Site icon Vistara News

Vishwa Kannada Habba | ದುಬೈನಲ್ಲಿ ಪಸರಿಸಲಿದೆ ಕನ್ನಡದ ಕಂಪು: ನ.19ರಂದು `ವಿಶ್ವ ಕನ್ನಡ ಹಬ್ಬʼ

Vishwa Kannada Habba

ಬೆಂಗಳೂರು : ಕರ್ನಾಟಕ ಪ್ರೆಸ್‌ ಕ್ಲಬ್‌ ಕೌನ್ಸಿಲ್‌ ಹಾಗೂ ಕನ್ನಡಿಗರು ದುಬಾಯಿ ಸಹಯೋಗದಲ್ಲಿ ಪ್ರಪ್ರಥಮ ಬಾರಿಗೆ ದುಬೈನಲ್ಲಿ ‘ವಿಶ್ವ ಕನ್ನಡ ಹಬ್ಬ’ (Vishwa Kannada Habba) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನವೆಂಬರ್ 19ರಂದು ದುಬೈನ ಶೇಕ್ ರಶೀದ್ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಈಗಾಗಲೇ ಈ ಬಾರಿಯ ‘ವಿಶ್ವ ಕನ್ನಡ ಹಬ್ಬ’ ಲೋಗೋ ಬಿಡುಗಡೆಯಾಗಿದ್ದು ಕಾರ್ಯಕ್ರಮದ ಸಿದ್ಧತೆಯೂ ಭರದಿಂದ ನಡೆಯುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರಾದ ಟಿ. ಶಿವಕುಮಾರ ನಾಗರ ನವಿಲೆ ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. ಪತ್ರಿಕಾಗೋಷ್ಠಿಯಲ್ಲಿ ನಟಿ ಪ್ರೇಮ, ನಟ ವಸಿಷ್ಠ ಸಿಂಹ ಹಾಗೂ ಇತರರು ಪಾಲ್ಗೊಂಡಿದ್ದರು.

ನವೆಂಬರ್ 19ರಂದು ದುಬೈನಲ್ಲಿ ನಡೆಯುವ ‘ವಿಶ್ವ ಕನ್ನಡ ಹಬ್ಬ’ ವಿಶೇಷ ಕಾರ್ಯಕ್ರಮದಲ್ಲಿ ಮೈಸೂರು ಮಹಾರಾಜರಾದ ಯದುವೀರ ಚಾಮರಾಜ ಒಡೆಯರ್, ನಟ ಶಿವರಾಜ್ ಕುಮಾರ್, ಮಹರ್ಷಿ ಡಾ.ಆನಂದ್ ಗುರೂಜಿ, ನಟಿಯರಾದ ಭವ್ಯ, ಸುಧಾರಾಣಿ, ಶ್ರುತಿ, ಪ್ರೇಮಾ, ಮೇಘ ಶೆಟ್ಟಿ, ನಟ ವಿಜಯ ರಾಘವೇಂದ್ರ ಮತ್ತು ಮುಖ್ಯ ಅತಿಥಿಯಾಗಿ ನಟ ವಸಿಷ್ಠ ಸಿಂಹ ಪಾಲ್ಗೊಳ್ಳುತ್ತಿದ್ದಾರೆ.

ಇದನ್ನೂ ಓದಿ | Kannada New Film | ಜೊತೆ ಜೊತೆಯಲಿ ಧಾರಾವಾಹಿ ಟೈಟಲ್‌ ಟ್ರ್ಯಾಕ್‌ ರೈಟರ್‌ ಇದೀಗ ಡೈರೆಕ್ಟರ್‌: ಸಿನಿಮಾ ಯಾವುದು?

