ಬೆಂಗಳೂರು : ಡಾಲಿ ಧನಂಜಯ್ ನಟನೆಯ ʻಹೆಡ್ ಬುಷ್ʼ ಸಿನಿಮಾ (Dolly Dhananjay) ರಾಜ್ಯದೆಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದಲ್ಲಿ ವೀರಗಾಸೆ ಹಾಕಿಕೊಂಡವರ ಮೇಲೆ ಡಾನ್ ಜಯರಾಜ್ ಹಲ್ಲೆ ಮಾಡಿದಂತೆ ತೋರಿಸಲಾಗಿದೆ. ಇದರಿಂದ ವೀರಗಾಸೆಗೆ ಅವಮಾನ ಆಗಿದೆ ಎಂದು ಕೆಲವರು ಆರೋಪ ಮಾಡಿದ್ದಾರೆ. ಸಾಹಸ ಸನ್ನಿವೇಶದಲ್ಲಿ ವೀರಗಾಸೆ ಕಲಾವಿದರಿಗೆ ಒದೆಯಲಾಗಿದೆ. ಅದು ಕಲೆ ಮತ್ತು ವೀರಭದ್ರ ದೇವರಿಗೆ ಮಾಡಿದ ಅಪಮಾನ ಎಂದು ಕಲಾವಿದರು ಆಕ್ಷೇಪಿಸಿದ್ದಾರೆ. ಈ ಕುರಿತು ನಟ ಧನಂಜಯ್ ಪ್ರತಿಕ್ರಿಯೆ ನೀಡಿದ್ದಾರೆ.
ಡಾಲಿ ಧನಂಜಯ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ ʻʻನಮ್ಮ ಕರಗದ ಹಿರಿಯರೊಂದಿಗೆ ಮಾತನಾಡಿ ಬಗೆ ಹರಿಸಿಕೊಳ್ಳುತ್ತೇನೆ. ಈ ರೀತಿ ಸುದ್ದಿ ಹಬ್ಬಿಸಿರುವುದು ಯಾರು ಎಂದು ಗೊತ್ತಿಲ್ಲ. ಯಾಕೆ ಶುರು ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಸಿನಿಮಾದಲ್ಲಿ ವೀರಗಾಸೆಗೆ ಯಾರು ಅವಮಾನ ಮಾಡಿದ್ದಾರೋ ಅವರಿಗೆ ನಾನು ಹೊಡೆದಿರುವ ದೃಶ್ಯ ಅದು. ಇದನ್ನೇ ಉಲ್ಟಾ ತಿರುಗಿಸಿದ್ದಾರೆ ಅಷ್ಟೇ. ವೀರಭದ್ರ ಭಕ್ತರಿಗೆ ನಾನು ಅರ್ಥ ಮಾಡಿಸ್ತೀನಿ. ಆ ರೀತಿಯಾಗಿ ಸಿನಿಮಾದಲ್ಲಿ ಯಾವುದೇ ದೃಶ್ಯ ಇಲ್ಲ. ಈ ನಡುವೆ ಸಿನಿಮಾವನ್ನು ನಿಲ್ಲಿಸಿ, ಬಾಯ್ಕಾಟ್ ಮಾಡಿ ಎನ್ನುವ ಹಕ್ಕು ಯಾರಿಗೂ ಇಲ್ಲ. ಹೇಳಲಿಕ್ಕೆ ಅವರು ಯಾರು? ಅವರಿಗೂ ನನಗೂ ಇದಕ್ಕೆ ಸಂಬಂಧ ಇಲ್ಲ. ನನಗೂ ವೀರಭದ್ರ ದೇವರ ಮೇಲೆ ಅಪಾರ ಭಕ್ತಿ. ವೀರಗಾಸೆ ಕಲೆಯನ್ನು ತುಂಬ ಇಷ್ಟ ಪಡುವವನು. ಹಾಗಾಗಿ ನನ್ನಿಂದ ಯಾವುದೇ ಅವಮಾನ ಆಗುವಂತಹ ಕೆಲಸ ಆಗಲ್ಲʼʼ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ | Dolly Dhananjay | ಡಾಲಿ ಧನಂಜಯ್, ಸತ್ಯದೇವ್ ಚಿತ್ರಕ್ಕೆ ನಾಯಕಿಯಾದ ತಮಿಳು ನಟಿ ಪ್ರಿಯಾ ಭವಾನಿ ಶಂಕರ್
ಲೂಸ್ ಮಾದ ಯೋಗಿ ಹೆಡ್ ಬುಷ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ರಘು ಮುಖರ್ಜಿ ಈ ಚಿತ್ರದಲ್ಲಿ MDN ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ನಟಿ ಶ್ರುತಿ ಹರಿಹರನ್ ಹೆಡ್ ಬುಷ್ ಚಿತ್ರದಲ್ಲಿ ರತ್ನಪ್ರಭಾ ಪಾತ್ರ ನಿಭಾಯಿಸಿದ್ದಾರೆ. ಇದಕ್ಕಾಗಿಯೇ ಶ್ರುತಿ ಹರಿಹರನ್ ಸಂಪೂರ್ಣ ಬದಲಾಗಿದ್ದಾರೆ.
