ಬೆಂಗಳೂರು: ಎಸ್.ಎಲ್. ಭೈರಪ್ಪ (SL Bhyrappa) ಅವರ ‘ಪರ್ವ’ ಕಾದಂಬರಿ (Parva) ಸಿನಿಮಾ ರೂಪ ಪಡೆದುಕೊಳ್ಳುತ್ತಿದೆ. ಆಧುನಿಕ ಮಹಾಭಾರತ ಎಂದೇ ಈ ಕಾದಂಬರಿ ಜನಪ್ರಿಯ. ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಇದನ್ನು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಇಂದು (ಅಕ್ಟೋಬರ್ 21) ಬೆಂಗಳೂರಿನಲ್ಲಿ ಈ ಸಿನಿಮಾದ ಟೈಟಲ್ ಲಾಂಚ್ ಮಾಡಲಾಗಿದೆ. ನಟ ಪ್ರಕಾಶ್ ಬೆಳವಾಡಿ, ಬಾಲಿವುಡ್ ನಟಿ ಪಲ್ಲವಿ ಜೋಶಿ ಸೇರಿದಂತೆ ಹಲವರು ಭಾಗಿಯಾಗಿದ್ದರು.
ವಿವೇಕ್ ಅಗ್ನಿಹೋತ್ರಿ ಮಾತನಾಡಿ ʻʻಭೈರಪ್ಪನವರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಪರ್ವ ಕಾದಂಬರಿಗೆ ಸಿನಿಮಾ ಟಚ್ ಕೊಡಲು ನಿರ್ಧರಿಸಿದ್ದೇನೆ. ಹಿಂದಿ ಹಾಗೂ ಕನ್ನಡ ಭಾಷೆಯಲ್ಲಿ ಪರ್ವ ಸಿನಿಮಾ ಮೂಡಿಬರಲಿದೆ. ಸಾಧ್ಯವಾದ್ರೆ ಮುಂದಿನ ದಿನಗಳಲ್ಲಿ ಸ್ಪ್ಯಾನಿಷ್ ಹಾಗು ಇಂಗ್ಲಿಷ್ ಭಾಷೆಯಲ್ಲಿ ಪರ್ವ ರಿಲೀಸ್ ಆಗಲಿದೆ. ಈ ಸಿನಿಮಾ ಮಾಡಲು ನನಗೆ ಚಾಲೆಂಜ್ ಎಂದು ಅನ್ನಿಸಿಲ್ಲ. ಈ ಕಾದಂಬರಿಯನ್ನು ಸಿನಿಮಾವಾಗಿ ತೆರೆಗೆ ತರುವುದು ನನ್ನ ಕನಸಾಗಿತ್ತು. ಮಹಾಭಾರತದಲ್ಲಿ ನಾವು ಕೇಳದೆ ಇರುವಂತಹ ವಿಷಯಗಳನ್ನ ಬರೆದಿದ್ದಾರೆʼʼ ಎಂದರು.
ಎಸ್ ಎಲ್ ಭೈರಪ್ಪ ಮಾತನಾಡಿ ʻʻ34ವರ್ಷಗಳ ಹಿಂದೆ ಇದೇ ಹಾಲ್‌ನಲ್ಲಿ ಮಹಾಭಾರತವನ್ನು ಸಿನಿಮಾವಾಗಿ ನೋಡಿದ್ದೆ. ಪರ್ವ ನಾಟಕವನ್ನು ಪ್ರಕಾಶ್ ಬೆಳವಾಡಿ ನಿರ್ದೇಶಿಸಿ ನಟನೆ ಸಹ ಮಾಡಿದ್ದರು. ನಿರ್ದೇಶಕ ವಿವೇಕ್ ಮಾಡಿರುವ ಸಿನಿಮಾಗಳು ಸಕ್ಸಸ್ ಫುಲ್ ಆಗಿವೆ. ಭಾರತಕ್ಕೆ ಮಾತ್ರ ಪರ್ವ ಸಿನಿಮಾ ಸೀಮಿತವಾಗಬಾರದು. ಕನ್ನಡ, ಹಿಂದಿ ಮಾತ್ರವಲ್ಲದೆ ಆಂಗ್ಲ ಭಾಷೆಯಲ್ಲೂ ನನ್ನ ಕಾದಂಬರಿ ಸಿನಿಮಾವಾಗಿ ತೆರೆಗೆ ಬರಬೇಕು. ಪರ್ವ ಕಾದಂಬರಿ ಸಿನಿಮಾವಾಗಿ ಮೂಡಿಬರಲು ವಿವೇಕ್ ಅವರಿಗೆ ನನ್ನ ಒಪ್ಪಿಗೆ ಹಾಗೂ ಹಾರೈಕೆಯಿದೆ. ಪರ್ವ ಕಾದಂಬರಿಯನ್ನು ಈ ಮುಂಚೆ ಸಿನಿಮಾವಾಗಿ ಮಾಡುತ್ತೇವೆ ಎಂದು ಯಾರು ಬಂದು ಕೇಳಿಲ್ಲ. ಆ ಧೈರ್ಯ ಯಾರಿಗೂ ಇರಲಿಲ್ಲʼʼ ಎಂದರು.
ಇದನ್ನೂ ಓದಿ: Vivek Agnihotri: ಆಸ್ಕರ್‌ನಿಂದ ವಿಶೇಷ ಗೌರವ ಪಡೆದ ʻದಿ ವ್ಯಾಕ್ಸಿನ್ ವಾರ್ʼ!
ಸ್ಕ್ರಿಪ್ಟ್ ಇನ್ನಷ್ಟೇ ಕೆಲಸಗಳು ಶುರು ಆಗಬೇಕಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿತು. ಪ್ರಕಾಶ್ ಬೆಳವಾಡಿ ಅವರು ‘ಪರ್ವ’ ಕೃತಿಯನ್ನು ಆಧರಿಸಿದ ಇಂಗ್ಲಿಷ್ ನಾಟಕಕ್ಕೆ ನಿರ್ದೇಶನ ಮಾಡಿದ್ದಾರೆ. ಇದು 8 ಗಂಟೆ ಅವಧಿಯ ದೀರ್ಘ ನಾಟಕ. ಇಂದು (ಅಕ್ಟೋಬರ್ 21) ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಈ ನಾಟಕ ಪ್ರದರ್ಶನ ಆಗುತ್ತಿದೆ.