Vishwa Kannada Habba

ನಟ ವಸಿಷ್ಠ ಸಿಂಹ ಮಾತನಾಡಿ ʻʻನಾವೆಲ್ಲರೂ ಕನ್ನಡ ಬಳಸಬೇಕು ಎಂದು ಹೇಳುತ್ತೇವೆ. ಆದರೆ ಅದಕ್ಕಾಗಿ ಹಲವಾರು ಜೀವಗಳು ನಿರಂತರವಾಗಿ ದುಡಿದಿದ್ದಾರೆ. ಅವರನ್ನೆಲ್ಲ ಗುರುತಿಸಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಗೌರವ ನೀಡುತ್ತಿದೆ. ಈ ಕನ್ನಡ ಹಬ್ಬಕ್ಕೆ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಂತಾರಾಷ್ಟ್ರೀಯ ರಾಯಭಾರಿಯಾಗಿ ನನ್ನನ್ನು ಭಾಗವಹಿಸಬೇಕು ಎಂದು ಹೇಳಿದಾಗ ತುಂಬಾ ಹಿರಿಮೆ ಅನಿಸಿತು. ಈ ರೀತಿಯ ಕಾರ್ಯಕ್ರಮದಿಂದ ವಿಚಾರಗಳ ವಿನಿಮಯ ಆಗುತ್ತದೆ. ಈ ಕಾರ್ಯಕ್ರಮ ಬಹಳ ವಿಶೇಷವಾಗಿರುತ್ತದೆ ಎಂದು ನಂಬಿದ್ದೇನೆ. ಎಲ್ಲರೂ ನವೆಂಬರ್ 1ಕ್ಕೆ ಮಾತ್ರ ಕನ್ನಡಿಗರಾಗದೇ ನಂಬರ್ ಒನ್ ಕನ್ನಡಿಗರಾಗೋಣʼʼ ಎಂದು ತಿಳಿಸಿದರು.

ʻʻದುಬೈನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ತುಂಬಾ ಖುಷಿಯ ವಿಚಾರ. ಹಲವು ಕಲಾವಿದರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಕ್ಕಾಗಿ ಶಿವಕುಮಾರ್ ಅವರಿಗೆ ಧನ್ಯವಾದʼʼ ಎಂದು ನಟಿ ಪ್ರೇಮ ತಿಳಿಸಿದರು.

ಏನೆಲ್ಲ ವಿಶೇಷತೆ ಇರಲಿದೆ?
ʻʻಅಂತಾರಾಷ್ಟ್ರೀಯ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಕನ್ನಡ ಹಬ್ಬ ಕಾರ್ಯಕ್ರಮ ಮಾಡಲಾಗುತ್ತಿದೆ. ರಾಜ್ಯಾದ್ಯಂತ ಇರುವ ಬೇರೆ ಬೇರೆ ಕಲೆಯ ಆಯ್ದ ಕಲಾವಿದರನ್ನು ದುಬೈಗೆ ಕರೆದುಕೊಂಡು ಹೋಗಿ ನಮ್ಮ ಕಲೆಯನ್ನು ಅಲ್ಲಿ ಪರಿಚಯಿಸುವ ಹಾಗೂ ಅವರನ್ನು ಗೌರವಿಸುವ ಉದ್ದೇಶವನ್ನು ಇದು ಒಳಗೊಂಡಿದೆ. ಕನ್ನಡವನ್ನು ವಿಶ್ವದಾದ್ಯಂತ ಪಸರಿಸುವ ಉದ್ದೇಶ ಹೊಂದಿರುವ ಈ ಕಾರ್ಯಕ್ರಮ ಮೂಲ ಕನ್ನಡಿಗರು ಹಾಗೂ ಅನಿವಾಸಿ ಕನ್ನಡಿಗರ ಬೆಸುಗೆಯಾಗಿದೆ. ಹಿರಿಯ ಪತ್ರಕರ್ತರಿಗೆ ಹಾಗೂ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆʼʼ ಎಂದು ಕರ್ನಾಟಕ ಪ್ರೆಸ್‌ ಕ್ಲಬ್‌ ಕೌನ್ಸಿಲ್ ಅಧ್ಯಕ್ಷರಾದ ಡಾ. ಟಿ. ಶಿವಕುಮಾರ ನಾಗರ ನವಿಲೆ ಕಾರ್ಯಕ್ರಮದ ಬಗ್ಗೆ ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ | Avatar: The Way of Water | ಅವತಾರ್‌-2 ಸಿನಿಮಾ ಬಗ್ಗೆ ಕನ್ನಡಿಗರ ಆಕ್ರೋಶ: ಶುರುವಾಯ್ತು ಬಾಯ್ಕಾಟ್‌ ಅಭಿಯಾನ!

Exit mobile version