ಬೆಂಗಳೂರು: ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಸರ್ಕಾರಕ್ಕೆ ಒಟ್ಟು 5 ವರದಿಗಳನ್ನು ಸಲ್ಲಿಸಿದೆ ಎಂದು ಸಿಎಂ ಬೊಮ್ಮಾಯಿ ಅವರು ರಾಜ್ಯ ಬಜೆಟ್ನಲ್ಲಿ (karnataka budget 2023) ಘೋಷಿಸಿದ್ದಾರೆ. ಇದರಲ್ಲಿ 3,630 ಇಲಾಖಾವಾರು ಶಿಫಾರಸುಗಳಿವೆ. ಆಯೋಗದ ಶಿಫಾರಸುಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಆಡಳಿತದಲ್ಲಿ ದಕ್ಷತೆ ಹಾಗೂ ಪಾರದರ್ಶಕತೆ ತರುವ ಮೂಲಕ ಮನೆ ಬಾಗಿಲಿಗೇ ಸರ್ಕಾರ ತಲುಪಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಬಜೆಟ್ನಲ್ಲಿ ಪ್ರಕಟಿಸಲಾಗಿದೆ.
ರಾಜ್ಯ ಸರ್ಕಾರವು 1,475 ತಾಂಡ, ಗೊಲ್ಲರಹಟ್ಟಿ, ಕುರುಬರಹಟ್ಟಿ ಮತ್ತು ಇತರೆ ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿದೆ. ಈ ಪೈಕಿ ಕಲಬುರಗಿ, ರಾಯಚೂರು, ವಿಜಯನಗರ, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳಲ್ಲಿ 342 ದಾಖಲೆರಹಿತ ಜನವಸತಿಗಳ 52,000 ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಿ ದಾಖಲೆ ನಿರ್ಮಿಸಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಸರ್ಕಾರಿ ಜಮೀನನ್ನು ದಶಕಗಳಿಂದ ಒತ್ತುವರಿ ಮಾಡಿಕೊಂಡು ಕಾಫಿ, ಟೀ, ಮತ್ತು ಇನ್ನಿತರೆ ಪ್ಲಾಂಟೇಶನ್ ಬೆಳೆಗಳನ್ನು ಬೆಳೆಯುತ್ತಿರುವ ಜಮೀನುಗಳನ್ನು 30 ವರ್ಷಗಳ ಅವಧಿಗೆ ಗರಿಷ್ಠ 25 ಎಕರೆ ಮಿತಿಗೆ ಒಳಪಟ್ಟು ಗುತ್ತಿಗೆ ನೀಡಲು ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ.
1.5 ಕೋಟಿ ಅರ್ಜಿಗಳನ್ನು ವಿಲೇವಾರಿ
ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ನೀಡಲಾಗುತ್ತಿದ್ದ ಹಲವು ಸೇವೆಗಳನ್ನು ನಾಡ ಕಚೇರಿ ಹಾಗೂ ಗ್ರಾಮ ಒನ್ ಕೇಂದ್ರಗಳ ಮೂಲಕ 1.5 ಕೋಟಿ ಅರ್ಜಿಗಳನ್ನು ವಿಲೇ ಮಾಡಲಾಗಿದೆ. ಹಲೋ ಕಂದಾಯ ಸಚಿವರೇʼ ಸಹಾಯವಾಣಿ ಯೋಜನೆಯಡಿ ಒಂದು ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ 79,951 ಅರ್ಹ ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಆದೇಶ ನೀಡಲಾಗಿದೆ ಎಂದ ಬಜೆಟ್ನಲ್ಲಿ ಪ್ರಕಟಿಸಲಾಗಿದೆ.
ಗೋಮಾಳ, ಗಾಯರಾಣ, ಹುಲ್ಲುಬನ್ನಿ, ಸೊಪ್ಪಿನ ಬೆಟ್ಟ ಇತ್ಯಾದಿ ಗ್ರಾಮೀಣ ಪ್ರದೇಶದ ಸರ್ಕಾರಿ ಜಮೀನುಗಳನ್ನು ಮಂಜೂರು ಮಾಡುವ ಕುರಿತು ನೀತಿಯನ್ನು ರೂಪಿಸುವ ಸಲುವಾಗಿ ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದೆ ಎಂದು ಬಜೆಟ್ನಲ್ಲಿ ಸೂಚಿಸಲಾಗಿದೆ.
ಭೂ ಮಂಜೂರಾತಿ ನಿಯಮಗಳು 1969ಕ್ಕೆ ತಿದ್ದುಪಡಿ
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೇರು ಕೃಷಿ ಉದ್ದೇಶಕ್ಕಾಗಿ ಗುತ್ತಿಗೆಗೆ ನೀಡಲಾಗಿರುವ ಸುಮಾರು 4,292 ಎಕರೆ ಜಮೀನನ್ನು ಮಾರ್ಗಸೂಚಿ ಮೌಲ್ಯವನ್ನು ವಿಧಿಸಿ ಕಾಯಂ ಆಗಿ ಮಂಜೂರು ಮಾಡಲು ಕರ್ನಾಟಕ ʻಭೂ ಮಂಜೂರಾತಿ ನಿಯಮಗಳು 1969ʼ ಗೆ ತಿದ್ದುಪಡಿ ತರಲು ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಸರ್ಕಾರಿ ಜಮೀನಿನಲ್ಲಿ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸಲು ನಮೂನೆ-57 ರಲ್ಲಿ ಅರ್ಜಿ ಸಲ್ಲಿಸಲು ದಿನಾಂಕ: 30.05.2022 ರಿಂದ ಒಂದು ವರ್ಷದ ಅವಧಿಯವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ.
ಇದನ್ನೂ ಓದಿ : karnataka budget 2023 : ಕ್ರೀಡಾಸಕ್ತರ ಪಾಲಿಗೂ ಸೂಪರ್ ಬಜೆಟ್ ಕೊಟ್ಟ ಸಿಎಂ ಬೊಮ್ಮಾಯಿ
ರೈತರಿಗೆ ತುರ್ತಾಗಿ ಭೂಮಾಪನಾ ನಕ್ಷೆ ಬೇಕಾಗಿದ್ದಲ್ಲಿ ʻಸ್ವಾವಲಂಬಿʼ ಯೋಜನೆಯಡಿ ಸ್ವತಃ ನಕ್ಷೆ ತಯಾರಿಸಲು ಅವಕಾಶ ಕಲ್ಪಿಸಲಾದೆ. 5 ಸಾವಿರಕ್ಕಿಂತ ಹೆಚ್ಚು ಜನ ಈಗಾಗಲೇ ಈ ಸೌಲಭ್ಯ ಪಡೆದುಕೊಂಡಿದ್ದಾರೆ. ಪೋಡಿ ಮುಕ್ತ ಅಭಿಯಾನ ಯೋಜನೆ ಗಣಕೀಕೃತಗೊಳಿಸಿ ಮೋಜಣಿ ಗಣಕ ವ್ಯವಸ್ಥೆಯಲ್ಲಿ ಅನುಷ್ಠಾನಗೊಳಿಸಲಾಗುವುದು. ಈ ಸಾಲಿನಲ್ಲಿ 3,000 ಗ್ರಾಮಗಳನ್ನು ಪೋಡಿ ಮುಕ್ತಗೊಳಿಸಲಾಗುವುದು ಎಂದು ಬಜೆಟ್ನಲ್ಲಿ ಘೋಷಿಸಲಾಗಿದೆ.