ಮೈಸೂರು: ಪಠ್ಯಪುಸ್ತಕ ಪರಿಷ್ಕರಣೆ ವಿವಾದದ ಕುರಿತಾಗಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟನೆ ನೀಡಿದ್ದಾರೆ. ಪುಸ್ತಕಗಳು ಈಗಾಗಲೇ ಮುದ್ರಣವಾಗಿದ್ದು, ಇನ್ನು ಯಾವುದೇ ಪರಿಷ್ಕಾರ ಮಾಡುವ ಪ್ರಶ್ನೆಯೇ ಇಲ್ಲ ತಿಳಿಸಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷರನ್ನು ಆಯ್ಕೆ ಸರಿ ಇಲ್ಲ ಎಂದು ಕಿಡಿಕಾರಿದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ನಾಗೇಶ್ ವಾಗ್ದಾಳಿ ನಡೆಸಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಸರ್ಕಾರವನ್ನು ಪ್ರಶ್ನಿಸಲು ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದಿದ್ದಾರೆ.
ಪಠ್ಯ ಪುಸ್ತಕದ ಸಮಿತಿ ಅಧ್ಯಕ್ಷರನ್ನಾಗಿ ರೋಹಿತ್ ಚಕ್ರತೀರ್ಥ ಅವರನ್ನ ಆಯ್ಕೆ ಮಾಡಲಾಗಿತ್ತು. ಈ ವಿಚಾರದ ವಿರುದ್ದ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದರು. ರೋಹಿತ್ ಚಕ್ರತೀರ್ಥ ಶಿಕ್ಷಣ ತಜ್ಞರಲ್ಲ, ಅವರಿಗೆ ಸಮಿತಿಯ ಅಧ್ಯಕ್ಷರಾಗಲು ಏನು ಅರ್ಹತೆಯಿದೆ ಎಂದು ಪ್ರಶ್ನೆ ಮಾಡಿದ್ದರು. ಸಿದ್ದರಾಮಯ್ಯ ಅವರ ಈ ಆರೋಪದ ವಿಚಾರವಾಗಿ ಸಚಿವ ಬಿ.ಸಿ ನಾಗೇಶ್ ಉತ್ತರ ನೀಡಿದ್ದಾರೆ.
ಇದನ್ನೂ ಓದಿ | ತಿಳಿಗೇಡಿ ಯುವಕನಿಂದ ಪಠ್ಯಪುಸ್ತಕ ಪರಿಷ್ಕರಣೆ ಎಂದ ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರ ಈ ರೀತಿಯ ಮಾತುಗಳು ಅವರ ಅಹಂಕಾರವನ್ನು ತೋರಿಸುತ್ತದೆ. ನಾನೊಬ್ಬನೇ ಸರಿ ನಾನು ಮಾಡಿದ್ದೇ ಸರಿ ಎಂಬ ಅವರ ಧೋರಣೆ ಎಲ್ಲರ ಬಗ್ಗೆ ಏಕವಚನದಲ್ಲಿ ಮಾತನಾಡುವುದು, ಗೌರವ ನೀಡದಿರುವುದು, ಒಬ್ಬ ವ್ಯಕ್ತಿಯ ಬಗ್ಗೆ ಅವಹೇಳನ ಮಾತುಗಳನ್ನಾಡುವುದು ತಪ್ಪು. ಅಲ್ಲದೆ, ಸಿದ್ದರಾಮಯ್ಯ ಅವರ ಈ ವರ್ತನೆಗೆ, ಸಿದ್ದರಾಮಯ್ಯ ಕಾರಣರಲ್ಲ, ಅವರ ಹಿಂದಿರುವ ತಂಡ ಇದಕ್ಕೆಲ್ಲಾ ಕಾರಣ ಎಂದು ವ್ಯಂಗ್ಯ ಮಾಡಿದ್ದಾರೆ.
ಈ ಹಿಂದೆ ರೋಹಿತ್ ಚಕ್ರತೀರ್ಥ ಅವರು ನಾಡಗೀತೆಗೆ ಅವಮಾನ ಮಾಡಿದ್ದಾರೆ ಎಂದು ಅರೋಪಿಸಲಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ ನಾಗೇಶ್, ಈ ಪ್ರಕರಣದಲ್ಲಿ ಖುದ್ದು ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಿ ರಿಪೋರ್ಟ್ ಹಾಕಲಾಗಿದೆ. ಆರೋಪ ಮಾಡಲು ಸಿದ್ದರಾಮಯ್ಯ ಅವರಿಗೆ ನೈತಿಕತೆ ಇರಬೇಕು. ಸಿದ್ದರಾಮಯ್ಯ ಏಕೆ ಬಿ ರಿಪೋರ್ಟ್ ಕೊಡಿಸಿದರು? ಒಂದು ವೇಳೆ ರೋಹಿತ್ ಚಕ್ರತೀರ್ಥ ತಪ್ಪು ಮಾಡಿದ್ದರೆ ಜೈಲಿಗೆ ಹಾಕಬೇಕಿತ್ತು. ಯಾಕೆ ಹಾಕಿಲ್ಲ? ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿದರು. ಕಾಂಗ್ರೆಸ್ ಪಕ್ಷದವರು ಪಠ್ಯಪುಸ್ತಕದಿಂದ ದೇಶದ ಧ್ವಜದ ಪಾಠ ತೆಗೆದು ಹಾಕಿದವರು. ಅವರಿಗೆ ಈ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ? ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ | ಪಠ್ಯ ಕೈಬಿಟ್ಟಿರುವ ಬಗ್ಗೆ ಶಿಕ್ಷಣ ಸಚಿವರಿಂದ ತಪ್ಪು ಮಾಹಿತಿ: ಬರಗೂರು ಆರೋಪ