ಹೊಸಪೇಟೆ: ಕನ್ನಡದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ (Hombale Films) ನಿರ್ಮಿಸುತ್ತಿರುವ, ಯುವ ರಾಜ್‌ಕುಮಾರ್ ಅಭಿನಯದ ಚಿತ್ರ ʼಯುವʼ (Yuva Movie). ಮಾರ್ಚ್ 29ರಂದು ಈ ಸಿನಿಮಾ ತೆರೆ ಕಾಣಲಿದೆ. ಆ ಮೂಲಕ ವರನಟ ಡಾ. ರಾಜ್ ಕುಮಾರ್ ಕುಟುಂಬದ ಇನ್ನೊಂದು ಕುಡಿ ಚಿತ್ರರಂಗದಲ್ಲಿ ಮಿಂಚಲು ಸಜ್ಜಾಗಿದೆ. ಯಶಸ್ವಿ ನಿರ್ದೇಶಕ ಸಂತೋಷ್ ಆನಂದ್ರಾಮ್ (Santhosh Ananddram) ಆ್ಯಕ್ಷನ್ ಕಟ್ ಹೇಳುತ್ತಿರುವ ʼಯುವʼ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿ ಗಮನ ಸೆಳೆದಿತ್ತು. ಇದೀಗ ಶನಿವಾರ (ಮಾರ್ಚ್ 23) ಹೊಸಪೇಟೆಯಲ್ಲಿ ಅದ್ಧೂರಿಯಾಗಿ ‘ಯುವ’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಡೆಯಿತು.
ಯುವ ರಾಜ್‌ಕುಮಾರ್ ಹೇಳಿದ್ದೇನು?
ಕಾರ್ಯಕ್ರಮದಲ್ಲಿ ಮಾತನಾಡಿದ ಯುವ ರಾಜ್‌ಕುಮಾರ್, “ಚಿಕ್ಕಪ್ಪ (ಪುನೀತ್ ರಾಜ್‌ಕುಮಾರ್) ನನ್ನನ್ನು ಇಲ್ಲಿವರೆಗೆ ತಂದು ನಿಮ್ಮ ಮಡಿಲಿಗೆ ಹಾಕಿದ್ದಾರೆ. ಮುಂದೆ ನನ್ನನ್ನು ನೀವೇ ನೋಡಿಕೊಳ್ಳಬೇಕು. ನೀವು ಹೇಗೆ ಮುನ್ನಡೆಸುತ್ತಿರೋ ಹಾಗೇ ನಾನು ಸಾಗುತ್ತೇನೆ. ಡಾ. ರಾಜ್ ಕುಟುಂಬದಲ್ಲಿ ಹುಟ್ಟಿದ ಮಾತ್ರಕ್ಕೆ ಅವಕಾಶಗಳು ಸುಲಭವಾಗಿ ಸಿಗುತ್ತವೆ ಎಂಬುದು ಸುಳ್ಳು. ನಾನು ನಟನಾಗುತ್ತೇನೆ ಎಂದು ಚಿಕ್ಕವನಿದ್ದಾಗಲೇ ಮನೆಯವರು ನಿರ್ಧರಿಸಿಬಿಟ್ಟಿದ್ದರು. ಆದರೆ ನಾನು ಇಷ್ಟು ದಿವಸ ಅವಕಾಶಕ್ಕಾಗಿ ಕಾದಿದ್ದೆ. ಕೊನೆಗೆ ಸಮರ್ಥವಾಗಿ ನಿಮಗೆ ಇಷ್ಟವಾಗುವ ರೀತಿಯಲ್ಲೂ ಸಿದ್ಧವಾಗಿ ಸಿನಿಮಾ ಮಾಡಿದ್ದೇನೆ. ಈ ಸಿನಿಮಾ ಆಗಿದ್ದಕ್ಕೆ ನಮ್ಮ ಚಿಕ್ಕಪ್ಪ ಮತ್ತು ಚಿಕ್ಕಮ್ಮ (ಅಶ್ವಿನಿ ಪುನೀತ್ ರಾಜ್‌ಕುಮಾರ್) ಅವರೇ ಕಾರಣʼʼ ಎಂದು ಭಾವುಕರಾಗಿ ನುಡಿದರು. ಈ ವೇಳೆ ಅವರು ವೇದಿಕೆಯಲ್ಲಿ ʼನಿನ್ನ ಕಂಗಳ ಬಿಸಿಯ ಹನಿಗಳುʼ ಹಾಡನ್ನು ಹಾಡಿದರು.
