Site icon Vistara News

Actor Upendra: ಯಾಕೆ ನನ್ನ ಮೇಲೆ ಇಷ್ಟೊಂದು ದ್ವೇಷ? ಟೀಕಿಸಿದವರಿಗೆ ಉಪೇಂದ್ರರಿಂದ ಹಲವು ಪ್ರಶ್ನೆಗಳು!

Upendra

ಬೆಂಗಳೂರು: ನಟ, ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ (Actor Upendra) ಅವರು ವಿಡಿಯೊ ಲೈವ್‌ನಲ್ಲಿ ಮಾತನಾಡುವಾಗ ಗಾದೆ ಮಾತೊಂದನ್ನು ಉಲ್ಲೇಖಿಸಿ ದಲಿತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ನಟನ ವಿರುದ್ಧ ಸೋಷಿಯಲ್‌ ಮೀಡಿಯಾದಲ್ಲಿ ಆಕ್ರೋಶ ಕೇಳಿ ಬಂದಿತ್ತು. ಇದಾದ ಬಳಿಕ ನಟ ಕ್ಷಮೆ ಕೂಡ ಕೇಳಿದ್ದರು. ಇಷ್ಟಾದರೂ ವಿವಾದ ತಣ್ಣಗಾಗಿಲ್ಲ. ಇದೀಗ ಮತ್ತೊಮ್ಮೆ ಉಪೇಂದ್ರ ಅವರು ಈ ಬಗ್ಗೆ ಪೋಸ್ಟ್‌ ಹಂಚಿಕೊಂಡು `ಯಾಕೆ ಇಷ್ಟೊಂದು ದ್ವೇಷ?’ ಎಂದು ಕೇಳಿದ್ದಾರೆ.

ಉಪೇಂದ್ರ ಪೋಸ್ಟ್‌ನಲ್ಲಿ ʻʻಇಂದು ನನ್ನ ವಿರುದ್ಧ ಮಾತನಾಡುತ್ತಿರುವ ಹಲವರು ಅಂದು ಹುಟ್ಟೇ ಇರಲಿಲ್ಲ.
50 ವರ್ಷಗಳ ಹಿಂದೆ ನನ್ನ ಬಾಲ್ಯ ನಾನು ಎಂತಹ ಪರಿಸರದಲ್ಲಿ ಬೆಳೆದೆ. ಆ ಬಾಲ್ಯದಲ್ಲಿ ನಾನು ಕಂಡ ಆ ಕ್ರೂರ ಬಡತನ, ನನ್ನ ಕಣ್ಣ ಮುಂದೆಯೇ ಬೆಂಕಿ ಹಚ್ಚಿಕೊಂಡು ಆದ ಆತ್ಮಹತ್ಯೆಗಳು, ಹಸಿವು, ಅಪಮಾನ, ತುಳಿತ, ಇದನ್ನು ಅನುಭವಿಸಿ ಬೆಳೆದ ನಾನು ಇಂದು ಒಂದು ವರ್ಗದ ಜನರ ಬಗ್ಗೆ ಅವಮಾನಕಾರಿಯಾಗಿ ಮಾತನಾಡುತ್ತೇನೆಯೇ ? ನನಗೆ ಹುಚ್ಚೇ ? ಅದಕ್ಕೆ ಕಾರಣವಾದರೂ ಏನು ? ಅದರಿಂದ ನನಗೆ ಸಿಗುವ ಲಾಭವಾದರೂ ಏನು ? ಇಷ್ಟಕ್ಕೂ ಕ್ಷಮೆಯನ್ನು ಸ್ವೀಕರಿಸುವ ದೊಡ್ಡತನವೂ ಇಲ್ಲವೇ ? ಯಾಕೆ ಇಷ್ಟೊಂದು ದ್ವೇಷ?ʼʼʼ ಎಂದು ಬರೆದುಕೊಂಡಿದ್ದಾರೆ.

