ಮುಂಬೈ: ಸಂಗೀತ ಲೋಕದ ಮಾಂತ್ರಿಕ ಎ.ಆರ್.ರೆಹಮಾನ್(AR Rahman). ಆದರೆ ಅವರ ಬಾಲ್ಯದ ಹೆಸರು ದಿಲೀಪ್ ಕುಮಾರ್. ದಿಲೀಪ್ ಕುಮಾರ್ ಆಗಿಯೇ ಸಂಗೀತ ಲೋಕಕ್ಕೆ ಕಾಲಿಟ್ಟ ಅವರು ಕೆಲ ವರ್ಷಗಳಲ್ಲೇ ತಮ್ಮ ಹೆಸರಿನ ಜತೆ ಧರ್ಮವನ್ನೂ ಬದಲಿಸಿಕೊಂಡು ಬಿಟ್ಟರು. ಅದಕ್ಕೆ ಕಾರಣವೇನು? ಆ ಹೆಸರಿನ ಹಿಂದಿನ ಮಹತ್ವವೇನು ಎನ್ನುವುದರ ವಿವರ ಇಲ್ಲಿದೆ.
ಎ.ಆರ್.ರೆಹಮಾನ್ ಅವರು ದಿಲೀಪ್ ಕುಮಾರ್ ಎನ್ನುವ ಹೆಸರನ್ನು ಬದಲಿಸಿಕೊಂಡಿದ್ದು 1980ರ ದಶಕದ ಕೊನೆಯಲ್ಲಿ. ಅವರು ಒಮ್ಮೆ ಸೂಫಿ ಸಂತರೊಬ್ಬರನ್ನು ಭೇಟಿಯಾಗಿದ್ದರಂತೆ. ಆ ಸೂಫಿ ಸಂತರು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತನ್ನ ತಂದೆಯನ್ನು ಆರೈಕೆ ಮಾಡುತ್ತಿದ್ದರಂತೆ. ಅದಾದ 7-8 ವರ್ಷಗಳ ನಂತರ ಮತ್ತೊಮ್ಮೆ ಆ ಸೂಫಿ ಸಂತರವನ್ನು ರೆಹಮಾನ್ ಅವರ ಕುಟುಂಬ ಭೇಟಿಯಾಗಿದೆ. ಆಗ ಅವರಿಗೆ ಮುಸ್ಲಿಂ ಧರ್ಮದ ಬಗ್ಗೆ ಆಸಕ್ತಿ ಹುಟ್ಟಿತಂತೆ. ಹಾಗೆಯೇ ಅದರಲ್ಲಿ ಹೆಚ್ಚಿನ ಶಾಂತಿ ಇದೆ ಎನಿಸಿ ಅವರು ತಮ್ಮ ಧರ್ಮವನ್ನು ಬದಲಿಸಿಕೊಂಡರಂತೆ.
ಇದನ್ನೂ ಓದಿ: Eid al Adha: ನಮ್ಮ ನಡುವೆಯೇ ಧ್ವೇಷ ಹುಟ್ಟುಹಾಕುವವರಿದ್ದಾರೆ: ಬಕ್ರೀದ್ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತು
ನಸ್ರೀನ್ ಮುನ್ನಿ ಕಬೀರ್ ಅವರು ಬರೆದಿರುವ ʼಎಆರ್ ರೆಹಮಾನ್: ದಿ ಸ್ಪಿರಿಟ್ ಆಫ್ ಮ್ಯೂಸಿಕ್ʼ ಪುಸ್ತಕದಲ್ಲಿ ರೆಹಮಾನ್ ಅವರು ತಮ್ಮ ಹೆಸರು ಬದಲಾವಣೆ ಬಗ್ಗೆ ಹೇಳಿಕೊಂಡಿದ್ದಾರೆ. “ನನ್ನ ತಾಯಿ ಹಿಂದೂ ಧರ್ಮವನ್ನು ಪಾಲಿಸುತ್ತಿದ್ದಳು. ಆದರೆ ಮನೆಯಲ್ಲಿ ಎಲ್ಲ ಧರ್ಮದ ದೇವರ ಫೋಟೊಗಳನ್ನೂ ಇಟ್ಟಿದ್ದಳು. ಹಬೀಬುಲ್ಲಾ ರಸ್ತೆಯಲ್ಲಿದ್ದ ನಮ್ಮ ಮನೆಯಲ್ಲಿ ಮೇರಿ ಯೇಸುವನ್ನು ತನ್ನ ತೋಳುಗಳಲ್ಲಿ ಹಿಡಿದುಕೊಂಡಿದ್ದ ಚಿತ್ರವೂ ಇತ್ತು. ಹಾಗೆಯೇ ಮೆಕ್ಕಾ, ಮದೀನಾದ ಚಿತ್ರಗಳೂ ಇದ್ದವು” ಎಂದು ಹೇಳಿದ್ದಾರೆ.
