ಬೆಂಗಳೂರು: ಭಾರತೀಯ ಜ್ಞಾನ ಸಂಪತ್ತನ್ನು ಇಂದಿನ ಯುವಜನರಿಗೆ ಧಾರೆ ಎರೆಯುವ ಉದ್ದೇಶದಿಂದ ದೇವನಹಳ್ಳಿ ಸಮೀಪದ ಹರಳೂರಿನಲ್ಲಿ ಸ್ಥಾಪಿಸಲಾಗುತ್ತಿರುವ ಜಾಗತಿಕ ಮಟ್ಟದ ವಿವಿ “ಚಾಣಕ್ಯ ವಿಶ್ವವಿದ್ಯಾಲಯʼʼ (Chanakya University) ನವೆಂಬರ್ 19ರಂದು ಉದ್ಘಾಟನೆಯಾಗಲಿದೆ.
ರಾಷ್ಟ್ರೀಯ ಶಿಕ್ಷಣ ನೀತಿ-2020ಯ ಅನ್ವಯ ಸ್ಥಾಪನೆಯಾಗುತ್ತಿರುವ ಈ ವಿಶ್ವವಿದ್ಯಾಲಯವನ್ನು ನಗರದ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶನಿವಾರ ಸಂಜೆ 5 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಉದ್ಘಾಟಿಸಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಮೆರಿಕ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಮಂಜುಲ್ ಭಾರ್ಗವ, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಇನ್ಫೋಸಿಸ್ ಫೌಂಡೇಷನ್‌ನ ಸಂಸ್ಥಾಪಕಿ ಡಾ. ಸುಧಾಮೂರ್ತಿ, ಜಿಂದಾಲ್ ಅಲ್ಯೂಮಿನಿಯಂ ಲಿ.ಯ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಸೀತಾರಮ್ ಜಿಂದಾಲ್ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ-2020ರ ಕರಡು ಸಮಿತಿ ಅಧ್ಯಕ್ಷ ಡಾ. ಕಸ್ತೂರಿ ರಂಗನ್ ಅಧ್ಯಕ್ಷತೆ ವಹಿಸಲಿದ್ದಾರೆ.
ದೇವನಹಳ್ಳಿ ಸಮೀಪದ ಹರಳೂರಿನಲ್ಲಿ 116 ಎಕರೆ ಪ್ರದೇಶದಲ್ಲಿ 1,300 ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಬೇಕಾಗುವ ಮೂಲ ಸೌಕರ್ಯಗಳೊಂದಿಗೆ ಈ ವಿವಿಯು ಆರಂಭವಾಗುತ್ತಿದ್ದು, ಕ್ಯಾಂಪಸ್ ಅನ್ನು ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ ಪ್ರಾರಂಭಿಸಲಾಗುತ್ತದೆ. ಈಗಾಗಲೇ ಸ್ನಾತಕೋತ್ತರ ಕೋರ್ಸ್‌ಗಳನ್ನು ಆರಂಭಿಸಲಾಗಿದ್ದು, ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.
ಭಾರತೀಯ ಪರಂಪರೆಯಲ್ಲಿನ ಜ್ಞಾನ ಸಂಪತ್ತನ್ನು ಪ್ರಸ್ತುತ ಕಾಲಘಟಕ್ಕೆ ಬೇಕಾದ ಕೌಶಲಗಳೊಂದಿಗೆ ಈ ವಿಶ್ವವಿದ್ಯಾಲಯವು ಕಲಿಸಲಿದ್ದು, ವಿದ್ಯಾರ್ಥಿಗಳಿಗೆ ತಮ್ಮಿಷ್ಟದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಹಾಗೂ ಕೌಶಲ ಕೋರ್ಸ್‌ಗಳನ್ನು ಕಲಿಯುವ ಅವಕಾಶವನ್ನು ಇಲ್ಲಿ ನೀಡಲಾಗುತ್ತದೆ. ವಿದ್ಯಾರ್ಥಿಗಳ ಶಕ್ತಿ, ಸಾಮರ್ಥ್ಯ ಅವನ್ನು ಅವರಿಗೆ ತಿಳಿಸುವ ಮತ್ತು ಭಾಷಾ ಸಂವಹನ, ಡಿಜಿಟಲ್ ಕೌಶಲ, ನಾಯಕತ್ವ ಗುಣ ಬೆಳೆಸುವ ಕೋರ್ಸ್‌ಗಳನ್ನು ಈ ವಿವಿಯು ಹೊಂದಿರಲಿದೆ ಎಂದು ವಿವಿ ಕುಲಾಧಿಪತಿ ಪ್ರೊ. ಎಂ.ಕೆ. ಶ್ರೀಧರ್ ತಿಳಿಸಿದ್ದಾರೆ.
ಇದನ್ನೂ ಓದಿ | Bangalore University | ಫೇಲಾದವರಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಬೆಂಗಳೂರು ವಿವಿ