ಬೆಂಗಳೂರು: 2021ರಲ್ಲಿ ವಿಜಯ ರಾಘವೇಂದ್ರ (Vijay Raghavendra) ಅಭಿನಯದ 50ನೇ ಚಿತ್ರ ʼಸೀತಾರಾಮ್ ಬಿನೋಯ್ʼ ಎಂಬ ಕ್ರೈಂ ಥ್ರಿಲ್ಲರ್ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಗಮನ ಸೆಳೆದಿದ್ದರು. ಇದೀಗ ಮತ್ತೆ ಇನ್ನೊಂದು ವಿಭಿನ್ನ ಕಥಾ ಹಂದರದ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಹೌದು, ದೇವಿಪ್ರಸಾದ್ ಶೆಟ್ಟಿ-ವಿಜಯ ರಾಘವೇಂದ್ರ ಕಾಂಬಿನೇಷನ್‌ನ ʼಕೇಸ್ ಆಫ್ ಕೊಂಡಾಣʼ (Case Of Kondana) ಎಂಬ ಹೈಪರ್ ಲಿಂಕ್ ಇನ್ವೆಸ್ಟಿಗೇಷನ್ ಚಿತ್ರ ತೆರೆಗೆ ತರಲು ಸಿದ್ಧವಾಗಿದೆ. ಇದು ಜನವರಿ 26ರಂದು ಬಿಡುಗಡೆಯಾಗಲಿದೆ.
ಚಿತ್ರದ ಕಥೆ ಸಂಪೂರ್ಣ ಬೆಂಗಳೂರಿನಲ್ಲಿ ನಡೆಯಲಿದೆ. ಆರಂಭದಲ್ಲಿ ಮೂರು ಕಥೆಗಳು ಪ್ರಯಾಣ ಮುಂದುವರಿಸುತ್ತಾ ಕೊನೆಯಲ್ಲಿ ಹೇಗೆ ಎಲ್ಲವೂ ಒಂದು ಕಡೆ ಸೇರುತ್ತವೆ ಎನ್ನುವುದನ್ನು ಈ ಚಿತ್ರದ ಮುಖ್ಯ ಅಂಶ. ಚಿತ್ರದ ಶೇಕಡಾ 80 ಭಾಗ ಒಂದು ರಾತ್ರಿಯಲ್ಲಿ ನಡೆಯುವ ಘಟನೆ. ಬೆಂಗಳೂರಿನ ಕೊಂಡಾಣ ಎನ್ನುವ ಕಾಲ್ಪನಿಕ ಸ್ಥಳದಲ್ಲಿ ಒಂದು ರಾತ್ರಿ ನಡೆಯುವ ಘಟನೆಯಾದರೂ ಏನು ಎನ್ನುವ ಎಲ್ಲ ಪ್ರಶ್ನೆಗಳಿಗೆ ಥಿಯೇಟರ್‌ಗಳಲ್ಲಿ ಜನವರಿ 26 ಉತ್ತರ ಸಿಗಲಿದೆ. ಹಿಂದೆಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ವಿಜಯ ರಾಘವೇಂದ್ರ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಎಮೋಷನ್, ಕ್ರೈಂ, ಆ್ಯಕ್ಷನ್ ಇರುವುದರ ಜತೆಗೆ ಪ್ರೇಕ್ಷಕರನ್ನು ಹಿಡಿದು ಕೂರಿಸುವ ಚಿತ್ರಕಥೆ ಇದೆ.
