ಬೆಂಗಳೂರು : ಡಾ.ವಿಷ್ಣುವರ್ಧನ್ (Vishnuvardhan) ಅವರ ಸ್ಮಾರಕವೂ ಅಭಿಮಾನ್ ಸ್ಟುಡಿಯೋದಲ್ಲಿಯೇ ಆಗಬೇಕು ಎನ್ನುವುದು ಅಸಂಖ್ಯಾತ ಅಭಿಮಾನಿಗಳ ಆಸೆಯಾಗಿತ್ತು. ಆದರೆ, ಮೈಸೂರಿಗೆ ಅದು ಸ್ಥಳಾಂತರಗೊಂಡಿದೆ. ಈ ಸಂದರ್ಭದಲ್ಲಿ ಸಮಾಧಿಯನ್ನೇ ಕಿತ್ತಹಾಕಬೇಕು ಎಂದು ಬಾಲಣ್ಣ ಕುಟುಂಬಸ್ಥರು ಕೋರ್ಟ್ ಮೊರೆ ಹೋಗಿದ್ದಾರೆ ಎಂದು ನಟ ಹಾಗೂ ವಿಷ್ಣುವರ್ಧನ್ ಅಳಿಯ ಅನಿರುದ್ಧ ಅವರು ಹೇಳಿದ್ದಾರೆ. ಈ ಕುರಿತು ಅವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
ಅನಿರುದ್ಧ ಪೋಸ್ಟ್‌ನಲ್ಲಿ ʻʻಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳು ಪೂಜೆ ಇತ್ಯಾದಿ ಮಾಡಿಕೊಂಡು ಬರಲಿ, ನಮಗೆ ಯಾವತ್ತೂ ಅಭ್ಯಂತರ ಇರಲಿಲ್ಲ, ಇರೋದೂ ಇಲ್ಲ. ಇದ್ದಿದ್ದರೆ ಅಭಿಮಾನಿಗಳಿಗೆ ಇಷ್ಟು ವರ್ಷ ಪೂಜೆ ಇತ್ಯಾದಿ ಮಾಡಿಕೊಂಡು ಬರೋದಕ್ಕೆ ಅವಕಾಶಾನೇ ಸಿಗುತ್ತಿರಲಿಲ್ಲ. ನಮ್ಮ ಅಭ್ಯಂತರ ಇಲ್ಲ ಅಂದಮೇಲೆ ನಮ್ಮ ಅನುಮತಿ ಯಾತಕ್ಕೆ? ಅನುಮತಿ ಕೊಡಬೇಕಾಗಿರೋದು ಬಾಲಣ್ಣರವರ ಮಕ್ಕಳು ಅಭಿಮಾನಿಗಳಿಗೆ. ಅಭಿಮಾನಿಗಳೇ! ಅವರ ಅನುಮತಿ ಪಡೆದುಕೊಳ್ಳಿ, ನೆನಪಿಡಿ ಅದು ಅವರ ಜಾಗ, ಎಲ್ಲಾ ಸಮಸ್ಯೆ ಬಗೆಹರಿಯತ್ತೆ. ಹಾಗೇನೆ ನಾವು ಯಾವತ್ತು ಕೂಡ ಅದು ತೆರವು ಆಗೋದಕ್ಕೆ ಬಯಸಲಿಲ್ಲ, ಬಯಸೋದೂ ಇಲ್ಲ. ಆದರೆ ಬಾಲಣ್ಣರವರ ಕುಟುಂಬದವರ ಅಪೇಕ್ಷೆ ಈಗ ಏನು? 