Site icon Vistara News

Yash: ಯಶ್ ನಟನೆಯ ಟಾಕ್ಸಿಕ್ ಚಿತ್ರಕ್ಕೆ ಬಾಲಿವುಡ್ ಬೆಡಗಿ ಕಿಯಾರಾ ಎಂಟ್ರಿ!

yash

ಬೆಂಗಳೂರು: ನಟ ಯಶ್ (Yash) ನಾಯಕನಟನಾಗಿ ಕಾಣಿಸಿಕೊಳ್ಳುತ್ತಿರುವ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದಲ್ಲಿ ಕಿಯಾರಾ (kiara) ಅಡ್ವಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಕರೀನಾ ಕಪೂರ್ (kareena kapoor) ಟಾಕ್ಸಿಕ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಸುದ್ದಿಯ ಬಳಿಕ ಇದೀಗ ಕಿಯಾರಾ ಅಡ್ವಾಣಿಯೂ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಕೆಜಿಎಫ್ 2 ನಂತರ ಯಶ್ ಅವರು ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರ ಮಾಡುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಕಳೆದ ವರ್ಷ ಚಿತ್ರದ ಶೀರ್ಷಿಕೆಯನ್ನು ಘೋಷಿಸಲಾಗಿದ್ದರೂ, ನಾಯಕ ನಟಿಯ ಬಗ್ಗೆ ಹಲವಾರು ಊಹಾಪೋಹಗಳು ಇದ್ದವು. ಕರೀನಾ ಈ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂದು ಇತ್ತೀಚೆಗೆ ಹೇಳಲಾಗಿದ್ದರೂ, ಕಿಯಾರಾ ಕೂಡ ಈ ಯೋಜನೆಗೆ ಯೆಸ್ ಹೇಳಿದ್ದಾರೆ ಎಂದು ಹೊಸ ವರದಿ ಹೇಳಿದೆ.

ಯಶ್ ಸಹೋದರಿಯಾಗಿ ನಟಿ ಕರೀನಾ

ಈ ಚಿತ್ರದಲ್ಲಿ ಕಿಯಾರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಮೂವರು ಪ್ರಮುಖರು ನಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕರೀನಾ ಕಪೂರ್ ಖಾನ್ ಮತ್ತು ಕಿಯಾರಾ ಅಡ್ವಾಣಿ ಈಗಾಗಲೇ ಚಿತ್ರತಂಡಕ್ಕೆ ಸೇರಿಕೊಂಡಿದ್ದಾರೆ. ಚಿತ್ರದಲ್ಲಿ ಯಶ್ ಅವರ ಸಹೋದರಿಯಾಗಿ ಕರೀನಾ ನಟಿಸುತ್ತಿದ್ದಾರೆ ಎಂದು ವರದಿ ಹೇಳಿದೆ. ಆದರೆ ನಿರ್ಮಾಪಕರಿಂದ ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ.

‘ಟಾಕ್ಸಿಕ್’ ಕಿಯಾರಾ ಅವರ ಕನ್ನಡ ಚಿತ್ರರಂಗದ ಚೊಚ್ಚಲ ಚಿತ್ರ

ಇದು ನಿಜವಾಗಿದ್ದರೆ, ಟಾಕ್ಸಿಕ್ ಕಿಯಾರಾ ಅವರ ಕನ್ನಡ ಚಿತ್ರರಂಗದ ಚೊಚ್ಚಲ ಚಿತ್ರವಾಗಲಿದೆ. ಕಿಯಾರಾ ಈಗಾಗಲೇ ರಾಮ್ ಚರಣ್ ಜೊತೆ ಗೇಮ್ ಚೇಂಜರ್ ಎಂಬ ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಮಧ್ಯೆ ಚಿತ್ರದ ಥೀಮ್ ಹಾಡನ್ನು ಹಾಡಿರುವ ಶ್ರುತಿ ಹಾಸನ್ ಅವರನ್ನು ಮೂರನೇ ನಟಿ ಎಂದು ಪರಿಗಣಿಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಈ ಸುದ್ದಿಗೆ ಯಶ್ ಮತ್ತು ಗೀತು ಇನ್ನೂ ಪ್ರತಿಕ್ರಿಯಿಸಿಲ್ಲ. ಅಧಿಕೃತ ಘೋಷಣೆ ಬಳಿಕವಷ್ಟೇ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಬೀಳಲಿದೆ.

ಇದನ್ನೂ ಓದಿ:Prakash Heggodu: ಶಿವ ರಾಜ್‌ಕುಮಾರ್‌, ಯಶ್‌ ಜತೆ ತೆರೆ ಹಂಚಿಕೊಂಡಿದ್ದ ಖ್ಯಾತ ನಟ ಪ್ರಕಾಶ್ ಹೆಗ್ಗೋಡು ನಿಧನ

ಇದೆಲ್ಲದರ ನಡುವೆ, ಯಶ್ ಈಗಾಗಲೇ ಚಿತ್ರದ ಮೇಕಿಂಗ್‌ನಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಮೂಲವೊಂದು ಕಳೆದ ತಿಂಗಳು ಬಹಿರಂಗಪಡಿಸಿತ್ತು.

Exit mobile version