ಬೆಂಗಳೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ (Dr Vishnuvardhan) ಅವರ 14ನೇ ವರ್ಷದ ಪುಣ್ಯ ತಿಥಿಯನ್ನು ಇಂದು (ಡಿ.30 )ಅವರ ಅಂತ್ಯಕ್ರಿಯೆ ನಡೆದ ಅಭಿಮಾನ್ ಸ್ಟುಡಿಯೋದಲ್ಲಿ ಫ್ಯಾನ್ಸ್ ಪೂಜೆ ನೆರವೇರಿಸಿದ್ದಾರೆ. ರಕ್ತದಾನ, ನೇತ್ರದಾನ, ಅನ್ನದಾನ, ಪೂಜೆ ಮತ್ತು ದೀಪೋತ್ಸವದಂತಹ ವಿಶೇಷ ಕಾರ್ಯಕ್ರಮಗಳು ಪುಣ್ಯ ಸ್ಮರಣೆ ಅಂಗವಾಗಿ ಏರ್ಪಾಡು ಮಾಡಲಾಗಿತ್ತು. ಪುಣ್ಯ ಸಮಾಧಿಗಾಗಿ ಅಭಿಮಾನಿಗಳು ಹೋರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಮಾಧಿ ಬಳಿ ಯಾವುದೇ ಸಮಸ್ಯೆ ಆಗಬಾರದು ಎಂದು ಪೊಲೀಸ್ ಬಂದೋಬಸ್ತ್ ಇತ್ತು. ಒಂದು ಕೆಎಸ್ಆರ್ಪಿ ತುಕಡಿ ಸ್ಥಳದಲ್ಲಿದೆ. ಅಭಿಮಾನಿಗಳು ಗಲಾಟೆ ಹಾಗು ಪ್ರತಿಭಟನೆ ಮಾಡಬಾರದು ಎನ್ನುವ ಕಾರಣಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು.
ವಿಷ್ಣುವರ್ಧನ್ ಅಂತ್ಯಕ್ರಿಯೆ ಮಾಡಿದ್ದ ಶ್ರೀಧರ್ ಅವರು ಮಾತನಾಡಿ ʻʻಸಮಾಧಿ ಇಲ್ಲೇ ಆಗಬೇಕು ಎಂದು ಕೋರ್ಟ್ನಲ್ಲಿ ಕೇಸ್ ನಡೆಯುತ್ತಿದೆ. ಅವರು ಹತ್ತು ಗುಂಟೆ ಜಾಗ ಕೊಡಬೇಕು. ಅಣ್ಣನ ಅಂತ್ಯಸಂಸ್ಕಾರ ಇಲ್ಲೇ ಆಗಿರೋದು. ಹೀಗಾಗಿ ಅವರು ಇಲ್ಲೇ ಇರಬೇಕು. ಎಲ್ಲಾ ಅಭಿಮಾನಿಗಳು ಇದಕ್ಕಾಗಿ ಒಟ್ಟಾಗಿ ಕೆಲಸ ಮಾಡಬೇಕು’ ಎಂದು ಶ್ರೀಧರ್ ಹೇಳಿದರು.
ವಿಷ್ಣು ಅಭಿಮಾನಿ ವೀರಕಪುತ್ರ ಶ್ರೀನಿವಾಸ್ ಅವರಿಂದ ಸಮಾಧಿಗೆ ಪೂಜೆ ಸಲ್ಲಿಸಲಾಗಿದೆ. ನಟ ನಿರ್ದೆಶಕ ರಘುರಾಮ್ ಮಾತನಾಡಿ ʻಈ ನಾಡು ಕಂಡಂತಹ ಶ್ರೇಷ್ಟ ನಟರಲ್ಲಿ ವಿಷ್ಣು ಅಪ್ಪಾಜಿ ಕೂಡ ಒಬ್ಬರು. ಆದರೆ ಅವರ ಸ್ಮಾರಕ ವಿಚಾರದಲ್ಲಿ ಬಹಳ ನೋವಿನ ವಿಚಾರ. ನಾನು ಮೊದಲು ಸಿನಿಮಾ ಮಾಡಿದಾಗ ಅವರೇ ನನಗೆ ಆಶೀರ್ವಾದ ಮಾಡಿದ್ದರು. ಅವರಿಂದಲೇ ನಾನು ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡೆ. ಆದರೆ ಅವರಿಗೆ ನೀಡಬೇಕಾದ ಸ್ಥಾನ ಮಾನ ಮಾತ್ರ ಸಿಗಲೇ ಇಲ್ಲ. ಕೇವಲ ಹತ್ತುಗುಂಟೆ ಜಾಗಕ್ಕಾಗಿ ಇಷ್ಟು ಹೋರಾಟ ಮಾಡಬೇಕಾಗಿದೆ. ಮೈಸೂರಿನಲ್ಲಿ ಅವರ ಸ್ಮಾರಕ ಇರಲಿ. ಆದರೆ ಅವರ ಪಂಚಭೂತಗಳಲ್ಲಿ ಲೀನವಾದ ಸ್ಥಳದಲ್ಲಿ ಸಮಾಧಿ ಆಗಬೇಕು. ಆ ನಿಟ್ಟಿನಲ್ಲಿ ನಮ್ಮ ಹೋರಾಟ ಮುಂದುವರಿಯುತ್ತೆʼʼ ಎಂದರು.