10 ಗುಂಟೆ ಅವತ್ತು ಯಾಕೆ ಕೊಡಲಿಲ್ಲ? 6 1/2 ವರ್ಷಗಳು ಕೇಳಿ, ಕೇಳಿ, ಎಷ್ಟೇ, ಹೇಗೆೇ ಪ್ರಯತ್ನ ಪಟ್ಟರೂ, ಆಗ ಅವರು ಮನಸ್ಸು ಮಾಡಲಿಲ್ಲ, ಅಪ್ಪಾವರನ್ನ, ಅಮ್ಮಾವರನ್ನ ಅವಮಾನ ಮಾಡಿದ್ದಾರೆ. ಕೊನೆಗೆ ಸರಕಾರನೇ ಬೇರೆ ಕಡೆ ಮಾಡಿ ಅಂತ ಹೇಳಿದಮೇಲೆ ನಾವು ನಿರ್ಧಾರ ತೆಗೆದುಕೊಳ್ಳೇ ಬೇಕಾಯಿತು.…ತುಂಬಾ ನೊಂದುಕೊಂಡಿದ್ದೇವೆ. ಸಾಕಷ್ಟು ಸಂಘರ್ಷಗಳನ್ನು ಎದುರಿಸಿದ್ದೇವೆ. ಹೋರಾಡಿದ್ದೇವೆ…ನಮ್ಮ ಪ್ರಯತ್ನಗಳ ಬಗ್ಗೆ, ಶ್ರಮ, ಶ್ರದ್ಧೆ, ಪ್ರೀತಿ, ಕಾಳಜಿ ಬಗ್ಗೆ ದಯಮಾಡಿ ಪ್ರಶ್ನೆಗಳನ್ನು ಎತ್ತಬೇಡಿ ಎಂದಿದ್ದಾರೆ.
ಇದನ್ನೂ ಓದಿ | Actor Vishnuvardhan | ʻಕೋಟಿಗೊಬ್ಬʼ ಕ್ಯಾಲೆಂಡರ್ ರಿಲೀಸ್: 20 ಕಲಾವಿದರ ಕುಂಚದಲ್ಲಿ ಮೂಡಿಬಂದ ವಿಷ್ಣುವರ್ಧನ್
ʻʻಸರಕಾರ ಈಗಾಗಲೆ ಮೈಸೂರಲ್ಲಿ ಸ್ಮಾರಕ ಮಾಡಾಗಿದೆ.…ಅಲ್ಲಿ ಅಪ್ಪಾವರ ಅಸ್ಥಿಯನ್ನು ಪೂಜಾವಿಧಿಯಿಂದ ಇಟ್ಟು ಅದರ ಮೇಲೆ ಪ್ರತಿಮೆಯನ್ನು ಸ್ಥಾಪಿಸಿದ್ದೇವೆ.…ಇದೇ ತಿಂಗಳು 29ಕ್ಕೆ, ಭಾನುವಾರ ಲೋಕಾರ್ಪಣೆ ಆಗಲಿದೆ. ನಾವೂ ಅಲ್ಲಿ ಅತ್ಯಂತ ಶ್ರದ್ಧೆಯಿಂದ ನಮ್ಮ ನಮನಗಳನ್ನು ಸಲ್ಲಿಸುತ್ತೆವೆ. ಅಭಿಮಾನಿಗಳೇ! ಈ ಸ್ಮಾರಕ ನಿಮಗಾಗಿ, ನಿಮಗೋಸ್ಕರ, ಯಾವುದೇ ಕಹಿ ಭಾವನೆಗಳು ಇಟ್ಟುಕೊಳ್ಳದೇ, ಬಂದು ಸಂಭ್ರಮಿಸಿ, ಅಪ್ಪಾವರಗೆ ತಮ್ಮ ನಮನಗಳನ್ನು , ಶ್ರದ್ಧಾಂಜಲಿಯನ್ನು ಸಲ್ಲಿಸಿʼʼಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ | Actor Vishnuvardhan | ಕೊನೆಗೂ ಸಾಹಸ ಸಿಂಹ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆಗೆ ಮುಹೂರ್ತ: ಜನವರಿ 29ರಂದು ಫಿಕ್ಸ್