Site icon Vistara News

ಭಗತ್‌ ಸಿಂಗ್‌ ಪಾಠ ಕೈಬಿಟ್ಟಿದ್ದರೆ‌ ಗಲ್ಲಿಗೆ ಹಾಕಿ: ಸುಧಾಕರ್‌ ಸವಾಲು

ಮಂಡ್ಯ: ರಾಜ್ಯದಲ್ಲಿ ಪಠ್ಯ ಪುಸ್ತಕ ವಿವಾದದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ತಜ್ಞ ಸುಧಾಕರ್‌ ಹೊಸಹಳ್ಳಿ, ಪಠ್ಯದಲ್ಲಿ ಭಗತ್ ಸಿಂಗ್‌ ಪಾಠವನ್ನು ಸೇರಿಸಿಲ್ಲ‌ ಎಂದರೆ ನನ್ನನ್ನು ಗಲ್ಲಿಗೆ ಹಾಕಿ ಎಂದಿದ್ದಾರೆ. 10ನೇ ತರಗತಿಯ ಪುಸ್ತಕದಲ್ಲಿ ಭಗತ್‌ ಸಿಂಗ್‌ ಕುರಿತಾದ ಪಠ್ಯವನ್ನು ಕೈಬಿಡಲಾಗಿದೆ ಎಂದು ವಿವಾದ ಸೃಷ್ಟಿಯಾಗಿತ್ತು. ಈ ಬಗ್ಗೆ ಸುಧಾಕರ್‌ ಸ್ಪಷ್ಟನೆ ನೀಡಿದ್ದಾರೆ.

ಅನವಶ್ಯಕವಾಗಿ ಊಹಾಹಪೋಹ ವಿವಾದ ಸೃಷ್ಟಿಸಲಾಗುತ್ತಿದೆ. ಸರ್ಕಾರದ ಶಿಕ್ಷಣ ಕಾಯ್ದೆಯಡಿ ಪಠ್ಯ ಪರಿಷ್ಕರಣ ಮಾಡಲಾಗಿದೆ. ಭಗತ್‌ ಸಿಂಗ್‌ ಕುರಿತಾದ ಪಠ್ಯವನ್ನು ತೆಗೆದಿಲ್ಲ ಹಾಗೂ ಹೆಡಗೆವಾರ್‌ ಕುರಿತಾದ ಪಠ್ಯವನ್ನು ಸೇರಿಸಿಲ್ಲ. ಹೆಡಗೆವಾರ್‌ ಅವರು ನಾಯಕತ್ವದ ಕುರಿತು ಹೇಳಿರುವ ಲೇಖನವನ್ನು ಪಠ್ಯದಲ್ಲಿ ಸೇರಿಸಲಾಗಿದೆ ಎಂದು ಸುಧಾಕರ್‌ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ | ತಿಳಿಗೇಡಿ ಯುವಕನಿಂದ ಪಠ್ಯಪುಸ್ತಕ ಪರಿಷ್ಕರಣೆ ಎಂದ ಸಿದ್ದರಾಮಯ್ಯ

ಶಿಕ್ಷಣ ಕ್ಷೇತ್ರವನ್ನು ಧರ್ಮ ಬೋಧನೆಗೆ ದಾಳವನ್ನಾಗಿ ಬಳಸಿಕೊಳ್ಳಲಾಗಿದೆ ಎಂದು ವಿರೋಧ ಪಕ್ಷದವರ ಆಕ್ಷೇಪಕ್ಕೆ ಸುಧಾಕರ್‌ ಉತ್ತರ ನೀಡಿ, ʼಸಂವಿಧಾನದ 21ನೇ ವಿಧಿ ಪ್ರಕಾರ ಸರ್ಕಾರ ಹಾಗೂ ಅನುದಾನಿತ ಶಾಲೆಗಳಲ್ಲಿ ಧಾರ್ಮಿಕ ವಿಚಾರ ಭೋದಿಸುವಂತಿಲ್ಲ. ಆದರೆ ನೀವು 9ನೇ ತರಗತಿಯ ಮೊದಲ ಪಾಠವಾಗಿ ಕ್ರೈಸ್ತ ಹಾಗೂ ಮುಸ್ಲಿಂ ಧರ್ಮದ ಪಠ್ಯ ಸೇರಿಸಿದ್ದೀರಿ. ಹಿಂದೂ ಧರ್ಮ ಕೈಬಿಟ್ಟು ಅನ್ಯ ಧರ್ಮಗಳ ಪಠ್ಯ ಸೇರಿಸಿದ್ದೀರಾ. ನೀವು ಮಕ್ಕಳಿಗೆ ಇಷ್ಟು ದಿನ ಸುಳ್ಳುಗಳನ್ನ ಕಲಿಸುತ್ತಾ ಬಂದಿದ್ದೀರʼ ಎಂದು ಆರೋಪಿಸಿದರು.

