಾಗಾಗಿ ನನ್ನನ್ನು ನಾನು ಆರೋಗ್ಯವಾಗಿ ಇಟ್ಟುಕೊಳ್ಳುತ್ತೇನೆ. ಅಂಗಾಂಗ ದಾನದ ಬಗ್ಗೆ ಎಲ್ಲರಲ್ಲೂ ಅರಿವು ಬೆಳೆಯಬೇಕು. ಪ್ರತಿಯೊಬ್ಬರೂ ಈ ಮಹತ್ವದ ದಾನಕ್ಕೆ ಮುಂದಾಗಬೇಕು’ ಎಂದು ವಿಜಯ ದೇವರಕೊಂಡ ಹೇಳಿದ್ದಾರೆ.

ಇದನ್ನೂ ಓದಿ: Vijay Devarakonda | ಕೊನೆಗೂ ಪ್ರೀತಿಸಿದ ಹುಡುಗಿಯ ಹೆಸರು ರಿವೀಲ್‌ ಮಾಡಿದ ವಿಜಯ್‌ ದೇವರಕೊಂಡ!

Exit mobile version