ಜೈಪುರ: ಬಾಲಿವುಡ್ನ ತಾರಾ ಜೋಡಿಯಾದ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಅವರ ಮದುವೆಗೆ (Sidharth Kiara Wedding) ಜೈಪುರದ ಜೈಸಲ್ಮೇರ್ನಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ. ಸೋಮವಾರ (ಫೆಬ್ರವರಿ ೬) ಹಸೆಮಣೆ ಏರಲು ಇಬ್ಬರೂ ಸಿದ್ಧರಾಗಿದ್ದು, ನೆಚ್ಚಿನ ನಟ-ನಟಿಯ ಮದುವೆಯ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಇನ್ನು, ಇದರ ಬೆನ್ನಲ್ಲೇ ಮದುವೆಯ ವಿಡಿಯೊವನ್ನು ಒಟಿಟಿ ಪ್ಲಾಟ್ಫಾರ್ಮ್ಗೆ ಮಾರಾಟ ಮಾಡಲು ಬಾಲಿವುಡ್ ಜೋಡಿ ನಿರ್ಧರಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಅಮೆಜಾನ್ ಪ್ರೈಮ್ ವಿಡಿಯೊದ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಅವರ ಮದುವೆ ಶೂಟ್ ಮಾಡುವ ಚಿತ್ರವೊಂದನ್ನು ಪೋಸ್ಟ್ ಮಾಡಲಾಗಿದೆ. ಹಾಗಾಗಿ, ತಾರಾ ಜೋಡಿಯು ತಮ್ಮ ಮದುವೆಯ ವಿಡಿಯೊವನ್ನು ಅಮೆಜಾನ್ ಪ್ರೈಮ್ಗೆ ಮಾರಾಟ ಮಾಡಿದ್ದಾರೆ. ಅಮೆಜಾನ್ ಪ್ರೈಮ್ನಲ್ಲಿಯೇ ವಿಡಿಯೊ ಪ್ರಸಾರವಾಗಲಿದೆ ಎಂದು ಹೇಳಲಾಗುತ್ತಿದೆ.
ಆಪ್ತರು ಹೇಳುವುದೇನು?
ಸಿದ್ಧಾರ್ಥ್ ಹಾಗೂ ಕಿಯಾರಾ ಆಪ್ತರು, ಒಟಿಟಿಗೆ ವಿಡಿಯೊ ಮಾರಾಟ ಮಾಡಲಾಗಿದೆ ಎಂಬ ಸುದ್ದಿಯನ್ನು ನಿರಾಕರಿಸಿದ್ದಾರೆ. “ಅಮೆಜಾನ್ ಪ್ರೈಮ್ ಮೆಚ್ಚುಗೆ ಭಾಗವಾಗಿ ಶೇರ್ಶಾ ಸಿನಿಮಾದ ಪೋಸ್ಟರ್ ಹಂಚಿಕೊಂಡಿದೆ. ಜೋಡಿಯು ವಿಡಿಯೊವನ್ನು ಒಟಿಟಿಗೆ ಮಾರಾಟ ಮಾಡಿಲ್ಲ” ಎಂದು ಹೇಳಿದ್ದಾರೆ. ಫೆಬ್ರವರಿ ೬ರಂದು ಅದ್ಧೂರಿಯಾಗಿ ಮದುವೆ ನಡೆಯಲಿದ್ದು, ೧೦೦-೧೨೫ ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ. ಮದುವೆಗೆ ಆಗಮಿಸುವವರು ವಿಡಿಯೊ ಮಾಡುವಂತಿಲ್ಲ, ಫೋಟೊ ತೆಗೆಯುವಂತಿಲ್ಲ. ಹಾಗೆಯೇ, ಮದುವೆಯ ಫೋಟೊಗಳನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡುವಂತಿಲ್ಲ ಎಂಬುದಾಗಿ ಅತಿಥಿಗಳಿಗೆ ಮೊದಲೇ ಕೋರಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Kiara Sidharth Wedding : ಜೈಸಲ್ಮೇರ್ಗೆ ಬಂದಿಳಿದ ಕಿಯಾರಾ, ಮಲ್ಹೋತ್ರಾ, ಮದುವೆಗೆ ಕ್ಷಣಗಣನೆ