-ಅಜಯ್ ಗಾಯತೊಂಡೆ, ಬೆಂಗಳೂರು
“ಯುಐʼ ಕತ್ತಲೆ ಲೋಕ ಸೃಷ್ಟಿಸಿ ಅಭಿಮಾನಿಗಳಲ್ಲಿ ಕೌತುಕ ಮೂಡಿಸಿತ್ತು. ರಿಯಲ್ ಸ್ಟಾರ್ ಉಪೇಂದ್ರ ಕೊನೆಗೂ ಫಸ್ಟ್‌ಲುಕ್ ಬಿಡುಗಡೆ ಮಾಡುವ ಮೂಲಕ ಸಿನಿಮಾದ ಝಲಕ್ ಹಾಗೂ ಸಿನಿಮಾದೊಳಗಿನ ಜಗತ್ತನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದಾರೆ.
ಹೌದು. ರಿಯಲ್ ಸ್ಟಾರ್ ನಿರ್ದೇಶನದ ಸಿನಿಮಾ ಅಂದ್ಮೇಲೆ ನಿರೀಕ್ಷೆ ಕೊಂಚ ಹೆಚ್ಚೇ ಅಲ್ವ? ಏಳು ವರ್ಷಗಳ ನಂತರ ನಿರ್ದೇಶಕನ ಕ್ಯಾಪ್ ಧರಿಸುತ್ತಿರುವ ಅವರ ಬಹುನಿರೀಕ್ಷಿತ ಚಿತ್ರ ಯುಐ. ಮೂರು ನಾಮದ ಶೈಲಿಯಲ್ಲಿ ಶೀರ್ಷಿಕೆ ಇಟ್ಟು ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದರು. ಮುಖ್ಯವಾಗಿ ಈ ಸಿನಿಮಾಗೆ ನಾಯಕಿ ಯಾರು? ತಾರಾಗಣ, ಸಂಗೀತ ಸಂಯೋಜನೆ, ಸಿನಿಮಾ ಮೂಲಗಳ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ. ಇದರ ಕುರಿತ ಮಹತ್ವದ ಅಂಶಗಳು ಇಲ್ಲಿವೆ.
ಇವ್ರೇ ನೋಡಿ ಈ ಸಿನಿಮಾದ ನಾಯಕಿ!
ಗಾಂಧಿನಗರ ಹಾಗೂ ಇಡೀ ಸಿನಿಮಾರಂಗದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿರುವ ಸುದ್ದಿ ಯುಐ, ಟಾಕ್ಸಿಕ್, ಮ್ಯಾಕ್ಸ್ ಮಾರ್ಟಿನ್ ಇತ್ಯಾದಿ. ಯುಐಗೆ ನಾಯಕಿ ಯಾರು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಪರಭಾಷೆಯ ನಟಿಯನ್ನು ಕರೆ ತರುತ್ತಾರೆ ಎಂಬ ಉಹಾಪೋಹಗಳಿಗೂ ತೆರೆ ಬಿದ್ದಿದೆ. ಈಗ ಈ ಸಿನಿಮಾಗೆ ರೀಷ್ಮಾ ನಾಣಯ್ಯ ನಾಯಕಿ ಪಾತ್ರದಲ್ಲಿ ಅಭಿನಯಿಸಿದ್ದಾರೆ ಎಂಬ ಸಂಗತಿ ಹೊರಬಿದ್ದಿದೆ.
