ಬೆಂಗಳೂರು: ಸ್ಯಾಂಡಲ್‌ವುಡ್ ನಟ ವಿಜಯ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ (spandana vijay raghavendra), ಹೃದಯಾಘಾತದಿಂದ (Heart failure) ಬ್ಯಾಂಕಾಕ್‌ನಲ್ಲಿ ಮೃತಪಟ್ಟಿದ್ದಾರೆ. ಇದು ಕನ್ನಡ ಚಿತ್ರರಂಗದ ಅಕಾಲಿಕ ಮರಣಗಳ ಪಟ್ಟಿಗೆ ಹೊಸ ಸೇರ್ಪಡೆ. ಸ್ಪಂದನಾ ನಟಿಯೂ ಆಗಿದ್ದರು. ಪುನೀತ್ ರಾಜ್‌ಕುಮಾರ್ (Puneet Rajkumar) , ಸಂಚಾರಿ ವಿಜಯ್ (Sanchari Vijay), ಚಿರಂಜೀವಿ ಸರ್ಜಾ (chiranjeevi sarja) ಮುಂತಾದವರ ಸಾವಿಗೆ ಸ್ಯಾಂಡಲ್‌ವುಡ್ (Sandalwood) ಇನ್ನೂ ಮೂಕವಾಗಿ ಶೋಕಿಸುತ್ತಲೇ ಇದೆ. ಈ ದುರಂತವೂ ಅಂತದೇ ಶೋಕವನ್ನುಂಟುಮಾಡುವಂತಿದೆ.
ಸ್ಪಂದನಾ ಸಾವಿಗೆ ದಿಡೀರ್ ಹೃದಯಸ್ತಂಭನ ಕಾರಣವೆನ್ನಲಾಗಿದೆ. ಕೋವಿಡ್ ಬಳಿಕ ಯುವಜನತೆಯಲ್ಲಿ ಹೆಚ್ಚುಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ದಿಡೀರ್ ಹೃದಯಾಘಾತ, ಹೃದಯ ವೈಫಲ್ಯಗಳು ಮತ್ತಷ್ಟು ಬಲಿ ಪಡೆದುಕೊಳ್ಳುತ್ತಿವೆ. ಹೀಗೆ ಇತ್ತೀಚೆಗೆ ಅಕಾಲಿಕವಾಗಿ ಮೃತಪಟ್ಟ ಸ್ಯಾಂಡಲ್‌ವುಡ್ ತಾರೆಯರು ಹಲವು ಮಂದಿ. ಹೀಗೆ ಹೃದಯಸ್ತಂಭನದ ಜತೆಗೆ ಅಪಘಾತ, ಲಿವರ್ ಕಾಯಿಲೆ, ಡಿಪ್ರೆಶನ್‌ಗಳಿಂದ ಮೃತಪಟ್ಟವರೂ ಇದ್ದಾರೆ.
ಪುನೀತ್ ರಾಜ್‌ಕುಮಾರ್
ಪವರ್‌ಸ್ಟಾರ್, ಯುವರತ್ನ, ಪುನೀತ್ ರಾಜ್‌ಕುಮಾರ್ ನಿಧನ ಸ್ಯಾಂಡಲ್‌ವುಡ್‌ಗೂ ಕನ್ನಡ ಸಿನಿಮಾ ಅಭಿಮಾನಿಗಳಿಗೂ ಬಿದ್ದ ತೀವ್ರ ಹೊಡೆತ. 2021ರ ಅಕ್ಟೋಬರ್ 29 ಕನ್ನಡ ಚಿತ್ರರಂಗದ ಪಾಲಿಗೆ ಕರಾಳ ದಿನ. ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ಅವರಿಗೆ ತೀವ್ರ ಹೃದಯಾಘಾತವಾಗಿ ಆಸ್ಪತ್ರೆಗೆ ಧಾವಿಸಿದ್ದರು. ಸಾಯುವಾಗ ಅಪ್ಪು ವಯಸ್ಸು 46. ಕನ್ನಡ ಸಿನಿಮಾದ ಕಣ್ಮಣಿಯಾಗಿದ್ದ ಅವರ ಹಲವು ಸಿನಿಮಾಗಳು ಆಗ ಸಾಲಿನಲ್ಲಿದ್ದವು. ಅಪ್ಪು ಅಂತಿಮದರ್ಶನಕ್ಕೆ ಸೇರಿದ ಜನಸಂದಣಿ ಒಂದು ದಾಖಲೆ.
