Site icon Vistara News

CUET UG 2022 | ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಯ ಕೀ ಉತ್ತರ ಪ್ರಕಟ

CUET UG 2022

ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ಇತ್ತೀಚೆಗೆ ನಡೆಸಿದ್ದ “ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆʼʼಯ‌ (CUET UG 2022) ತಾತ್ಕಾಲಿಕ ಕೀ ಉತ್ತರವನ್ನು ವೆಬ್‌ ಸೈಟ್‌ನಲ್ಲಿ ಪ್ರಕಟಿಸಿದೆ. ದೇಶದ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿನ ವಿವಿಧ ಕೋರ್ಸ್‌ಗಳ ಪ್ರವೇಶಕ್ಕೆ ಈ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ.

ಪರೀಕ್ಷೆ ಬರೆದ ಅಭ್ಯರ್ಥಿಗಳು ಈ ಕೀ ಉತ್ತರಗಳನ್ನು ಪರಿಶೀಲಿಸಬಹುದಾಗಿದೆ. ಕೀ ಉತ್ತರಗಳೊಂದಿಗೆ ಪ್ರಶ್ನೆ ಪತ್ರಿಕೆ ಮತ್ತು ಅಭ್ಯರ್ಥಿಗಳ ಉತ್ತರವನ್ನು ಸಹ ಅಪ್‌ಲೋಡ್‌ ಮಾಡಲಾಗಿದ್ದು, ಅಭ್ಯರ್ಥಿಗಳು ಲಾಗಿನ್‌ ಆಗಿ, ಇವುಗಳನ್ನು ನೋಡಬಹುದಾಗಿದೆ.

ಈಗ ಪ್ರಕಟವಾಗಿರುವ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲೂ ಅವಕಾಶ ನೀಡಲಾಗಿದ್ದು, ಆಸಕ್ತರು ಆನ್‌ಲೈನ್‌ನಲ್ಲಿಯೇ ಸೂಕ್ತ ದಾಖಲಾತಿಗಳೊಂದಿಗೆ ತಮ್ಮ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್‌ 10ರವರೆಗೆ (up to 11:50 P.M.) ಅವಕಾಶ ನೀಡಲಾಗಿದ್ದು, ಇದಕ್ಕೆ 200ರೂ. ಶುಲ್ಕ ನಿಗದಿಪಡಿಸಲಾಗಿದೆ. ಶುಲ್ಕವನ್ನು ಆನ್‌ಲೈನ್‌ನಲ್ಲಿಯೇ ಪಾವತಿಸಬಹುದಾಗಿರುತ್ತದೆ.

ಕೀ ಉತ್ತರವನ್ನು ನೋಡಲು ವೆಬ್‌ಸೈಟ್‌ : https://cuet.samarth.ac.in/

ಆಕ್ಷೇಪಣೆಯನ್ನು ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಬೇಕಾಗಿರುತ್ತದೆ. ಆಕ್ಷೇಪಣೆಯನ್ನು ತಜ್ಞರು ಪರಿಶೀಲಿಸಲಿದ್ದು, ಕೀ ಉತ್ತರದಲ್ಲಿ ಯಾವುದಾದರೂ ಬದಲಾವಣೆ ಮಾಡಿದಲ್ಲಿ, ಆಕ್ಷೇಪಣೆ ಸಲ್ಲಿಸಿದ ಅಭ್ಯರ್ಥಿಗೆ ವೈಯಕ್ತಿಕವಾಗಿ ತಿಳಿಸಲಾಗುವುದಿಲ್ಲ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ.

ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳು ಅಪ್ಲಿಕೇಷನ್‌ ನಂಬರ್‌ ಮತ್ತು ಜನ್ಮದಿನಾಂಕದೊಂದಿಗೆ ಲಾಗಿನ್‌ ಆಗಿ ಆಕ್ಷೇಪಣೆ ಸಲ್ಲಿಸಬಹುದು. ಸರಿಯಾದ ಮಾಹಿತಿ ಇಲ್ಲದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಎನ್‌ಟಿಎ ಹೇಳಿದೆ.

ಕಳೆದ ಜುಲೈ 15ರಿಂದ ಆಗಸ್ಟ್‌ 30ರ ವರೆಗೆ “ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆʼʼಯನ್ನು ನಡೆಸಲಾಗಿತ್ತು. ದೇಶಾದ್ಯಂತ 259 ನಗರಗಳಲ್ಲಿರುವ 489 ಪರೀಕ್ಷಾ ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆದಿದ್ದು, ವಿದೇಶದ ಒಂಬತ್ತು ನಗರಗಳಲ್ಲಿ ಕೂಡ ಈ ಪರೀಕ್ಷೆ ನಡೆಸಲಾಗಿತ್ತು ಎಂದು ಎನ್‌ಟಿಎ ತಿಳಿಸಿದೆ. ಒಟ್ಟು 14,90,000 ಅಭ್ಯರ್ಥಿಗಳು ಈ ಪರೀಕ್ಷೆ ಬರೆದಿದ್ದರು.

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌: https://nta.ac.in/

ಇದನ್ನೂ ಓದಿ | PUC result 2022 | ದ್ವಿತೀಯ ಪಿಯು ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ ಆಗಿಲ್ಲ, ಸೆ.12ಕ್ಕೆ ರಿಸಲ್ಟ್‌

Exit mobile version