ಬೆಂಗಳೂರು: ಕಳೆದ ವರ್ಷ ಸ್ಯಾಂಡಲ್‌ವುಡ್ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡಿತ್ತು. ‘ಕೆಜಿಎಫ್ 2’, ‘ಕಾಂತಾರ’ದಂತಹ ದೇಶದವೇ ತಿರುಗಿ ನೋಡುವ ಚಿತ್ರ ಮೂಡಿಬಂದಿತ್ತು. ಅದೇ ನಿರೀಕ್ಷೆಯೊಂದಿಗೆ ಈ ವರ್ಷವನ್ನೂ ಕನ್ನಡ ಚಿತ್ರರಂಗ ಬರಮಾಡಿಕೊಂಡಿತ್ತು. ಆದರೆ ಕಳೆದ ವರ್ಷದ ಯಶಸ್ಸು ಮುಂದುವರಿಯಲಿಲ್ಲ ಎನ್ನುವುದು ಬೇಸರದ ವಿಷಯ. ಆದರೂ ಕನ್ನಡ ಕಲಾವಿದರು ವಿವಿಧ ಚಿತ್ರರಂಗಗಳಲ್ಲಿ ಮಿಂಚು ಹರಿಸಿದ್ದಾರೆ. 2023ರಲ್ಲಿ ಮೊದಲ ಪ್ರಯತ್ನದಲ್ಲೇ ಪರಭಾಷೆಯಲ್ಲಿ ಗಮನ ಸೆಳೆದ ಕನ್ನಡ ಕಲಾವಿದರ ಪರಿಚಯ ಇಲ್ಲಿದೆ (Year Ender 2023).
ಶಿವರಾಜ್ ಕುಮಾರ್
ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೊದಲ ಬಾರಿಗೆ ಅಭಿನಯಿಸಿದ ತಮಿಳು ಚಿತ್ರ ʼಜೈಲರ್ʼ. ರಜನಿಕಾಂತ್ ಅಭಿನಯದ ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆ ಕಂಡಿತ್ತು. ಈ ಸಿನಿಮಾದಲ್ಲಿ ರಜನಿಕಾಂತ್ ಜತೆಗೆ ಶಿವ ರಾಜ್‌ಕುಮಾರ್ ಕೂಡ ಮಿಂಚಿದ್ದಾರೆ. ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ ತಮಿಳು ಪ್ರೇಕ್ಷಕರು ಶಿವಣ್ಣನ ಅಭಿನಯಕ್ಕೆ ಫಿದಾ ಆಗಿದ್ದರು. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 650 ಕೋಟಿ ರೂ. ಗಳಿಸಿದೆ. ಸದ್ಯ ಶಿವಣ್ಣ ತಮಿಳಿನ ʼಕ್ಯಾಪ್ಟನ್ ಮಿಲ್ಲರ್ʼ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ದುನಿಯಾ ವಿಜಯ್
ಕನ್ನಡದ ಪ್ರತಿಭಾವಂತ ನಟರ ಪೈಕಿ ದುನಿಯಾ ವಿಜಯ್ ಕೂಡ ಒಬ್ಬರು. ಸಹಜ ಅಭಿನಯದಿಂದಲೇ ಗಮನ ಸೆಳೆದಿರುವ ಅವರು ಇದೀಗ ನಟನೆಯ ಜತೆಗೆ ನಿರ್ದೇಶನದಲ್ಲೂ ಮಿಂಚುತ್ತಿದ್ದಾರೆ. ಇದರ ಜತೆಗೆ ಪರಭಾಷೆಯಲ್ಲಿಯೂ ಗಮನ ಸೆಳೆದಿದ್ದಾರೆ. ಈ ವರ್ಷ ತೆರೆಕಂಡ ತೆಲುಗಿನ ʼವೀರ ಸಿಂಹ ರೆಡ್ಡಿʼ ಚಿತ್ರದಲ್ಲಿ ವಿಜಯ್ ಖಳ ನಟನಾಗಿ ಅಬ್ಬರಿಸಿದ್ದಾರೆ. ನಂದಮೂರಿ ಬಾಲಕೃಷ್ಣ ಅವರಿಗೆ ಸರಿ ಸಮಾನವಾಗಿ ತೆರೆ ಮೇಲೆ ಮಿಂಚಿ ಟಾಲಿವುಡ್‌ನಲ್ಲಿಯೂ ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಗೋಪಿಚಂದ್ ಮಲಿನೇನಿ ನಿರ್ದೇಶನದ ʼವೀರ ಸಿಂಹ ರೆಡ್ಡಿʼ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 134 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಪೃಥ್ವಿ ಅಂಬಾರ್
2020ರಲ್ಲಿ ತೆರೆಕಂಡ ಕನ್ನಡ ಚಿತ್ರ ‘ದಿಯಾ’ ಮೂಲಕ ಮೋಡಿ ಮಾಡಿದವರು ಪೃಥ್ವಿ ಅಂಬಾರ್. ಈ ಚಿತ್ರ ಒಟಿಟಿಯಲ್ಲಿಯೂ ತೆರೆಕಂಡು ಪರಭಾಷಿಕರ ಗಮನ ಸೆಳೆದಿತ್ತು. ಬಳಿಕ ಹಿಂದಿ ಚಿತ್ರರಂಗಕ್ಕೂ ಕಾಲಿಟ್ಟಿದ್ದ ಪೃಥ್ವಿ ಅಂಬಾರ್ ಈ ವರ್ಷ ‘ಸರಿ’ ಚಿತ್ರದ ಮೂಲಕ ಮರಾಠಿ ಸಿನಿಮಾ ಕ್ಷೇತ್ರಕ್ಕೆ ಪಾದರ್ಪಣೆ ಮಾಡಿದ್ದಾರೆ. ಕೆ.ಎಸ್.ಅಶೋಕ್ ನಿರ್ದೇಶನದ ಈ ಚಿತ್ರ ಕನ್ನಡದ ʼದಿಯಾʼ ಸಿನಿಮಾದ ರಿಮೇಕ್. ಇಲ್ಲೂ ಆದಿ ಪಾತ್ರದ ಮೂಲಕ ಪೃಥ್ವಿ ಅಂಬಾರ್ ಮರಾಠಿಗರ ಗಮನ ಸೆಳೆದಿದ್ದಾರೆ.