ಭಾವುಕರಾದ ರಾಘವೇಂದ್ರ ರಾಜ್‌ಕುಮಾರ್
ಯುವ ರಾಜ್‌ಕುಮಾರ್ ಅವರ ತಂದೆ ರಾಘವೇಂದ್ರ ರಾಜ್‌ಕುಮಾರ್ ಮಾತನಾಡಿ, ʼʼನನ್ನ ಮಗನ ವಿಚಾರದಲ್ಲಿ ಒಬ್ಬ ತಂದೆ ಮಾಡುವ ಕೆಲಸವನ್ನು ಅಪ್ಪು (ಪುನಿತ್ ರಾಜ್‌ಕುಮಾರ್) ಮಾಡಿ ಹೋಗಿದ್ದಾನೆ. ಹಾಗಾಗಿ ಯುವ ಅಪ್ಪು ಅವರ ಮಗನಾಗಿ ಪರಿಚಯವಾಗುತ್ತಿದ್ದಾನೆ. ಅವನು ನನ್ನ ಮಗನಲ್ಲ. ಅಪ್ಪು ಮಗ. ಅವನ ಮೇಲೆ ದೊಡ್ಡ ಜವಾಬ್ದಾರಿ ಇದೆ. ಅಪ್ಪುವಿನಂತೆ ನನ್ನ ಮಗನೂ ತಗ್ಗಿ ಬಗ್ಗಿ ನಡೆಯುವ ಗುಣವನ್ನು ಬೆಳೆಸಿಕೊಂಡು, ಅಭಿಮಾನಿಗಳನ್ನು ದೇವರಾಗಿ ಕಾಣಬೇಕು” ಎಂದು ಹೇಳಿದರು.
ʼʼಈ ಹಿಂದೆ ಪುನೀತ್ ಅವರ ‘ಯುವರತ್ನ’ ಸಿನಿಮಾದ ಪ್ರಚಾರಕ್ಕಾಗಿ ಹೊಸಪೇಟೆಗೆ ಬಂದಿದ್ದೆವು. ‘ಯುವರತ್ನ’ದಿಂದ ‘ಯುವ’ವರೆಗೆ ನನ್ನದು ಬಹಳ ಸವಾಲಿನ ಪಯಣ. ಈ ನಡುವೆ ನಾನು ಸಾಕಷ್ಟು ಕಳೆದುಕೊಂಡಿದ್ದೇನೆ. ನನ್ನ ಅಣ್ಣ ಪುನೀತ್ ರಾಜ್‌ಕುಮಾರ್ ಅವರನ್ನು ನಾನು ಕಳೆದುಕೊಂಡೆ. ನನ್ನನ್ನು ಒಬ್ಬಂಟಿಯಾಗಿ ಬಿಡದೆ, ನನ್ನನ್ನು ಮತ್ತೆ ಕೆಲಸ ಮಾಡುವಂತೆ ಪ್ರೇರೇಪಿಸಿದ್ದು ಅಪ್ಪು ಅವರ ಅಭಿಮಾನಿಗಳುʼʼ ಎಂದು ಸಂತೋಷ್ ಆನಂದ್ರಾಮ್ ತಿಳಿಸಿದರು. ಗಾಯಕ ವಿಜಯ್ ಪ್ರಕಾಶ್ ಅವರು ‘ರಾಜಕುಮಾರ’ ಸಿನಿಮಾದ ‘ಬೊಂಬೆ ಹೇಳುತೈತೆ…’ ಹಾಡು ಹಾಡುತ್ತಿದ್ದ ವೇಳೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಭಾವುಕರಾದರು.
ಇದನ್ನೂ ಓದಿ: Yuva Movie: ಡ್ಯಾನ್ಸ್ ಮೂವ್ಸ್‌ನಲ್ಲಿ ಕಿಚ್ಚು ಹಚ್ಚಿದ ದೊಡ್ಮನೆ ಕುಡಿಗಳು: ಯಾರು ಬೆಸ್ಟ್?
ನಟ ವಿನಯ್ ರಾಜಕುಮಾರ್, ನಿರ್ಮಾಪಕ ವಿಜಯ್ ಕಿರಗಂದೂರು, ಕಲಾವಿದರಾ ಅಚ್ಯುತ್ ಕುಮಾರ್, ಸುಧಾರಾಣಿ, ಹಿತಾ ಚಂದ್ರಶೇಖರ್, ನಿಶ್ವಿಕಾ ನಾಯ್ಡು, ಗಿರಿರಾಜ್ ನವೀನ್ ಸಜ್ಜು ಮುಂತಾದವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಯುವ ಚಿತ್ರದಲ್ಲಿ ನಾಯಕಿಯಾಗಿ ಸಪ್ತಮಿ ಗೌಡ ಅಭಿನಯಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