ಬೆಂಗಳೂರು: `ಹಳ್ಳಿಕಾರ್ ಒಡೆಯ’ ಬಿರುದಿನ ಬಗ್ಗೆ ವರ್ತೂರ್ ಸಂತೋಷ್ (Varthur Santhosh) ಅವರು ಬಿಗ್ ಬಾಸ್ ಮನೆ ಒಳಗೆ ಇದ್ದಾಗಲೇ ಸಾಕಷ್ಟು ಚರ್ಚೆಗಳು ಆಗಿದ್ದವು. ಮಂಡ್ಯ ಭಾಗದ ಹಳ್ಳಿಕಾರ್ ಸಂರಕ್ಷಕರು ಹಳ್ಳಿಕಾರ್ ಒಡೆಯ’ ಬಿರುದಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ‘ಹಳ್ಳಿಕಾರ್ ಒಡೆಯ’ ಬಿರುದಿನ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ ವರ್ತೂರು ಸಂತೋಷ್ ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮವೊಂದಕ್ಕೆ ಹಳ್ಳಿಕಾರ್ ಈ ಬಗ್ಗೆ ಮಾತನಾಡಿ ʻʻಷಡ್ಯಂತ್ರ ಮಾಡಬೇಕು ಎಂದು ಯಾವುದಕ್ಕೆ ಯಾವ್ದೋ ಲಿಂಕ್ ಮಾಡಬೇಡಿʼʼಎಂದು ನೇರ ಮಾತುಗಳನ್ನಾಡಿದ್ದಾರೆ.
ವರ್ತೂರ್ ಮಾತನಾಡಿ ʻಹಳ್ಳಿಕಾರ್ ಒಡೆಯ ಬಿರುದು ಎಲ್ಲಿ ಕೊಟ್ರು? ಎಂದು ಕೇಳ್ತಾ ಇದ್ದಾರೆ. ಕಾಡುಗೋಡಿ ಹುಡುಗರು ಅಭಿಮಾನದಿಂದ ಈ ಬಿರುದು ನನಗೆ ಕೊಟ್ಟರು. ಹಳ್ಳಿಕಾರ್ ಜನಾಂಗ ಒಂದು ಇದೆ ಎನ್ನುವುದು ಗೊತ್ತು. ಜನಾಂಗಕ್ಕೆ ನಾನು ಹಳ್ಳಿಕಾರ್ ಒಡೆಯ ಎಂದು ಹೇಳಿಕೊಳ್ಳುತ್ತಿಲ್ಲ. ನನಗೆ ಅದಕ್ಕೂ ಸಂಬಂಧ ಇಲ್ಲ. ಹಳ್ಳಿಕಾರ್ ಬಗ್ಗೆ ಗೌರವ ಇದೆ. ಷಡ್ಯಂತ್ರ ಮಾಡಬೇಕು ಎಂದು ಯಾವುದಕ್ಕೆ ಯಾವ್ದೋ ಲಿಂಕ್ ಮಾಡಬೇಡಿ. ಹಳ್ಳಿಕಾರ್ ಎನ್ನುವುದು ದನದ ತಳಿ. ನಾನು ಆ ತಳಿಯನ್ನು ರಕ್ಷಿಸಿ ಬೆಳೆಸುವ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇನೆ. ಸಾಕಷ್ಟು ಹಳ್ಳಿಕಾರ್ ತಳಿಯ ಜಾನವಾರುಗಳನ್ನು ಸಾಕಿದ್ದೇನೆ. ಹಾಗಾಗಿ ಜನ ಕೊಟ್ಟ ಬಿರುದು ಹಳ್ಳಿಕಾರ್ ಒಡೆಯ. ಜನಾಂಗಕ್ಕೆ ಅದಕ್ಕೂ ಸಂಬಂಧ ಇಲ್ಲ. ನಟ ವಜ್ರಮುನಿ ಕುಟುಂಬದವರು ಹಳ್ಳಿಕಾರ್ ಸಮುದಾಯ. ಅವರು ಸಹಿತ ನನಗೆ ಸನ್ಮಾನ ಮಾಡಿ ಕಳುಹಿಸಿದರು. ನಾವು ಅವರೂ ಚೆನ್ನಾಗಿ ಇದ್ದೇವೆʼʼಎಂದು ಹೇಳಿದ್ದಾರೆ.
ಇದನ್ನೂ ಓದಿ: Varthur Santhosh: ಮತ್ತೆ ಹಳ್ಳಿಕಾರ್ ಒಡೆಯ ವಿವಾದ; ವರ್ತೂರ್ ಸಂತೋಷ್ ವಿರುದ್ಧ ಕಾನೂನು ಸಮರ
ಏನಿದು ವಿವಾದ?
ಈ ಹಿಂದೆ ಹಳ್ಳಿಕಾರ್ ತಳಿ ಸಂರಕ್ಷಕರು ವರ್ತೂರು ಬೆಂಬಲಿಗರಿಗೆ ತಿಳಿವಳಿಕೆ ಹೇಳಲು ಚರ್ಚಾಗೋಷ್ಠಿ ಏರ್ಪಡಿಸಿದ್ದರು. ಅಂದು ವರ್ತೂರು ಸಂತೋಷ್ ಬೆಂಬಲಿಗರು ಹಾಗೂ ತಲಾತಲಾಂತರಿಂದ ಹಳ್ಳಿಕಾರ್ ತಳಿ ಸಂರಕ್ಷಕರ ನಡುವೆ ಜಟಾಪಟಿ ಶುರುವಾಗಿತ್ತು. ಈ ವಾಗ್ವಾದದಿಂದಾಗಿ ಕಾರ್ಯಕ್ರಮದ ಅರ್ಧದಲ್ಲೆ ಸಂತೋಷ್ ಬೆಂಬಲಿಗರನ್ನು ಪೊಲೀಸರು ಕಳುಹಿಸಿದ್ದರು. ನಂತರ ಬಿಗ್ ಬಾಸ್ ಮನೆಯಿಂದ ಹೊರ ಬಂದ ವರ್ತೂರ್ ಸಂತೋಷ್ ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದರು. ಹಿರಿಯ ಹಳ್ಳಿಕಾರ್ ಸಂರಕ್ಷಕರ ವಿರುದ್ಧ ಸಂತೋಷ್ ಏಕವಚನದಲ್ಲಿ ಹರಿಹಾಯ್ದಿದ್ದರು. ಹಳ್ಳಿಕಾರ್ ಒಡೆಯ ಎಂದು ಕರೆಸಿಕೊಳ್ಳುವುದು, ಬಿಂಬಿಸಿಕೊಳ್ಳುತ್ತಿರುವುದು ಸರಿಯಲ್ಲ. ಇದು ಹಳ್ಳಿಕಾರ್ ಜನಾಂಗಕ್ಕೆ ಅಪಮಾನವಾಗಿದೆ. ತಲಾತಲಾಂತರಿಂದ ಹಳ್ಳಿಕಾರ್ ಸಂರಕ್ಷಣೆ ಮಾಡುತ್ತಿರುವ ರೈತರಿಗೂ ಹಾಗೂ ಅವರ ಭಾವನೆಗೂ ಧಕ್ಕೆಯಾಗಿದೆ ಎಂದು ಹಳ್ಳಿಕಾರ್ ಸಂರಕ್ಷಕರು ಕಿಡಿಕಾರಿದ್ದರು.