ಆಶಿಕಾ ರಂಗನಾಥ್
ಸ್ಯಾಂಡಲ್‌ವುಡ್‌ನ ‘ಚುಟು ಚುಟು’ ಬೆಡಗಿ ಆಶಿಕಾ ರಂಗನಾಥ್ ಈ ವರ್ಷ ‘ಅಮಿಗೋಸ್’ ಚಿತ್ರದ ಮೂಲಕ ಟಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಕಳೆದ ವರ್ಷ ʼಪಟ್ಟಥು ಅರಸನ್ʼ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದ ಆಶಿಕಾ ರಂಗನಾಥ್ ಈ ವರ್ಷ ತೆಲುಗು ಚಿತ್ರದೊಂದಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ ʼಅಮಿಗೋಸ್ʼ ನಿರೀಕ್ಷಿತ ಮಟ್ಟದಲ್ಲಿ ಗೆಲುವು ದಾಖಲಿಸಲಿಲ್ಲ. ರಾಜೇಂದ್ರ ರೆಡ್ಡಿ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ನಂದಮೂರಿ ಕಲ್ಯಾಣ್ ರಾಮ್ ನಾಯಕನಾಗಿ ನಟಿಸಿದ್ದರು. ಚಿತ್ರ ಸೋತರೂ ಆಶಿಕಾ ತೆಲುಗು ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಸದ್ಯ ಅವರು ಟಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರುವತ್ತ ಸೂಚನೆ ನೀಡಿದ್ದಾರೆ. ನಾಗಾರ್ಜುನ ನಾಯಕನಾಗಿ ಕಾಣಿಸಿಕೊಂಡಿರುವ ತೆಲುಗಿನ ಬಹು ನಿರೀಕ್ಷಿತ ಚಿತ್ರ ʼನಾ ಸಾಮಿ ರಂಗʼ ಚಿತ್ರಕ್ಕೆ ಆಶಿಕಾ ನಾಯಕಿ. ಮುಂದಿನ ವರ್ಷ ಇದು ತೆರೆಗೆ ಬರಲಿದೆ.
ಸಪ್ತಮಿ ಗೌಡ
ಕಳೆದ ವರ್ಷ ತೆರೆಕಂಡ ರಿಷಬ್ ಶೆಟ್ಟಿ ನಿರ್ದೇಶಿಸಿ, ನಾಯಕನಾಗಿ ಕಾಣಿಸಿಕೊಂಡ ʼಕಾಂತಾರʼ ಚಿತ್ರದ ಮೂಲಕ ದೇಶದ ಗಮನ ಸೆಳೆದವರು ಸಪ್ತಮಿ ಗೌಡ. ಲೀಲಾ ಪಾತ್ರದಲ್ಲಿ ಅವರು ಮೋಡಿ ಮಾಡಿದ್ದರು. ಈ ವರ್ಷ ಸಪ್ತಮಿ ಗೌಡ ನಟನೆಯ ಕನ್ನಡ ಚಿತ್ರ ತೆರೆಗೆ ಬರದಿದ್ದರೂ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಬಾಲಿವುಡ್‌ನ ಜನಪ್ರಿಯ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಆ್ಯಕ್ಷನ್ ಕಟ್ ಹೇಳಿದ ʼದಿ ವ್ಯಾಕ್ಸಿನ್ ವಾರ್ʼ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟ ಸಪ್ತಮಿ ಗೌಡ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಚಿತ್ರ ಹಿಟ್ ಆಗದಿದ್ದರೂ ನಾನಾ ಪಾಟೇಕರ್, ಪಲ್ಲವಿ ಜೋಷಿ, ಅನುಪಮ್ ಖೇರ್ ಮುಂತಾದ ಮೇರು ಕಲಾವಿದರೊಂದಿಗೆ ತೆರೆ ಹಂಚಿಕೊಳ್ಳುವ ಅವಕಾಶ ಅವರಿಗೆ ಲಭಿಸಿತ್ತು. ಡಾ. ಶ್ರೀಲಕ್ಷ್ಮೀ ಮೋಹನ್‌ದಾಸ್ ಎನ್ನುವ ವಿಜ್ಞಾನಿ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಸದ್ಯ ಅವರು ತೆಲುಗು ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: Year Ender 2023: ಈ ವರ್ಷ ಸುದ್ದಿಯಲ್ಲಿದ್ದ ಟಿವಿ ಸ್ಟಾರ್‌ಗಳಿವರು!