ಬೆಂಗಳೂರು: ʻಸೀತಾರಾಮ್ ಬಿನೋಯ್ ಕೇಸ್ ನಂ.೧೮ʼ ಚಿತ್ರದ ಸಕ್ಸಸ್ ನಂತರ ನಟ ವಿಜಯ್ ರಾಘವೇಂದ್ರ (Vijay Raghavendra) ಮತ್ತೊಂದು ಕೇಸ್ ಹಿಂದೆ ಬಿದ್ದಿದ್ದಾರೆ. ಇದೀಗ ʻಕೇಸ್ ಆಫ್ ಕೊಂಡಾಣʼ ಸಿನಿಮಾ ಚಿತ್ರೀಕರಣಕ್ಕೆ ಸಜ್ಜಾಗುತ್ತಿದ್ದು, ಇದರಲ್ಲಿಯೂ ಪೊಲೀಸ್ ಅಧಿಕಾರಿಯಾಗಿ ವಿಜಯ್ ಕಾಣಿಸಿಕೊಂಡಿದ್ದಾರೆ.
ಭಾವನಾ ಮೇನನ್ ಮತ್ತು ಖುಷಿ ಜತೆಯಾಗಿದ್ದು, ʻಸೀತಾರಾಮ್ ಬಿನೋಯ್ʼ ಚಿತ್ರದ ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಅವರೇ ಇದಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಮೂಲಕ ಮತ್ತೊಂದು ತನಿಖಾ ಥ್ರಿಲ್ಲರ್‌ನೊಂದಿಗೆ ಬಂದಿದ್ದಾರೆ.
ʻಕೇಸ್ ಆಫ್ ಕೊಂಡಾಣʼ ಒಂದು ವಿಭಿನ್ನ ಕಥಾ ಹಂದರದ ಸಿನಿಮಾ ಎಂದು ಹೇಳಿಕೊಂಡಿರುವ ನಿರ್ದೇಶಕ ದೇವಿ ಪ್ರಸಾದ್, ವಿಜಯ್ ರಾಘವೇಂದ್ರ ಪಾತ್ರವನ್ನು ಮೆಚ್ಚಿಕೊಂಡು, ಅದಕ್ಕಾಗಿ ತಯಾರಿ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಚಿತ್ರವು 09/2018 ಎಂಬ ಟ್ಯಾಗ್ ಲೈನ್ ಹೊಂದಿದೆ. ʻಕೇಸ್ ಆಫ್ ಕೊಂಡಾಣʼ ಸಿನಿಮಾದಲ್ಲಿ ವಿಜಯ ರಾಘವೇಂದ್ರ ಜತೆಗೆ ಭಾವನಾ ಮೆನನ್ ಸಹ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ದಿಯಾ ಖ್ಯಾತಿಯ ಖುಷಿ ರವಿ ವೈದ್ಯೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ | Sita Ramam Film | ಒಟಿಟಿಗೆ ಬರಲಿದೆ ದುಲ್ಕರ್ ಸಲ್ಮಾನ್ ಅಭಿನಯದ ಸೀತಾ ರಾಮಂ ಸಿನಿಮಾ!
ಸಾತ್ವಿಕ್ ಹೆಬ್ಬಾರ್ ಮತ್ತು ಅರವಿಂದ್ ಶೆಟ್ಟಿ ಜತೆಗೆ ದೇವಿಪ್ರಸಾದ್ ಸಹಯೋಗದಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ʻಕೇಸ್ ಆಫ್ ಕೊಂಡಾಣʼ ಸಿನಿಮಾಗೆ ವಿಶ್ವಜಿತ್ ರಾವ್ ಛಾಯಾಗ್ರಹಣ ಮತ್ತು ಭವಾನಿ ಶಂಕರ್ ಕಲಾ ನಿರ್ದೇಶನವಿದೆ. ಜಯಂತ್ ಕಾಯ್ಕಿಣಿ ಸಾಹಿತ್ಯವಿರುವ ಈ ಚಿತ್ರಕ್ಕೆ ಜೋಗಿ ಸಂಭಾಷಣೆ ಬರೆಯುತ್ತಿದ್ದಾರೆ. ಚಿತ್ರದ ಅಧಿಕೃತ ಲಾಂಚ್ ಸೆಪ್ಟೆಂಬರ್ 8ರಂದು ನಡೆಯಲಿದ್ದು, ಸೆಪ್ಟೆಂಬರ್ 28 ರಿಂದ ಶೂಟಿಂಗ್ ಆರಂಭವಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಇದನ್ನೂ ಓದಿ | Hoysala Movie | ಡಾಲಿ ಧನಂಜಯ ಅಭಿನಯದ ಹೊಯ್ಸಳ ಸಿನಿಮಾ ರಿಲೀಸ್ ಡೇಟ್ ಅನೌನ್ಸ್!