Site icon Vistara News

Virata Parvam | ಥಿಯೇಟರ್‌ನಲ್ಲಿ ಸೋತ ವಿರಾಟ ಪರ್ವಂ ಒಟಿಟಿ ಟ್ರೆಂಡಿಂಗ್‌ನಲ್ಲಿ ನಂ.1

Virata Parvam

ಬೆಂಗಳೂರು : ಬಹುಭಾಷಾ ನಟಿ ಸಾಯಿ ಪಲ್ಲವಿ ನಟನೆಯ ತೆಲುಗು ಸಿನಿಮಾ ವಿರಾಟ ಪರ್ವಂ (Virata Parvam) ಜೂನ್‌ 17 ರಂದು ಬಿಡುಗಡೆಯಾಗಿತ್ತು. ಆದರೆ ಬಾಕ್ಸ್‌ಆಫೀಸ್‌ನಲ್ಲಿ ಹೇಳಿಕೊಳ್ಳುವಷ್ಟು ಯಶಸ್ಸು ಪಡೆದಿರಲಿಲ್ಲ. ಹೀಗಾಗಿ ಸಿನಿಮಾ ಬಿಡುಗಡೆಯಾಗಿ ಕೇವಲ 15 ದಿನಕ್ಕೆ (ಜು.೧)ಕ್ಕೆ ಒಟಿಟಿಯಲ್ಲಿ ಬಿಡುಗಡೆಗೊಂಡಿತ್ತು. ಒಟಿಟಿ ಟ್ರೆಂಡಿಂಗ್‌ನಲ್ಲಿ ಮಾತ್ರ ನಂ.೧ ಸ್ಥಾನ ಪಡೆದುಕೊಂಡಿದೆ.

ನಕ್ಸಲೈಟ್‌ ಪಾತ್ರದಲ್ಲಿ ರಾಣಾ ದಗ್ಗುಪಾಟಿ ಕಾಣಿಸಿಕೊಂಡರೆ, ನಾಯಕಿಯಾಗಿ ಸಾಯಿಪಲ್ಲವಿ ಕಾಣಿಸಿಕೊಂಡಿದ್ದರು. 1990 ಸಮಯದಲ್ಲಿ ತೆಲಂಗಾಣದಲ್ಲಿ ನಡೆದ ಕೆಲವು ಸತ್ಯ ಘಟನೆಗಳನ್ನು ಆಧರಿಸಿ ಈ ಚಿತ್ರ ಮೂಡಿ ಬಂದಿತ್ತು. ವೇಣು ಉಡುಗುಲ ಅವರ ನಿರ್ದೇಶನದ ಈ ಸಿನಿಮಾವನ್ನು ರಾಣಾ ದಗ್ಗುಪಾಟಿ ಅವರೇ ತಮ್ಮ ಹೋಮ್‌ ಬ್ಯಾನರ್‌ ಮೂಲಕ ನಿರ್ಮಿಸಿದ್ದರು. ಪ್ರಿಯಾಮಣಿ, ನಂದಿತಾ ದಾಸ್‌, ಈಶ್ವರಿ ರಾವ್‌ ಮುಂತಾದ ಪ್ರತಿಭಾವಂತ ಕಲಾವಿದರು ಈ ಸಿನಿಮಾದಲ್ಲಿ ನಟಿಸಿರುವುದು ವಿಶೇಷ.

ಇದನ್ನೂ ಓದಿ | Gargi Film | ಕನ್ನಡದಲ್ಲಿ ಕೇಳಿ ಬರಲಿದೆ ನಟಿ ಸಾಯಿ ಪಲ್ಲವಿ ಧ್ವನಿ; ವಿತರಣೆಯ ಹಕ್ಕು ಪಡೆದ ಸಿಂಪಲ್‌ ಸ್ಟಾರ್‌

ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ಟ್ರೆಂಡಿಂಗ್‌ನಲ್ಲಿದೆ. ಹೆಚ್ಚು ಜನರು ಈ ಸಿನಿಮಾವನ್ನು ವೀಕ್ಷಿಸುತ್ತಿದ್ದಾರೆ. ಈ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಕುರಿತು ಸಾಯಿ ಪಲ್ಲವಿ ಆಡಿದ ಮಾತು ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ವಿರಾಟ ಪರ್ವಂ ಸೊಲು ಅನುಭವಿಸಿದೆ ಎಂದು ಬಹಳಷ್ಟು ಜನ ಹೇಳಿದ್ದರು. ಇದಕ್ಕೆ ಕ್ಯಾರೇ ಎನ್ನದೆ ಸಾಯಿ ಪಲ್ಲವಿ ಮುನ್ನುಗ್ಗುತ್ತಿದ್ದಾರೆ. ಇದೀಗ ಅವರ ಅಭಿನಯದ ಸಿನಿಮಾ ಒಟಿಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಜನ ಮನ್ನಣೆ ಪಡೆಯುತ್ತಿದೆ.

ಈ ಮಾಹಿತಿಯನ್ನು ಎಸ್‌ ಎಲ್ ವಿ ಸಿನಿಮಾಸ್ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದು, ಪ್ರೀತಿಯ ಸುತ್ತ ಸುತ್ತುವ ಈ ಸಿನಿಮಾವನ್ನು ನೋಡಿ ಎಂದು ಕೋರಿದೆ.

ಸಾಯಿ ಪಲ್ಲವಿ ಅಭಿನಯಿಸಿರುವ ಚಿತ್ರ ‘ಗಾರ್ಗಿ’ ಸಿನಿಮಾ (Gargi Film) ಜುಲೈ 15ರಂದು ಬಿಡುಗಡೆಯಾಗುತ್ತಿದೆ. ಗೌತಮ್ ರಾಮಚಂದ್ರನ್ ನಿರ್ದೇಶನದ ತಮಿಳಿನ ಈ ಚಿತ್ರವನ್ನು ಕನ್ನಡ ಮತ್ತು ತೆಲುಗಿಗೆ ಡಬ್‌ ಮಾಡಲಾಗಿದ್ದು, ಕನ್ನಡದಲ್ಲಿ ತಮ್ಮ ಪಾತ್ರಕ್ಕೆ ಸಾಯಿ ಪಲ್ಲವಿಯವರೇ ಧ್ವನಿ ನೀಡಿದ್ದಾರೆ.

ರವಿಚಂದ್ರನ್ ರಾಮಚಂದ್ರನ್, ಐಶ್ವರ್ಯ ಲಕ್ಷ್ಮೀ, ಥಾಮಸ್ ಜಾರ್ಜ್ ಹಾಗೂ ಗೌತಮ್ ರಾಮಚಂದ್ರನ್ ನಿರ್ಮಿಸಿರುವ ಈ ಚಿತ್ರಕ್ಕೆ ಗೋಗಿಂದ್ ವಸಂತ ಸಂಗೀತ ನೀಡಿದ್ದಾರೆ. ಸ್ರೈಯಂತಿ ಹಾಗೂ ಪ್ರೇಮ್ ಅಕ್ಕಟ್ಟು ಛಾಯಾಗ್ರಹಣ, ಶಫಿಕ್ ಮೊಹಮದ್ ಆಲಿ ಅವರ ಸಂಕಲನ ಈ ಚಿತ್ರಕ್ಕಿದೆ. ಸಾಯಿಪಲ್ಲವಿ, ಕಾಳಿ ವೆಂಕಟ್, ಸರವಣನ್, ಜಯಪ್ರಕಾಶ್, ಆರ್ ಎಸ್ ಶಿವಾಜಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ‌.

ಇದನ್ನೂ ಓದಿ | ನಟಿ ಸಾಯಿ ಪಲ್ಲವಿ ಕಾಶ್ಮೀರ್‌ ಫೈಲ್ಸ್‌ ಹೇಳಿಕೆ, ರಮ್ಯಾ ಬಳಿಕ ಕಿಶೋರ್‌, ಪ್ರಕಾಶ್‌ರಾಜ್‌ ಬೆಂಬಲ

Exit mobile version