ಚಿರಂಜೀವಿ ಸರ್ಜಾ
2009ರಲ್ಲಿ ವಾಯುಪುತ್ರ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಚಿರಂಜೀವಿ ಸರ್ಜಾ ತಮ್ಮ ದೀರ್ಘಕಾಲದ ಗೆಳತಿ ಮೇಘನಾ ರಾಜ್ ಅವರನ್ನು 2018ರಲ್ಲಿ ವಿವಾಹವಾದವರು. 2020ರಲ್ಲಿ ಮೇಘನಾ ಗರ್ಭಿಣಿಯಾಗಿ, ದಂಪತಿ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾಗಲೇ 7 ಜೂನ್ 2020ರಂದು ತೀವ್ರ ಹೃದಯ ಸ್ತಂಭನದಿಂದಾಗಿ ಚಿರು ನಿಧನರಾದರು. ಆಗ ಅವರಿಗೆ 39 ವರ್ಷ.
ಸಂಚಾರಿ ವಿಜಯ್
ಸಂಚಾರಿ ವಿಜಯ್ ನಿಧನ ಕನ್ನಡ ಚಿತ್ರರಂಗವನ್ನು ಖಿನ್ನತೆಯತ್ತ ದೂಡಿದ ಇನ್ನೊಂದು ದುರಂತ. ʼನಾನು ಅವನಲ್ಲ ಅವಳುʼ ಚಿತ್ರದ ಮೂಲಕ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡ ವಿಜಯ್, ತಮ್ಮ ಅಭಿನಯ ಪ್ರತಿಭೆಯಿಂದ ಗಮನ ಸೆಳೆಯುವುದು ಜತೆಗೆ, ಜನೋಪಕಾರ ಕಾರ್ಯಗಳಿಂದಲೂ ಮನಸ್ಸು ಗೆದ್ದಿದ್ದರು. ರಸ್ತೆ ಅಪಘಾತವೊಂದರಲ್ಲಿ ತೀರಿಕೊಂಡ ಅವರು ತಮ್ಮ ದೇಹದಾನದ ಹಲವು ಮಂದಿಗೆ ಬದುಕಿನ ಬೆಳಕು ನೀಡಿದರು.
ಬುಲೆಟ್ ಪ್ರಕಾಶ್
ಕನ್ನಡದ ಜನಪ್ರಿಯ ಹಾಸ್ಯನಟ, ಪೋಷಕ ನಟ ಮತ್ತು ಬಿಗ್ ಬಾಸ್ ಖ್ಯಾತಿಯ ಬುಲೆಟ್ ಪ್ರಕಾಶ್ ತಮ್ಮ 44ನೇ ವಯಸ್ಸಿನಲ್ಲಿ ಕಳೆದ ವರ್ಷ ನಿಧನರಾದವರು. ಬುಲೆಟ್ ಕೆಲವು ತಿಂಗಳುಗಳಿಂದ ಯಕೃತ್ತಿನ ಕಾಯಿಲೆಯಿಂದ ಬಳಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಜಯಶ್ರೀ ರಾಮಯ್ಯ
ಕನ್ನಡ ನಟಿ ಹಾಗೂ ಬಿಗ್ ಬಾಸ್ ಕನ್ನಡದ ಮಾಜಿ ಸ್ಪರ್ಧಿ ಜಯಶ್ರೀ ರಾಮಯ್ಯ ಬೆಂಗಳೂರಿನ ರಿಹ್ಯಾಬಿಲಿಟೇಶನ್ ಕೇಂದ್ರವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದರು. ವರದಿಗಳ ಪ್ರಕಾರ ಖಿನ್ನತೆಯಿಂದ ಬಳಲುತ್ತಿದ್ದ ಜಯಶ್ರೀ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು. ಜಯಶ್ರೀ ಅವರು ನಿಧನರಾದಾಗ ಅವರಿಗೆ ಸುಮಾರು 30 ವರ್ಷ ವಯಸ್ಸು.