ಇದನ್ನೂ ಓದಿ: Dr Vishnuvardhan: ವಿಷ್ಣು ಪುಣ್ಯಭೂಮಿ; ಬೇಡಿಕೆ ಈಡೇರಿಸುವ ಭರವಸೆ ನೀಡಿದ ಡಿಕೆಶಿ
ವೀರಕಪುತ್ರ ಶ್ರೀನಿವಾಸ್ ಮಾತನಾಡಿ ʻʻ14 ವರ್ಷಗಳಾದರೂ ನಮ್ಮ ಅಪ್ಪಾಜಿಗೆ ಸಿಗಬೇಕಾದ ಗೌರವ ಸಿಗಲೇ ಇಲ್ಲ. ಆದರೂ ನಮ್ಮ ಹೋರಾಟವನ್ನು ಬಿಡುವ ಮಾತೇ ಇಲ್ಲ. ಕನ್ನಡ ನಾಡಿನ ಸಿನಿಮಾ ರಂಗಕ್ಕೆ ವಿಷ್ಣು ಕೊಡುಗೆ ಅಪಾರ. ಆದರೆ ಅವರಿಗೆ ಸಿಗಬೇಕಾದ ಗೌರವ ಸಿಗದೇ ಇರುವುದು ನಿಜಕ್ಕೂ ದುರಂತ. ವಿಷ್ಣುವರ್ಧನ್ ಅವರ ಸಮಾಧಿಯನ್ನು ಇಲ್ಲಿಂದ ಕಿತ್ತಾಕಲು ಎಷ್ಟು ಪ್ರಯತ್ನ ಮಾಡಬೇಕೋ ಅಷ್ಟು ಪ್ರಯತ್ನವನ್ನು ಬಾಲಣ್ಣ ಕುಟುಂಬ ಮಾಡುತ್ತಲೇ ಬಂದಿದೆ. ಈಗಾಗಲೇ ಸಮಾಧಿ ಸುತ್ತ ಬ್ಯಾರಿಕೇಡ್ ಹಾಕಿ ತಮ್ಮ ವಿಕೃತ ಮನಸ್ಥಿತಿ ತೋರಿಸಿದ್ದಾರೆ. ಬಾಲಣ್ಣನವರ ಸಾಧನೆ ಮೆಚ್ಚಿ ಅಂದಿನ ಸರ್ಕಾರ 20 ಎಕರೆ ಜಮೀನನ್ನು ದಾನವಾಗಿ ನೀಡಿತ್ತು. ಆದರೆ ಅವರ ಕುಟುಂಬಸ್ತರು ಈಗಾಗಲೇ 10 ಎಕರೆ ಜಮೀನನ್ನು ಲೇಔಟ್ ಮಾಡಿ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸಿದ್ದಾರೆ. ಬಾಲಣ್ಣನವರ ಸಮಾಧಿಯನ್ನ ಅವರ ಮೊಮ್ಮಕ್ಕಳೇ ಹೊಡೆದು ಹಾಕಿದ್ದಾರೆ.. ಅದೇ ಜಾಗದಲ್ಲಿ ಮಾಲ್ ಕಟ್ಟಲು ಪ್ಲಾನ್ ಮಾಡಿದ್ದಾರಂತೆ. ಇದು ಅವರ ಮೊಮ್ಮಕ್ಕಳು ಬಾಲಣ್ಣನಿಗೆ ಕೊಡೋ ಗೌರವ. ಅವರ ತಾತನ ಸಮಾಧಿಯನ್ನೇ ಬಿಡದ ಇವರು ವಿಷ್ಣುವರ್ಧನ್ ಅವರ ಸಮಾಧಿಯನ್ನು ಹೊಡೆಯದೇ ಬಿಡ್ತಾರಾ..? ಆದರೆ ಆ ರೀತಿ ಆಗಲು ನಾವು ಯಾವುದೇ ಕಾರಣಕ್ಕೂ ನಾವು ಬಿಡಲ್ಲ. ಅಂತಹ ಸ್ಥಿತಿ ಬಂದರೆ ಎಂತಹ ಉಗ್ರ ಹೋರಾಟಕ್ಕೂ ನಾವು ಸಿದ್ಧʼʼ ಎಂದರು.