ಬಹು ತಾರಾಗಣ
ನಾಯಕಿಯಾಗಿ ಭಾವನಾ ಮೆನನ್ ಕಾಣಿಸಿಕೊಂಡಿದ್ದು, ಮುಖ್ಯ ಪಾತ್ರಗಳಲ್ಲಿ ʼದಿಯಾʼ ಖ್ಯಾತಿಯ ಖುಷಿ ರವಿ, ರಂಗಾಯಣ ರಘು ಸೇರಿದಂತೆ ಖ್ಯಾತ ಕಲಾವಿದರು ಅಭಿನಯಿಸಿದ್ದಾರೆ. ʼಸೀತಾರಾಮ್ ಬಿನೋಯ್ʼಗೆ ಕೆಲಸ ಮಾಡಿದ ಬಹುತೇಕ ತಂತ್ರಜ್ಞರು ಇಲ್ಲಿಯೂ ಕೆಲಸ ಮಾಡಿದ್ದಾರೆ. ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ, ವಿಶ್ವಜಿತ್ ರಾವ್ ಛಾಯಾಗ್ರಹಣ, ಭವಾನಿ ಶಂಕರ್ ಆನೆಕಲ್ಲು ಕಲಾ ನಿರ್ದೇಶನ ಹಾಗೂ ಶಶಾಂಕ್ ನಾರಾಯಣ್ ಸಂಕಲನವಿದೆ. ʼಸಿಂಗಾರ ಸಿರಿಯೇ…ʼ ಖ್ಯಾತಿಯ ಪ್ರಮೋದ್ ಮರವಂತೆ, ವಿಶ್ವಜಿತ್ ರಾವ್ ಸಾಹಿತ್ಯವಿರುವ ಈ ಚಿತ್ರಕ್ಕೆ ಜೋಗಿ ಸಂಭಾಷಣೆ ಬರೆದಿದ್ದಾರೆ. ನಿರ್ದೇಶನದ ಒಟ್ಟಿಗೆ ದೇವಿಪ್ರಸಾದ್ ಶೆಟ್ಟಿ ಸಾತ್ವಿಕ್ ಹೆಬ್ಬಾರ್ ಜತೆ ನಿರ್ಮಾಣಕ್ಕೂ ಕೈ ಜೋಡಿಸಿದ್ದಾರೆ.
ವಿಜಯ ರಾಘವೇಂದ್ರ ಅವರ ವೃತ್ತಿ ಬದುಕಿಗೆ ಈ ಚಿತ್ರ ತಿರುವು ನೀಡಲಿದೆ ಎಂಬ ಲೆಕ್ಕಾಚಾರವಿದೆ. ವಿಜಯ ರಾಘವೇಂದ್ರ ನಟನೆಯ ಚಿತ್ರಗಳು ಇತ್ತೀಚಿನ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಅಷ್ಟೇನೂ ಸದ್ದು ಮಾಡಿರಲಿಲ್ಲ. ಹೀಗಾಗಿ ʼಕೇಸ್ ಆಫ್ ಕೊಂಡಾಣʼ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ. ಇದರ ಜತೆಗೆ ಅವರು ʼಜೋಗ್ 101ʼ, ʼಗ್ರೇ ಗೇಮ್ಸ್ʼ ಮತ್ತಿತರ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಇದನ್ನೂ ಓದಿ: Dhruva Sarja: ಜ್ಯೋತಿ ಬೆಳಗಿಸಿ, ರಾಮನ ಕೃಪೆಗೆ ಪಾತ್ರರಾಗೋಣ ಎಂದ ಧ್ರುವ ಸರ್ಜಾ!
ಇನ್ನು ಭಾವನಾ ಮೆನನ್ ಬಹಳ ದಿನಗಳ ನಂತರ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. 2021ರಲ್ಲಿ ತೆರೆಕಂಡ ʼಗೋವಿಂದಾ ಗೋವಿಂದʼ ಚಿತ್ರದ ಬಳಿಕ ಭಾವನಾ ಅಭಿನಯದ ಯಾವ ಕನ್ನಡ ಚಿತ್ರವೂ ಬಿಡುಗಡೆಯಾಗಿರಲಿಲ್ಲ. ಹೀಗಾಗಿ ʼಕೇಸ್ ಆಫ್ ಕೊಂಡಾಣʼ ಸಿನಿಮಾ ಅವರಿಗೂ ಬಹಳ ವಿಶೇಷ ಎನಿಸಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