Site icon Vistara News

Vijay Deverakonda: ಖುಷಿ ಚಿತ್ರದ ಗಳಿಕೆಯಿಂದ 1 ಕೋಟಿ ರೂ. ಫ್ಯಾನ್ಸ್‌ಗೆ ಹಂಚ್ತಾರಂತೆ ವಿಜಯ್‌ ದೇವರಕೊಂಡ!

vijay devarakonda

ಹೈದರಾಬಾದ್:‌ `ಖುಷಿ’ ಚಲನಚಿತ್ರದಿಂದ (Khushi movie) ಬಂದ ಗಳಿಕೆಯಲ್ಲಿ 1 ಕೋಟಿ ರೂಪಾಯಿಗಳನ್ನು ಅಭಿಮಾನಿಗಳಿಗೆ ಹಂಚುವುದಾಗಿ ತೆಲುಗು ನಟ ವಿಜಯ್‌ ದೇವರಕೊಂಡ (Vijay Deverakonda) ಘೋ಼ಷಿಸಿದ್ದಾರೆ. 100 ಕುಟುಂಬಗಳಿಗೆ ತಲಾ ₹ 1 ಲಕ್ಷವನ್ನು ವಿತರಿಸುವುದಾಗಿ ಅವರು ಹೇಳಿದ್ದಾರೆ.

ವಿಜಯ್ ದೇವರಕೊಂಡ ತಮ್ಮ ಖುಷಿ ಚಿತ್ರದ (khushi film) ಯಶಸ್ಸನ್ನು ಆಚರಿಸಲು ಸೋಮವಾರ ವಿಶಾಖಪಟ್ಟಣಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ಸಮಾರಂಭದಲ್ಲಿ ತಮ್ಮ ಅಭಿಮಾನಿಗಳಿಗೆ ಈ ಆಶ್ಚರ್ಯ, ಆಹ್ಲಾದದ ಸುದ್ದಿಯನ್ನು ಅವರು ಅಭಿಮಾನಿಗಳೊಂದಿಗೆ ಹಂಚಿಕೊಂಡರು. ಈ ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ವಿಜಯ್ ಜೊತೆ ಸಮಂತಾ ರುತ್ ಪ್ರಭು (Samantha ruth prabhu) ನಟಿಸಿದ್ದಾರೆ.

“ನನ್ನ ಸಂತೋಷವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಸಲುವಾಗಿ 100 ಕುಟುಂಬಗಳಿಗೆ ಒಟ್ಟು ಒಂದು ಕೋಟಿ ರೂಪಾಯಿಗಳನ್ನು ವಿತರಿಸುವುದಾಗಿ ಘೋಷಿಸುತ್ತಿದ್ದೇನೆ. ತಲಾ ಒಂದು ಲಕ್ಷ ರೂ. ಹಣ ನನ್ನ ವೈಯಕ್ತಿಕ ಖಾತೆಯಿಂದ ಬರಲಿದೆ” ಎಂದು ಅವರು ಅಭಿಮಾನಿಗಳ ಹರ್ಷೋದ್ಗಾರಗಳ ನಡುವೆ ವೇದಿಕೆಯಿಂದ ಘೋಷಿಸಿದರು. ಈ ವರ್ಷದ ಆರಂಭದಲ್ಲಿ ಅವರು ತಮ್ಮ 100 ಅಭಿಮಾನಿಗಳನ್ನು ಎಲ್ಲಾ ಖರ್ಚು-ವೆಚ್ಚ ವಹಿಸಿ ಮನಾಲಿಗೆ ಪ್ರವಾಸಕ್ಕೆ ಕಳುಹಿಸಿದ್ದರು.

ಚಿತ್ರದ ವಿರುದ್ಧದ ಫೇಕ್ ರಿವ್ಯೂ, ನೆಗೆಟಿವ್ ಕಾಮೆಂಟ್‌ಗಳ ನಡುವೆಯೂ ಖುಷಿ (Khushi cinema) ಯಶಸ್ಸಿಗೆ ಕಾರಣವಾಗಿರುವ ತಮ್ಮ ಅಭಿಮಾನಿಗಳಿಗಾಗಿ ಕೆಲಸ ಮಾಡಲು ನಿರ್ಧರಿಸಿದ್ದೇನೆ. ಅಭಿಮಾನಿಗಳ ಪ್ರೀತಿ ಎಲ್ಲವನ್ನೂ ಮೀರಿಸಿದೆ. ತಮ್ಮ ಗಳಿಕೆಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವುದಾಗಿ ಹೇಳಿದ ಅವರು, ಒಂದು ವಾರ ಅಥವಾ ಹತ್ತು ದಿನಗಳಲ್ಲಿ ಮೊತ್ತವನ್ನು 100 ಕುಟುಂಬಗಳಿಗೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಖುಷಿ ₹50 ಕೋಟಿ ಬಜೆಟ್‌ನಲ್ಲಿ ತಯಾರಾಗಿದೆ ಎನ್ನಲಾಗಿದೆ. ಸದ್ಯ ಅದರ ಗಳಿಕೆ ₹ 39.25 ಕೋಟಿಯಲ್ಲಿದೆ. ಇದನ್ನು ಶಿವ ನಿರ್ವಾಣ ನಿರ್ದೇಶಿಸಿದ್ದಾರೆ. ಸಚಿನ್ ಖೇಡೇಕರ್, ಶರಣ್ಯ ಪೊನ್ವಣ್ಣನ್, ಮುರಳಿ ಶರ್ಮಾ, ಲಕ್ಷ್ಮಿ ಜಯರಾಮ್ ಮತ್ತು ರೋಹಿಣಿ ಸಹ ನಟಿಸಿದ್ದಾರೆ.

ಇದನ್ನೂ ಓದಿ: Vijay Deverakonda: ಬಿರುಗಾಳಿ ಎಬ್ಬಿಸಿದ ದೇವರಕೊಂಡ ಷೇರ್ ಮಾಡಿದ ಫೋಟೋ! ಇದು ಎಂಗೆಜ್ಮೆಂಟಾ, ಹೊಸ ಸಿನ್ಮಾನಾ?

Exit mobile version