ಬೆಂಗಳೂರು: ‘ಕೊರೊನಾ’ ಕಂಟಕದ ಬಳಿಕ ಚಿತ್ರರಂಗದಲ್ಲಿ ಹೊಸ ಯುಗ ಆರಂಭವಾಗಿದೆ. ತಮ್ಮ ನೆಚ್ಚಿನ ನಟ-ನಟಿಯರ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳಿಗೆ ಎದುರಾಗುತ್ತಿದ್ದ ಅಡ್ಡಿ ಆತಂಕ ದೂರವಾಗಿದೆ. ಹೀಗಾಗಿಯೇ ಇಂದು ಸಾಹಸ ಸಿಂಹ ಡಾ. ವಿಷ್ಣುವರ್ಧನ್ರ ಹುಟ್ಟಿದ ದಿನವನ್ನು ಅವರ ಅಭಿಮಾನಿಗಳು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಿದರು. ಇಡೀ ರಾಜ್ಯದಲ್ಲಿ ವಿಷ್ಣುವರ್ಧನ್ ಜನ್ಮ ದಿನಾಚರಣೆ (Vishnuvardhan Birthday) ಸಂಭ್ರಮ ಮೇಳೈಸಿದ್ದರೆ, ರಾಜ್ಯ ರಾಜಧಾನಿ ಬೆಂಗಳೂರು ಸಂಪೂರ್ಣ ಸಾಹಸ ಸಿಂಹ ‘ವಿಷ್ಣು’ ಮಯವಾಗಿ ಹೋಗಿತ್ತು.
ಸಾಹಸ ಸಿಂಹ ಡಾ. ವಿಷ್ಣುವರ್ಧನ್ರ 72ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಹಲವು ದಿನಗಳ ಹಿಂದೆಯೇ ಕೋಟ್ಯಂತರ ಅಭಿಮಾನಿಗಳು ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದ್ದರು. ಈ ಬಾರಿ ಡಾ. ವಿಷ್ಣುವರ್ಧನ್ ಅವರ ಕಟೌಟ್ ಜಾತ್ರೆಗೆ ಸಿದ್ಧತೆಯೂ ನಡೆದಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದು, ಇಂದು ಅದ್ದೂರಿಯಾಗಿ ವಿಷ್ಣುವರ್ಧನ್ ಅವರ 72ನೇ ಹುಟ್ಟಿದ ಹಬ್ಬದ ಆಚರಣೆ ನೆರವೇರಿದೆ.
ಇದನ್ನೂ ಓದಿ: Ramesh Aravind Movies | ರಮೇಶ್ ಅರವಿಂದ್ ಅಭಿಮಾನಿಗಳಿಗೆ ಸಿಗಲಿದೆ ಸರ್ಪ್ರೈಸ್!
ಅಭಿಮಾನಿಗಳ ಸಾಗರ
ಇಂದು ಬೆಳಗ್ಗೆಯಿಂದಲೇ ಡಾ. ವಿಷ್ಣುವರ್ಧನ್ ಸಮಾಧಿ ಇರುವ ಅಭಿಮಾನ್ ಸ್ಟೂಡಿಯೋಗೆ ಅಭಿಮಾನಿಗಳು ಹೆಜ್ಜೆ ಹಾಕಿದ್ದರು. ನೋಡ ನೋಡುತ್ತಿದ್ದಂತೆ ಅಭಿಮಾನಿಗಳ ಸಂಖ್ಯೆ ಲೆಕ್ಕಹಾಕಲು ಸಾಧ್ಯವಾಗದಷ್ಟು ಹೆಚ್ಚಾಗಿತ್ತು. ಹೀಗೆ ಹತ್ತಾರು ಸಾವಿರ ಅಭಿಮಾನಿಗಳು ಅಭಿಮಾನ್ ಸ್ಟೂಡಿಯೋಗೆ ಬಂದು, ಡಾ. ವಿಷ್ಣುವರ್ಧನ್ ಅವರ ಸಮಾಧಿಗೆ ನಮಸ್ಕರಿಸಿ ತೆರಳಿದರು.
ಸಾಮಾಜಿಕ ಕಾರ್ಯ
ಡಾ. ವಿಷ್ಣುವರ್ಧನ್ರ ಹುಟ್ಟುಹಬ್ಬದ ಹಿನ್ನೆಲೆ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಾಮಾಜಿಕ ಕಾರ್ಯಗಳನ್ನು ವಿಷ್ಣು ದಾದಾ ಫ್ಯಾನ್ಸ್ ಮಾಡಿದರು. ರಕ್ತದಾನ, ನೇತ್ರದಾನವೂ ಸೇರಿದಂತೆ ವಿವಿಧ ಕಾರ್ಯಗಳನ್ನು ಸಾಹಸ ಸಿಂಹ ಅಭಿಮಾನಿಗಳು ಹಮ್ಮಿಕೊಂಡಿದ್ದರು. ಹಸಿದು ಬಂದಿದ್ದ ಅಭಿಮಾನಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ಹೀಗೆ ಅದ್ದೂರಿಯಾಗಿ ಡಾ. ವಿಷ್ಣುವರ್ಧನ್ ಬರ್ತ್ ಡೇ ಸೆಲೆಬ್ರೇಟ್ ಮಾಡಿದರು ವಿಷ್ಣು ದಾದ ಫ್ಯಾನ್ಸ್.
