ಬೆಂಗಳೂರು: ಸುಮಲತಾ ಅವರು ಪುತ್ರ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ (Abhishek Ambareesh) ವಿವಾಹೋತ್ಸವಕ್ಕೆ ಪ್ರಧಾನಿ ಮೋದಿ (Narendra Modi) ಅವರನ್ನು ಭೇಟಿ ಮಾಡಿ ಆಹ್ವಾನ ನೀಡಿದ್ದಾರೆ. ಇದರ ಬೆನ್ನಲ್ಲೇ ಮದುವೆ ಯಾವಾಗ, ಎಲ್ಲಿ ನಡೆಯುತ್ತದೆ ಎಂಬ ವಿಚಾರ ಬಹಿರಂಗಗೊಂಡಿದೆ. ಅಭಿಷೇಕ್ ಹಾಗೂ ಅವಿವಾ ವಿವಾಹ ಜೂನ್ 9 ಹಾಗೂ 10 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ವಿಶೇಷವೆಂದರೆ ಮಂಡ್ಯದಲ್ಲಿ ಜೂನ್ 12ರಂದು ರಿಸೆಪ್ಷನ್ ಹಾಗೂ ಬೀಗರ ಊಟ ಕಾರ್ಯಕ್ರಮ ನಡೆಯಲಿದೆ.
ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ನಿಶ್ಚಿತಾರ್ಥವು ಕೆಲವು ತಿಂಗಳ ಹಿಂದೆ ನಡೆದಿತ್ತು. ಜೋಡಿಯ ಆಮಂತ್ರಣ ಪತ್ರಿಕೆ ಹಂಚಿಕೆ ಪ್ರಾರಂಭವಾಗಿದೆ. ಅಭಿಷೇಕ್ ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ (Sumalatha Ambareesh) ಅವರುಗಳು ಮದುವೆ ಆಮಂತ್ರಣ ಪತ್ರಿಕೆ ವಿತರಣೆ ಆರಂಭಿಸಿದ್ದು, ಪ್ರಧಾನಿ ಮೋದಿ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇನ್ನಿತರೆ ದೆಹಲಿಯ ಗಣ್ಯ ರಾಜಕಾರಣಿಗಳಿಗೆ ಆಹ್ವಾನ ಪತ್ರಿಕೆ ವಿತರಿಸಿ ಮದುವೆಗೆ ಆಹ್ವಾನಿಸಿದ್ದಾರೆ.
ಅಭಿಷೇಕ್ ಹಾಗೂ ಅವಿವಾ ವಿವಾಹಕ್ಕೆ ಸುಮಾರು 10,000 ಅತಿಥಿಗಳು ಆಗಮಿಸುವ ನಿರೀಕ್ಷೆ ಇದೆ. ರಾಜಕಾರಣಿಗಳ ಜತೆಗೆ ರಜನೀಕಾಂತ್ ಸೇರಿದಂತೆ ಹಲವು ಪ್ರಮುಖ ತಾರೆಯರು ಅಭಿಷೇಕ್ ಹಾಗೂ ಅವಿವಾ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಸ್ತ್ರ ವಿನ್ಯಾಸಕಿ ಆಗಿರುವ ಅವಿವಾ ಬಿದ್ದಪ್ಪ ಅವರೇ ತಮ್ಮ ಹಾಗೂ ಅಭಿಷೇಕ್ ತೊಡಲಿರುವ ಉಡುಗೆಯನ್ನು ಡಿಸೈನ್ ಮಾಡುತ್ತಿರುವುದು ವಿಶೇಷ.
ಇದನ್ನೂ ಓದಿ: Abhishek Ambareesh | ಅವೀವಾ ಬಿದ್ದಪ್ಪ ಜತೆ ವಿವಾಹವಾಗಲಿರುವ ಅಭಿಷೇಕ್ ಅಂಬರೀಶ್: ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್!
ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ (Abhishek Ambareesh) ಹಾಗೂ ಅವಿವಾ ಬಿದ್ದಪ್ಪ ನಿಶ್ಚಿತಾರ್ಥ ಡಿಸೆಂಬರ್ 11ರಂದು ಬೆಂಗಳೂರಿನ ಫೋರ್ ಸೀಸನ್ಸ್ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆದಿತ್ತು. ನಾಲ್ಕು ವರ್ಷಗಳಿಂದ ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ಪ್ರೀತಿಸುತ್ತಿದ್ದರು. ತಮ್ಮ ಪ್ರೀತಿ ವಿಚಾರವನ್ನು ಕುಟುಂಬಕ್ಕೆ ತಿಳಿಸಿ ಗ್ರೀನ್ ಸಿಗ್ನಲ್ ಪಡೆದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅವಿವಾ ಬಿದ್ದಪ್ಪ ಫ್ಯಾಷನ್ ಲೋಕದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮದೇ ಸ್ವಿಮ್ ಸೂಟ್ ಬ್ರ್ಯಾಂಡ್‌ನ ಲಾಂಚ್ ಮಾಡಿದ್ದಾರೆ.