ಈ ಬಾರಿಯ ಪಠ್ಯದಲ್ಲಿ ಮಹಿಳಾ ಹೋರಾಟಗಾರರ ಬಗ್ಗೆ, ಭಗತ್ ಸಿಂಗ್ ಬಗ್ಗೆ, ಶ್ರೇಷ್ಠ ಬರಹಗಾರ ಗೋವಿಂದ ಪೈ ಅವರ ಬಗ್ಗೆ, ಅಗ್ರಗಣ್ಯ ಸಾಹಿತಿ ಭೈರಪ್ಪನವರ ಬಗ್ಗೆಯೂ ಪಠ್ಯವನ್ನು ಸೇರಿಸಲಾಗಿದೆ. ಸಾಂವಿಧಾನಿಕವಾಗಿಯೇ ಪಠ್ಯ ಪರಿಷ್ಕರಣೆ ಮಾಡಲಾಗಿದೆ. ಯಾವುದೇ ವಿವಾದ ಮಾಡಿದರೂ ಪರಿಷ್ಕರಣೆ ಮಾಡಿದ್ದು ಕಾನೂನಾತ್ಮಕವಾಗಿ ಸರಿಯಿದೆ ಎಂದು ತಿಳಿಸಲಾಗಿದೆ ಎಂದು ಹೇಳಿದರು.

ಅಲ್ಲದೆ, ಈ ಬಾರಿಯ ಪುಸ್ತಕದಲ್ಲಿ ಹುಬ್ಬಳ್ಳಿಯ ಸಿದ್ಧಾರೂಢರ ಜಾತ್ರೆಯ ಕುರಿತ ಪಠ್ಯವನ್ನು ಸೇರ್ಪಡೆ ಮಾಡಲಾಗಿದೆ. ಉತ್ತರ ಕರ್ನಾಟಕದ ಆರಾಧ್ಯದೈವ ಶ್ರೀ ಸಿದ್ಧಾರೂಢರ ಜಾತ್ರೆಯ ಬಗ್ಗೆ ಪಾಠವನ್ನು ಸೇರಿಸಿರುವ ಕಾರಣ ಅಲ್ಲಿನ ಜನರಿಗೆ ಹಾಗೂ ಸಿದ್ಧಾರೂಢರ ಭಕ್ತರಿಗೆ ಅತ್ಯಂತ ಸಂತಸ ಮೂಡಿಸಿದೆ.

ಏಳನೇ ತರಗತಿಯ ಸಮಾಜ ವಿಜ್ಞಾನ ಭಾಗ 2 ರಲ್ಲಿ ನಾರಾಯಣ ಗುರುಗಳ ಬಗ್ಗೆಯೂ ಪಾಠವಿದೆ ಹಾಗೂ ಹಿಂದು-ಮುಸ್ಲಿಮರ ನಡುವೆ ಸಾಮರಸ್ಯ ತರಲು ಪ್ರಯತ್ನ ಮಾಡಿದ ಸರ್ ಸೈಯದ್‌ ಅಹ್ಮದ್‌ ಖಾನ್‌ ಬಗ್ಗೆಯೂ ಪಾಠವಿದೆ.

ಇದನ್ನೂ ಓದಿ:ಆರ್‌ಎಸ್‌ಎಸ್‌ ವಿರೋಧಿಗಳು ತುಂಡಾಸುರರು ಎಂದು ಬಣ್ಣಿಸಿದ ವಸಂತಕುಮಾರ್‌

Exit mobile version