ಇನ್ನು ಬಿಡುಗಡೆಯಾದ ಟೀಸರ್‌ನಲ್ಲಿ ಕೆಲವು ಪಾತ್ರಧಾರಿಗಳನ್ನು ರೀವಿಲ್ ಮಾಡಲಾಗಿದೆ. ಮುಖ್ಯವಾಗಿ ಆರ್ಮುಗಂ ರವಿಶಂಕರ್, ಅಚ್ಯುತ್‌ಕುಮಾರ್, ಸಾಧುಕೋಕಿಲ ಈ ಸಿನಿಮಾದಲ್ಲಿ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ (ಎಐ) ವರ್ಲ್ಡ್‌ನಂತೆ ಉಪೇಂದ್ರ ಅವರು ತಮ್ಮ ‘ಯುಐ ವರ್ಲ್ಡ್’ ಸೃಷ್ಟಿಸಿದ್ದಾರೆ. ಈ ಲೋಕಕ್ಕೆ ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಹೊಸ ಸ್ಪರ್ಶ ನೀಡಿದೆ. ಎಂಟು ಭಾಷೆಗಳಲ್ಲಿ ಈ ಸಿನಿಮಾ ಎಂಬ ಬಿಡುಗಡೆಯಾಗಲಿದೆ ಎನ್ನುವುದಕ್ಕೆ ಈ ಸಿನಿಮಾದ ಪೋಸ್ಟರೇ ಸಾಕ್ಷಿ.
ಇದನ್ನೂ ಓದಿ: UI teaser : `UI ಫಸ್ಟ್ ಲುಕ್ ಟೀಸರ್’ ಔಟ್; ಖಡಕ್ ಲುಕ್‌ನಲ್ಲಿ ಉಪ್ಪಿ!
116 ಸೆಕೆಂಡುಗಳ ಟೀಸರ್ 100 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನೊಂದಿಗೆ ಮಹತ್ವಾಕಾಂಕ್ಷೆಯ ಅವಧಿಯ ಸಾಹಸ ಚಿತ್ರವಾದ ‘UI’ ನ ಅಂತರಂಗವನ್ನು ತೆರೆದಿಟ್ಟಿದೆ.
ಏನಿದು ಯುಐ ಜಗತ್ತಿನ ಒಳಗುಟ್ಟು?
ಕಿವಿಯೊಳಗೆ ಗುಂಯ್‌ಗುಡುವಂತೆ ಯು…. ಐ… ಯು… ಐ… ಎಂಬ ಹಿನ್ನೆಲೆ ಸಂಗೀತದೊಂದಿಗೆ ಟೀಸರ್ ಪ್ರಾರಂಭವಾಗುತ್ತದೆ. ಇನ್ನೊಂದೆಡೆ ಅವತಾರ್ ಸಿನಿಮಾದಲ್ಲಿದ್ದವರನ್ನು ಇಲ್ಲಿ ಕರೆತಂದಿದ್ದಾರೋ ಎನ್ನುವ ಸಂದೇಹವೂ ಬರುತ್ತದೆ. ಇದು ಎಐ ಜಗತ್ತಲ್ಲ, ಯುಐ ಜಗತ್ತು ಎಂಬ ಹಿನ್ನೆಲೆ ಧ್ವನಿ. ಹೊಸದೊಂದು ಕಾಲ್ಪನಿಕ ಫ್ಯಾಂಟಸಿ ಲೋಕಕ್ಕೆ ನಮ್ಮನ್ನು ಕರೆದೊಯ್ಯತ್ತದೆ.