ನನ್ನ ತಾಯಿಗೆ ಕನಸಿನಲ್ಲಿ ಬಂದಿರುವಂತೆ ನಾವು ಅಲ್ಲಾ ರಖಾ(ಎಆರ್) ಹೆಸರನ್ನು ಆಯ್ಕೆ ಮಾಡಿಕೊಂಡೆವು. ರೆಹಮಾನ್ ಮನೆಯ ಸದಸ್ಯರೆಲ್ಲರೂ ಸೇರಿ ಮಾಡಿದ ಆಯ್ಕೆ. ನಿಜವಾಗಿಯೂ ನನಗೆ ನನ್ನ ಮೊದಲನೇ ಹೆಸರು ಇಷ್ಟವೇ ಇರಲಿಲ್ಲ. ನನ್ನ ಫೇಮ್‌ಗೂ ಹೆಸರಿಗೂ ಸಂಬಂಧವೇ ಇಲ್ಲದಂತಿತ್ತು. ಒಮ್ಮೆ ನನ್ನ ತಂಗಿಯ ಮದುವೆಯ ಕುರಿತಾಗಿ ಹಿಂದೂ ಜ್ಯೋತಿಷಿಗಳ ಬಳಿ ಅವಳ ಜಾತಕ ತೆಗೆದುಕೊಂಡು ಹೋಗಿದ್ದೆವು. ಆಗ ನಾನು ನನಗೆ ಯಾವ ಹೆಸರು ಸೂಕ್ತ ಎಂದು ಅವರನ್ನು ಕೇಳಿದ್ದೆ. ಅದಕ್ಕೆ ಅವರು ಅಬ್ದುಲ್ ರೆಹಮಾನ್ ಅಥವಾ ಅಬ್ದುಲ್ ರಹೀಮ್ ಎಂದಿದ್ದರು. ಅದರಂತೆ ನಾನು ನನ್ನ ಹೆಸರನ್ನು ಎ.ಆರ್. ರೆಹಮಾನ್ ಎಂದು ಬದಲಿಸಿಕೊಂಡೆ ಎಂದು ರೆಹಮಾನ್ ಅವರು ಪುಸ್ತಕದಲ್ಲಿ ತಮ್ಮ ಬಗ್ಗೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Eid al Adha: ಭಕ್ತಿ, ಬಲಿದಾನ ಮತ್ತು ಜೀವದಾನದ ದಿವ್ಯ ಸ್ಮರಣೆಯೇ ಬಕ್ರೀದ್ ಆಚರಣೆ
ತಾನೊಬ್ಬ ಸಂಗೀತ ಕಲಾವಿದನಾಗಿದ್ದ ಹಿನ್ನೆಲೆ ತಾನು ಧರ್ಮ ಬದಲಾವಣೆ ಮಾಡಿಕೊಂಡಿದ್ದು ಅಥವಾ ಹೆಸರು ಬದಲಾವಣೆ ಮಾಡಿಕೊಂಡಿದ್ದು, ತನ್ನ ಸುತ್ತಲಿನವರ ಮೇಲೆ ಹೆಚ್ಚಿನ ಪರಿಣಾಮವೇನು ಬೀರಲಿಲ್ಲ ಎಂದೂ ಅವರು ಹೇಳಿಕೊಂಡಿದ್ದಾರೆ.