ಬೆಂಗಳೂರು : ನಟ ಕಿಚ್ಚ ಸುದೀಪ್ ಅಭಿನಯದ ಚಿತ್ರ ʼವಿಕ್ರಾಂತ್ ರೋಣʼ (Vikrant Rona) ಪ್ರಚಾರ ಭರದಿಂದ ಸಾಗಿದೆ. ರಾಜ್ಯದ ಚಿತ್ರಮಂದಿರಗಳಂತೂ ಕಿಚ್ಚನ ಕಟೌಟ್ ಗಳಿಂದ ರಾರಾಜಿಸಲು ಸಿದ್ಧತೆ ನಡೆಸಿವೆ. ಇದರ ನಡುವೆ ವಿದೇಶಗಳಲ್ಲಿರುವ ಕನ್ನಡಿಗರಿಗೆ ಸಿಹಿ ಸುದ್ದಿಯನ್ನು ಸಿನಿಮಾ ತಂಡ ನೀಡಿದೆ.
ʻವಿಕ್ರಾಂತ್ ರೋಣʼ ಸಿನಿಮಾ ೩೦ಕ್ಕೂ ಹೆಚ್ಚು ದೇಶಗಳ 1200ಕ್ಕೂ ಅಧಿಕ ಪರದೆಗಳಲ್ಲಿ ತೆರೆಕಾಣಲಿದೆ. ಈ ಕುರಿತು ವಿತರಕರಾದ ಒನ್ ಟ್ವೆಂಟಿ 8 ಮೀಡಿಯಾ ಮತ್ತು ಕಾಸ್ಮೋಸ್ ಎಂಟರ್‌ಟೈನ್‌ಮೆಂಟ್‌ನ ಆಪರೇಷನ್ ಮುಖಸ್ಥ ಯೋಗೀಶ್ ದ್ವಾರಕೀಶ್ ಬುಂಗಾಲೆ ಮಾಹಿತಿ ನೀಡಿದ್ದಾರೆ.
ಈಗಾಗಲೇ ಯುಕೆ, ಯುಎಸ್, ಕೆನಡಾ, ಐರೋಪ್ಯ ರಾಷ್ಟ್ರಗಳು, ಆಸ್ಟ್ರೇಲಿಯಾ, ಮಲೇಷ್ಯಾ, ಸಿಂಗಾಪುರ್, ನೇಪಾಳದಲ್ಲಿ ಥಿಯೇಟರ್ ಬಿಡುಗಡೆಯಾಗುವುದು ಖಚಿತಪಟ್ಟಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ | Cinedubs Mobile App | ವಿಕ್ರಾಂತ್ ರೋಣ ಸಿನಿಮಾ ಮೂಲಕ ಬರುತ್ತಿದೆ ಸಿನಿಡಬ್ಸ್ ಆ್ಯಪ್; ಏನಿದರ ವಿಶೇಷತೆ?
ಈ ಸಿನಿಮಾ ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತಮಿಳಿನಲ್ಲಿ ಅಷ್ಟೇ ಅಲ್ಲದೆ ಅರೇಬಿಕ್, ಜರ್ಮನ್, ರಷ್ಯನ್ ಮತ್ತು ಮ್ಯಾಂಡರಿನ್ ಭಾಷೆಗಳಲ್ಲಿಯೂ ಬಿಡುಗಡೆಯಾಗುತ್ತಿದೆ.
ರೋಣನ ರುದ್ರನರ್ತನಕ್ಕೆ ರೆಡಿಯಾಗ್ತಿವೆ ಥಿಯೇಟರ್ ಅಂಗಳ
ಜುಲೈ 28ಕ್ಕೆ ವಿಕ್ರಾಂತ್ ರೋಣ ಬಿಡುಗಡೆಗೊಳ್ಳಲಿದ್ದು, ವೀರೇಶ್ ಥಿಯೇಟರ್ ಮತ್ತು ಊರ್ವಶಿ ಥಿಯೇಟರ್ ಕಿಚ್ಚನ ಕಟೌಟ್‌ನಿಂದ ರಾರಾಜಿಸಲಿವೆ. ಆನಂದ್ ಆರ್ಟ್ಸ್ ಹಾಗು ಕೃಷ್ಣ ಅವರು ನೂರಾರು ಕಟೌಟ್ಸ್ ತಯಾರಿಸುತ್ತಿದ್ದಾರೆ. ಕಳಸ ಹೊತ್ತ ಮಹಿಳೆಯರು… .ಡೊಳ್ಳು ಕುಣಿತ…ಕೇರಳದ ಚಂಡೆ ವಾಧ್ಯ ಸೇರಿದಂತ ಹಲವುನೃತ್ಯ ಕಲೆಗಳ ಪ್ರದರ್ಶನದ ಮೂಲಕ ಈ ಚಿತ್ರವನ್ನು ಬರಮಾಡಿಕೊಳ್ಳಲಾಗುತ್ತದೆ.
ಮೆಟಾವರ್ಸ್ ಅಥವಾ ಬಹು ಆಯಾಮದ ಡಿಜಿಟಲ್ ಜಗತ್ತನ್ನು ‘ಕಿಚ್ಚ ವರ್ಸ್’ ಮೂಲಕ ವಿಕ್ರಾಂತ್ ರೋಣ ಸಿನಿಮಾ ಪ್ರವೇಶಿಸಲಿದೆ. ಈ ಮೂಲಕ ಸಿನಿಮಾ ಎನ್‌ಎಫ್‌ಟಿ (NFT) ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂಬ ಮಾಹಿತಿ ಯನ್ನು ಈಗಾಗಲೇ ಚಿತ್ರ ತಂಡ ಹಂಚಿಕೊಂಡಿದೆ.
ಕಿಚ್ಚ ಸುದೀಪ್ ನಟಿಸಿರುವ ಈ ಪ್ಯಾನ್ ವರ್ಲ್ಡ್ ಸಿನಿಮಾವನ್ನು ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದು, ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗು ಇಂಗ್ಲೀಷ್ ಭಾಷೆಗೆ ಕಿಚ್ಚ ಸುದೀಪ್ ಅವರೇ ವಾಯ್ಸ್ ಡಬ್ ಮಾಡಿರುವುದು ಇನ್ನೂ ವಿಶೇಷ. ವಿಕ್ರಾಂತ್ ರೋಣ 14 ಭಾಷೆಗಳಲ್ಲಿ 3ಡಿ ರೂಪದಲ್ಲಿ ಬಿಡುಗಡೆಯಾಗಲಿದೆ. ಜುಲೈ 28ರಂದು ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.
ಇದನ್ನೂ ಓದಿ | Vikrant Rona | ಕಿಚ್ಚ ವರ್ಸ್ ಲಾಂಚ್; ಡಿಜಿಟಲ್ ಜಗತ್ತಿನಲ್ಲಿ ಕಿಚ್ಚ ಸುದೀಪ್ ಹವಾ ಶುರು