ಅಗ್ನಿ ಶ್ರೀಧರ್ ಪುಸ್ತಕ ಆಧರಿಸಿದ ಸಿನಿಮಾ ಇದು!
ನಿರ್ದೇಶಕ ಶೂನ್ಯ ನಿರ್ದೇಶಿಸಿದ್ದಾರೆ. 1970ರ ಸಮಯದಲ್ಲಿ ಬೆಂಗಳೂರು ಭೂಗತ ಜಗತ್ತನ್ನು ಈ ಚಿತ್ರದಲ್ಲಿ ಪರಿಚಯಿಸಲಾಗಿದೆ. ಅಗ್ನಿ ಶ್ರೀಧರ್ ‘ದಾದಾಗಿರಿಯ ದಿನಗಳು’ ಪುಸ್ತಕವನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ನಿರ್ದೇಶಕ ಶೂನ್ಯ ಈ ಮೊದಲು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಜತೆ ಅಸೋಸಿಯೇಟ್ ಆಗಿದ್ದರು. ಚಿತ್ರದ ಹಾಡುಗಳಿಗೆ ಚರಣ್ ರಾಜ್ ಸಂಗೀತ ನಿರ್ದೇಶನವಿದೆ. ಸುನೊಜ್ ವೇಲಾಯಧನ್ ಕ್ಯಾಮೆರಾ, ಬಾದಲ್ ನಂಜುಂಡಸ್ವಾಮಿ ಕಲೆ ಚಿತ್ರಕ್ಕಿದೆ.
ದೊಡ್ಡ ತಾರಾಬಳಗವೇ ಇದೆ
ʻಹೆಡ್ ಬುಷ್ʼ ಚಿತ್ರದ ನಾಯಕಿಯಾಗಿ ಪಾಯಲ್ ರಜಪೂತ್ ನಟಿಸಿದ್ದಾರೆ. ತೆಲುಗು, ಪಂಜಾಬಿ, ಹಿಂದಿ ಹಾಗೂ ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ನಟಿಸಿದ ‘ಆರ್ ಎಕ್ಸ್ 100’ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಉಳಿದಂತೆ ಕ್ರೇಜಿಸ್ಟಾರ್ ರವಿಚಂದ್ರನ್, ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ, ದೇವರಾಜ್, ಶ್ರುತಿ ಹರಿಹರನ್, ರಘು ಮುಖರ್ಜಿ, ಬಾಲು ನಾಗೇಂದ್ರ ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ.
ಇದನ್ನೂ ಓದಿ | Kantara Movie | ರಿಷಬ್ ಒಳಗಿನ ಬರಹಗಾರ, ನಟ ಹಾಗೂ ನಿರ್ದೇಶಕನ ಅಭಿಮಾನಿಯಾದೆ: ಡಾಲಿ ಧನಂಜಯ್!