ಟೀಸರ್ & ಪೋಸ್ಟರ್ ನಲ್ಲಿ ಮಸೀದಿ, ದೇವಾಲಯ, ಚರ್ಚ್‌ಗಳ ಅವಶೇಷಗಳಿವೆ. ರೈಲಿದೆ, ಸ್ಯಾಟ್‌ಲೈಟ್ ಕೂಡ ಕಾಣುತ್ತದೆ. ನಶಿಸಿದ ನಾಗರಿಕತೆ ಮತ್ತು ಆಧುನಿಕತೆಯ ಸವಾಲುಗಳು, ಕಾಡುಮೇಡುಗಳನ್ನು ದಾಟಿ, ಯಾವುದೋ ನಗರದೊಳಗೆ ಪ್ರವೇಶಿಸುವ ದೃಶ್ಯಗಳು, ಬೆಟ್ಟ, ಗುಡ್ಡ, ಕಾಡು, ಮೇಡು ಎಲ್ಲವೂ ಹೋಗಿ ಗಗನಚುಂಬಿ ಕಟ್ಟಡಗಳು, ನಗರದ ದುರಾಸೆ, ದೌರ್ಜನ್ಯ ಎಲ್ಲೆ ಮೀರಿ ಏನೆಲ್ಲಾ ಆಯ್ತು? ಒಂದು ಯುಗ ಪ್ರಾರಂಭವಾಯಿತೇ ಅನಿಸುವಷ್ಟರಲ್ಲೇ ಅಲ್ಲೊಬ್ಬ ರಾಜನಂತಹ ವ್ಯಕ್ತಿ. ಅಲ್ಲೊಂದು ಹಾಸ್ಯ ಜಗತ್ತು. ಮುಖಕ್ಕೆ ಜೋಕರ್ ಬಣ್ಣ ಹಚ್ಚಿಕೊಂಡಿರುವ ಹಲವರು. ಅಲ್ಲಿಂದ ಒಂದು ಯುದ್ಧದ ಜಗತ್ತಿನ ಟೀಸರ್ ತೆರೆಯುತ್ತದೆ.
ಇದನ್ನೂ ಓದಿ: Actor Upendra: ಎಲ್ಲಿ ನೋಡಿದರೂ ಬರೀ ಕತ್ತಲು, ಫ್ಯಾನ್ಸ್ ತಲೆಗೆ ಹುಳ ಬಿಟ್ಟ ಉಪೇಂದ್ರ; ಎಲ್ಲೆಲ್ಲೂ UI ಟೀಸರ್‌ದೇ ಹವಾ!
ಒಂದೆಡೆ ಸಾವಿರಾರು ಕೈದಿಗಳನ್ನು ಬಂಧಿಸಿಟ್ಟ ಜೈಲು, ದುಬೈ ಶೇಕ್‌ಗಳು, ಸಾಮಾನ್ಯರನ್ನು ತುಳಿಯುತ್ತಾ ಬೆಳೆಯುವ ಪ್ರಪಂಚದಲ್ಲಿ ಹಾಹಾಕಾರ… ಇನ್ನೊಂದೆಡೆ ಕೋಣದ ಕೊಂಬಿನ ಕುದುರೆ ಅರ್ಥಾತ್ ಕಾಲನ ಸಂಕೇತ. ಹಾಗಾಗಿ ಇದು ಹುಟ್ಟು ಸಾವಿನ ಬಗೆಗಿನ ಸಿನಿಮಾ ಇರಬಹುದಾ ಎನ್ನುವ ಪ್ರಶ್ನೆ ಕೂಡ ಮೂಡುತ್ತದೆ.
ನಾನಾ ನೀನಾ ಅನ್ನುತ್ತಿದೆಯಾ ಯುಐ ವರ್ಲ್ಡ್?
ಪೋಸ್ಟರ್‌ನಲ್ಲಿಯೇ ಐದು ಭಾಷೆಗಳನ್ನು ಬಳಸಿಕೊಂಡು ಒಂದು ವಾಕ್ಯವನ್ನು ಸೃಷ್ಟಿಸಲಾಗಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಸೇರಿಸಿ ಬರೆದಿರುವ ವಾಕ್ಯ ‘’ಇವನು ಯಾವಾಗ ಬರ್ತಾನೋ ಗೊತ್ತಿಲ್ಲ, ಆದರೆ, ನಿಶ್ಚಿತವಾಗಿ ಬಂದೇ ಬರ್ತಾನೆ” ಎನ್ನುವ ಅರ್ಥ ಬರುತ್ತದೆ. ಈ ಪದಗಳ ಹಿಂದಿರುವ ಅರ್ಥವನ್ನು ಗಮನಿಸಿದರೆ, “ಸಾವು ಯಾವಾಗ ಬರತ್ತದೆಯೋ ಗೊತ್ತಿಲ್ಲ. ಆದರೆ, ಯಾವತ್ತೋ ಒಂದು ದಿನ ನಿಶ್ಚಿತಾಗಿಯೂ ಅದು ಬರುತ್ತದೆ” ಎಂಬ ಸಂದೇಶವನ್ನು ಈ ಸಿನಿಮಾ ಸಾರಲಿದೆಯಾ ಎಂಬ ಪ್ರಶ್ನೆ ಮೂಡುತ್ತದೆ. ಒಟ್ಟಾರೆಯಾಗಿ ಒಂದು ಮನುಕುಲದ ಚರಿತ್ರೆಯನ್ನು ಒಂದೂವರೆ ನಿಮಿಷದಲ್ಲಿ ತೆರೆದಿಡಲಾಗಿದೆ. ಇನ್ನು ಉಪ್ಪಿಯ ಈ ಖಡಕ್ ಲುಕ್ ಅಂತೂ ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ.
