ಬೆಂಗಳೂರು: ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಮಗ ಯೂತ್ ಸ್ಟಾರ್ ಯುವ ರಾಜ್‌ಕುಮಾರ್ (Yuva Rajkumar) ಏಪ್ರಿಲ್ 23ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಜನುಮದಿನಕ್ಕೆ ಸಿನಿ ಗಣ್ಯರು ಸೇರಿದಂತೆ ಯುವ ಅಭಿಮಾನಿಗಳು ಶುಭಾಶಯ ತಿಳಿಸಿಸುತ್ತಿದ್ದಾರೆ. ಯುವರಾಜ್‌ಕುಮಾರ್ ಅವರ ಚೊಚ್ಚಲ ʻಯುವʼ ಸಿನಿಮಾ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ. ಹೊಸ ಪೋಸ್ಟರ್ ಹಂಚಿಕೊಳ್ಳುವ ಮೂಲಕ ‘ಹೊಂಬಾಳೆ ಫಿಲ್ಮ್ಸ್’ ಯುವ ರಾಜ್ಕುಮಾರ್ಗೆ ಶುಭಾಶಯ ಕೋರಿದೆ.
ಯುವ ರಾಜ್‌ಕುಮಾರ್ ಅವರ ಜನುಮದಿನ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಅವರ ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ. ಕೇಕ್ ಕಟ್ ಮಾಡುವುದರಿಂದ ಹಿಡಿದು ಸಮಾಜಮುಖಿ ಕೆಲಸಗಳನ್ನು ಮಾಡಲಾಗುತ್ತಿದೆ. ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ವಿತರಣೆ, ಪರಿಸರ ಸಂರಕ್ಷಣೆ ಹಿನ್ನೆಲೆಯಲ್ಲಿ ಸಸಿಯನ್ನು ವಿತರಣೆ ಮಾಡಲಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಪೋಸ್ಟರ್
ಸಂತೋಷ್ ಆನಂದ್ ರಾಮ್- ಯುವ ಕಾಂಬಿನೇಷನ್ ವಿಶೇಷವಾಗಿದೆ. ಡಿಸೆಂಬರ್ 22ರಂದು ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಅಜನೀಶ್ ಲೋಕನಾಥ್ ಸಂಗೀತ, ಶ್ರೀಶ ಕುದುವಳ್ಳಿ ಛಾಯಾಗ್ರಹಣ ‘ಯುವ’ ಚಿತ್ರಕ್ಕಿದೆ.
ಇದನ್ನೂ ಓದಿ: Kannnada New Film: ಯುವ ಪ್ರತಿಭೆಗಳಿಗೆ ನಾಗತಿಹಳ್ಳಿ ಚಂದ್ರಶೇಖರ್ ಸಾಥ್; ಬನ್ ಟೀ ಸಿನಿಮಾದ ಟ್ರೈಲರ್ ರಿಲೀಸ್
AK 47 ಅಲ್ಲ, ಕ್ಷಿಪಣಿ ಎಂದ ರವಿಶಂಕರ್
ರವಿಶಂಕರ್ ಗೌಡ ‘ಯುವ’ ಸೆಟ್‌ಗೆ ಭೇಟಿ ಕೊಟ್ಟಿದ್ದರು. ಅಲ್ಲಿ ಯುವ ರಾಜ್‌ಕುಮಾರ್ ಆ್ಯಕ್ಷನ್ ನೋಡಿ ಬೆರಗಾಗಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. ʻʻಶೂಟಿಂಗ್ ಸೆಟ್‌ಗೆ ಹೋಗಿದ್ದೆ. ಫೈಟಿಂಗ್ ಸೀಕ್ವೆನ್ಸ್ ನೋಡಿದೆ. ನಿರೀಕ್ಷೆ , ನಂಬಿಕೆ ಸುಳ್ಳಾಗಲಿಲ್ಲ. ಉತ್ತರಾಧಿಕಾರಿಯ ಪಟ್ಟಾಭಿಷೇಕಕ್ಕೆ ಅಣಿ ಮಾಡಿಕೊಳ್ಳಿ. ನೀವು ಅಂದುಕೊಂಡಿರುವ ಹಾಗೆ ಇದು AK 47 ಅಲ್ಲ, ಕ್ಷಿಪಣಿ. ಜನುಮ ದಿನದ ಶುಭಾಶಯಗಳು ಪ್ರೀತಿಯ ಯುವ ರಾಜʼʼ ಎಂದು ಬರೆದುಕೊಂಡಿದ್ದಾರೆ.
ಅಪ್ಪು ದಾರಿಯಲ್ಲೇ…
20 ವರ್ಷಗಳ ಹಿಂದೆ ಪುನೀತ್ ರಾಜ್‌ಕುಮಾರ್ ‘ಅಪ್ಪು’ ಆಗಿ ಚಿತ್ರರಂಗದಲ್ಲಿ ಖ್ಯಾತಿ ಪಡೆದರು. ಮನೆಯಲ್ಲಿ ಎಲ್ಲರೂ ಪುನೀತ್ ರಾಜ್‌ಕುಮಾರ್ ಅವರನ್ನು ಅಪ್ಪು ಎಂದೇ ಕರೆಯುತ್ತಿದ್ದರು. ಹಾಗಾಗಿ ತಮ್ಮದೇ ಹೆಸರಿನ ಟೈಟಲ್ ಸಿನಿಮಾದಲ್ಲಿ ನಟಿಸಿ ಪುನೀತ್ ಗೆದ್ದರು. ಈಗ ಯುವ ಕೂಡ ತಮ್ಮದೇ ಹೆಸರಿನ ಟೈಟಲ್ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅವರಿಗೆ ಯಶಸ್ಸು ಖಚಿತ ಅನ್ನುತ್ತಿದ್ದಾರೆ ಅಭಿಮಾನಿಗಳು.