ಕಟೌಟ್ ಅಬ್ಬರ
ಮೊದಲೇ ಹೇಳಿದಂತೆ ಈ ಬಾರಿ ಡಾ. ವಿಷ್ಣುವರ್ಧನ್ ಜನ್ಮದಿನಾಚರಣೆಗಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು ಅಭಿಮಾನಿಗಳು. 50ಕ್ಕೂ ಹೆಚ್ಚು ಕಟೌಟ್ಗಳನ್ನ ಡಾ. ವಿಷ್ಣುವರ್ಧನ್ ಸಮಾಧಿ ಇರುವ ಅಭಿಮಾನ್ ಸ್ಟೂಡಿಯೋ ಬಳಿ ಅಭಿಮಾನಿಗಳು ಸ್ಥಾಪಿಸಿದ್ದರು. ಪ್ರತಿ ಕಟೌಟ್ ಕೂಡ ಸ್ಪೆಷಲ್ ಆಗಿತ್ತು. ಪ್ರತಿಯೊಂದು ಕಟೌಟ್ನಲ್ಲೂ ಡಾ. ವಿಷ್ಣುವರ್ಧನ್ ಅಭಿನಯದ ಒಂದೊಂದು ಸಿನಿಮಾ ಕ್ಯಾರೆಕ್ಟರ್ ಸೆಲೆಕ್ಟ್ ಮಾಡಲಾಗಿತ್ತು.
ಡಾ. ವಿಷ್ಣುವರ್ಧನ್ ಅಭಿನಯದ, ಕನ್ನಡಿಗರು ಎಂದೆಂದಿಗೂ ಮರೆಯಲು ಸಾಧ್ಯವಾಗದ ಸಿನಿಮಾಗಳ ಕಟೌಟ್ಗಳು ಮಿಂಚುತ್ತಿದ್ದವು. ಯಜಮಾನ, ಸಾಹಸ ಸಿಂಹ, ಕೃಷ್ಣ ನೀ ಬೇಗನೆ ಬಾರೋ, ಜಯಸಿಂಹ, ವೀರಪ್ಪ ನಾಯಕ, ಜನ ನಾಯಕ, ದಾದ, ಕೃಷ್ಣ ರುಕ್ಮಿಣಿ, ಹೃದಯ ಗೀತೆ, ದೇವ, ಮತ್ತೆ ಹಾಡಿತು ಕೋಗಿಲೆ, ಲಯನ್ ಜಗಪತಿ ರಾವ್, ರಾಜಾಧಿರಾಜ, ರಾಯರು ಬಂದರು ಮಾವನ ಮನೆಗೆ, ಮಹಾಕ್ಷತ್ರಿಯ, ಮುತ್ತಿನ ಹಾರ, ದಣಿ, ಜನನಿ, ಜನ್ಮಭೂಮಿ, ವೀರಪ್ಪ ನಾಯಕ, ಸೂರ್ಯ ವಂಶ, ಸೂರಪ್ಪ, ದಿಗ್ಗಜರು, ಕೋಟಿಗೊಬ್ಬ, ಸಿಂಹಾದ್ರಿಯ ಸಿಂಹ, ರಾಜ ನರಸಿಂಹ, ಆಪ್ತಮಿತ್ರ, ಸಾಹುಕಾರ, ವರ್ಷ, ಕರ್ನಾಟಕ ಸುಪುತ್ರ, ಹಲೋ ಡ್ಯಾಡಿ, ಅಪ್ಪಾಜಿ, ಸ್ಕೂಲ್ ಮಾಸ್ಟರ್, ಆಪ್ತರಕ್ಷಕ, ಚಿನ್ನದಂತ ಮಗ, ವಿಷ್ಣುಸೇನಾ, ನಾಗರಹಾವು ಸೇರಿದಂತೆ ಇನ್ನೂ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳ ಕಟೌಟ್ಗಳು ರಾರಾಜಿಸಿದವು.
ಒಟ್ಟಾರೆ ಹೇಳುವುದಾದರೆ ಸಾಹಸ ಸಿಂಹ ವಿಷ್ಣುವರ್ಧನ್ ಹುಟ್ಟುಹಬ್ಬಕ್ಕಾಗಿ ಅಭಿಮಾನಿಗಳು ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ. ಅಭಿಮಾನ್ ಸ್ಟುಡಿಯೋಕ್ಕೆ ಭೇಟಿ ಕೊಟ್ಟಿದ್ದ ಅಭಿಮಾನಿಗಳ ಸಾಗರ ವಿಷ್ಣುವರ್ಧನ್ ಅವರ ಸಮಾಧಿಗೆ ನಮನ ಸಲ್ಲಿಸಿದರು. ಸಾಮಾಜಿಕ ಕಾರ್ಯಕ್ರಮಗಳ ಮೂಲಕವೂ ವಿಷ್ಣು ದಾದಾ ಫ್ಯಾನ್ಸ್ ಗಮನ ಸೆಳೆದಿದ್ದು ವಿಶೇಷ.
ಇದನ್ನೂ ಓದಿ: Sudeep Puneeth | ಸುದೀಪ್-ಪುನೀತ್ ಬಾಂಧವ್ಯಕ್ಕೆ ಸಾಕ್ಷಿಯಾಯ್ತು ಹುಟ್ಟುಹಬ್ಬ ಸಂಭ್ರಮ