ಇನ್ನು ಟೀಸರ್ ನಡುನಡುವೆ ಸಣ್ಣದೊಂದು ಪ್ರೇಮಕತೆಯ ಎಳೆಯನ್ನು ತೋರಿಸಿದ್ದಾರೆ. ಉಯ್ಯಾಲೆ ಮೇಲೆ ಇಬ್ಬರು ಪ್ರೇಮಿಗಳು, ಗೋಡೆಗಳ ಸುತ್ತ ಅಂಟಿಸಿರುವ ಭಿತ್ತಿ ಪತ್ರ, ಅದರಲ್ಲೊಂದಿಷ್ಟು ಫೀಲ್ ಲವ್, ಸತ್ಯ ಯು ಲವ್ ಐ ಹೀಗೆ ಒಂದಷ್ಟು ಉಲ್ಟಾ ಪಲ್ಟಾ ಬರಹಗಳಿವೆ. ಮೈಕ್ ಹಿಡಿದು ಸುದ್ದಿಗೋಷ್ಠಿಗೆ ಬಂದಂತಹ ಪತ್ರಕರ್ತರು ಎನ್ನುವಂಥ ಸನ್ನಿವೇಶವೂ ಚಿತ್ರದಲ್ಲಿದೆ.
ಮಾಸ್ಟರ್ ಮೈಂಡ್ ಡೈರೆಕ್ಟರ್!
‘ಉಪ್ಪಿಗಿಂತ ರುಚಿ ಬೇರೆ ಇಲ್ಲ’ ಎನ್ನುವ ಮಾತು ಅಕ್ಷರಶಃ ರಿಯಲ್ ಸ್ಟಾರ್‌ಗೆ ಒಪ್ಪುತ್ತದೆ. ಕಾರಣ ಉಪ್ಪಿ ಯಾವಾಗಲೂ ಭಿನ್ನ-ವಿಭಿನ್ನ. ಸಾಮಾನ್ಯವಾಗಿ ಸಿನಿಮಾಗಳೆಂದಾಗ ಮನಸ್ಸಿಗೆ ಉಲ್ಲಾಸ ಉತ್ಸಾಹ ನೀಡುತ್ತವೆ. ಆದರೆ, ಉಪ್ಪಿ ಚಿತ್ರಗಳು ಮಾತ್ರ ಮನಸ್ಸಿನ ಜತೆ ಮೆದುಳಿಗೂ ಕೆಲಸ ಕೊಡುತ್ತವೆ. ಪರಪರ ಅಂತ ತಲೆಕೆರೆದುಕೊಳ್ಳುವಂತೆ ನಮ್ಮೊಳಗಿನ ಮಾದೇಶನನ್ನು ಎಬ್ಬಿಸುತ್ತಾರೆ. ಹಾಗಾಗಿಯೇ ಉಪೇಂದ್ರ ಅವರನ್ನು ಮಾಸ್ಟರ್ ಮೈಂಡ್ ಡೈರೆಕ್ಟರ್ ಎನ್ನಲಾಗುತ್ತದೆ!