ಪೋಸ್ಟ್‌ ಕಂಡ ಅವರ ಅಭಿಮಾನಿಗಳು ʻʻಉಪ್ಪಿ ಅಣ್ಣ ನಾವು ಯಾರಿಗೂ ಏನನ್ನೂ ಪ್ರೊವ್ ಮಾಡುವ ಅಗತ್ಯ ಇಲ್ಲ. ನೀವು ಏನು ಅಂತ ಎಲ್ಲರಿಗೂ ಬಿಡಿಸಿ ಬಿಡಿಸಿ ಹೇಳಿಕೊಳ್ಳುವ ಅಗತ್ಯ ಇಲ್ಲʼʼ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: Actor Upendra: ಮಾತನಾಡುವಾಗ ʼಬುದ್ಧಿವಂತʼನ ಎಡವಟ್ಟು; ಉಪೇಂದ್ರ ಮೇಲೆ ಕೇಸ್‌ ಬಿತ್ತು! ದೂರಲ್ಲೇನಿದೆ?

Actor Upendra: ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಧುಸೂಧನ್ ದೂರು ನೀಡಿದ್ದೇನು?

“ನಟ ಉಪೇಂದ್ರ ಸಾಮಾಜಿಕ ಜಾಲತಾಣದ ಕಾರ್ಯಕ್ರಮದ ನೇರ ಪ್ರಸಾರದಲ್ಲಿ ʻಊರೆಂದರೆ ಹೊಲಗೇರಿ ಇರುತ್ತೆʼ ಎಂಬ ಪದ ಉಪಯೋಗಿಸಿ ಮಾತನಾಡಿದ್ದು, ಇದರಿಂದ ದಲಿತ ಸಮಾಜದಲ್ಲಿನ ಜಾತಿ ಭಾವನೆಗಳಿಗೆ ಘಾಸಿ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ನಟ ಉಪೇಂದ್ರ ಅವರ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಜೀವನದಲ್ಲಿ ಒಬ್ಬ ನಟನಾಗಿ ರಾಜ್ಯಾದ್ಯಂತ ಹೆಸರು ಮಾಡಿರುವ ಉಪೇಂದ್ರ ಎಲ್ಲರಿಗೂ ಮಾದರಿಯಾಗಿ ನಡೆದುಕೊಳ್ಳಬೇಕಾಗಿತ್ತು. ಈ ನಟನನ್ನು ಅನುಕರಣೆ ಮಾಡುವವರು ಸಹ ಇದನ್ನು ಮುಂದುವರಿಸಿದ್ದಲ್ಲಿ ಸಾರ್ವಜನಿಕ ಸ್ವಾಸ್ಥ್ಯ ಹಾಳಾಗುವ ಸಾಧ್ಯತೆ ಇರುತ್ತದೆʼʼ ಎಂದು ಸಿ ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲು ದೂರು ದಾಖಲಿಸಲಾಗಿದೆ.

ಇದನ್ನೂ ಓದಿ: Actor Upendra: ಉಪೇಂದ್ರರವರ ಸದಾಶಿವ ನಗರದಲ್ಲಿರುವ ಹೊಸ ಮನೆ ಹೇಗಿದೆ? ಇಲ್ಲಿವೆ ಫೋಟೊಗಳು!

ಆಗಸ್ಟ್‌ 12ರಂದು ಉಪೇಂದ್ರ ಅವರು ತಮ್ಮ ಅಭಿಮಾನಿಗಳ ಜತೆ ಪ್ರಜಾಕೀಯ ಮುನ್ನೆಲೆಗೆ ಬಂದು 6 ವರ್ಷವಾದ ಪ್ರಯುಕ್ತ ಸಂವಾದ ನಡೆಸಿದ್ದರು. ಈ ವೇಳೆ ಮಾತಿನ ಭರದಲ್ಲಿ ʼಊರು ಅಂದ್ಮೇಲೆ ಹೊಲ್ಗೇರಿ ಇರುತ್ತಲ್ಲಾ ಹಾಗೆ..ʼ ಎಂದು ಹೇಳಿದ್ದರು. ಇದೀಗ ಇದೇ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ, ಜಾತಿ ಜಗಳ ಬಿಟ್ಟು ಒಂದಾಗಬೇಕು ಎನ್ನುವ ಉಪೇಂದ್ರ ಈ ರೀತಿ ಹೇಳಿದ್ದು ಸರಿಯಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದರು.

Exit mobile version