Site icon Vistara News

ECE v/s CSE: ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಅಂಡ್‌ ಕಮ್ಯುನಿಕೇಷನ್; ಯಾವುದು ಉತ್ತಮ ಆಯ್ಕೆ?

ECE V/S CSE

ಸಿಇಟಿ ಕೌನ್ಸೆಲಿಂಗ್‌ಗೆ ದಿನಗಣನೆ (career guidance) ಆರಂಭವಾಗಿದೆ. ಪಿಯುಸಿ ಮುಗಿಸಿ ಸಿಇಟಿ ರ‍್ಯಾಂಕ್‌ ಪಡೆದಿರುವ ವಿದ್ಯಾರ್ಥಿಗಳು ಯಾವ ಕೋರ್ಸ್‌ ತೆಗೆದುಕೊಳ್ಳಬೇಕು ಎಂಬ ಯೋಚನೆಯಲ್ಲಿ ತೊಡಗಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ (ECE) ಹಾಗೂ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ (CSE) ಈ ಎರಡರಲ್ಲಿ ಯಾವುದು ಆಯ್ಕೆ (ECE V/S CSE) ಮಾಡಬೇಕು ಎನ್ನುವ ಗೊಂದಲವಿದೆಯೇ? ಯಾವ ಕೋರ್ಸ್ ನಮಗೆ ಉತ್ತಮ ಭವಿಷ್ಯಕ್ಕೆ ದಾರಿ ಮಾಡಿ ಕೊಡಬಹುದು ಎನ್ನುವ ಚಿಂತೆಯೇ? ಹಾಗಿದ್ದರೆ ಇಲ್ಲಿದೆ ಈ ಕುರಿತ ಸಂಪೂರ್ಣ ಮಾಹಿತಿ.

ಎಂಜಿನಿಯರಿಂಗ್ ಕೋರ್ಸ್ ಗಳಲ್ಲಿ (Engineering course) ಇಂದು ಆಯ್ಕೆಗಳು ಸಾಕಷ್ಟಿವೆ. ಅಸಂಖ್ಯಾತ ವಿದ್ಯಾರ್ಥಿಗಳು ತಾವು ಯಾವ ಕೋರ್ಸ್ ಪಡೆಯಬೇಕು ಎನ್ನುವ ಗೊಂದಲದಲ್ಲಿ ಕೊನೆಗೆ ಯಾವುದಾದರೊಂದು ಪಡೆದು ಬಿಡುತ್ತಾರೆ. ಸರಿಯಾದ ಆಯ್ಕೆ ಮಾಡಿದರೆ ಮಾತ್ರ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.

ಇಸಿಇ ಅಥವಾ ಸಿಎಸ್‌ಇ

ಇಸಿಇ ಎಲೆಕ್ಟ್ರಾನಿಕ್ಸ್, ಸಂವಹನ ವ್ಯವಸ್ಥೆಗಳು ಮತ್ತು ಸಿಗ್ನಲ್ ಪ್ರೊಸೆಸಿಂಗ್ ಮೇಲೆ ಕೇಂದ್ರೀಕರಿಸುತ್ತದೆ. ಇದು ಸರ್ಕ್ಯೂಟ್‌ಗಳು, ಮೈಕ್ರೊಪ್ರೊಸೆಸರ್‌ ಮತ್ತು ಇಂಟಿಗ್ರೇಟೆಡ್ ಸರ್ಕ್ಯೂಟ್‌ಗಳಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ವಿನ್ಯಾಸಗೊಳಿಸಲು ಮತ್ತು ಅಭಿವೃದ್ಧಿಪಡಿಸಲು ಕಲಿಸುತ್ತದೆ. ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ಸ್ಮಾರ್ಟ್ ಹೋಮ್‌ಗಳವರೆಗೆ ಇಸಿಇ ಪದವೀಧರರು ನಮ್ಮೆಲ್ಲರನ್ನೂ ಸಂಪರ್ಕಿಸುವ ವೈರ್‌ಲೆಸ್ ಸಂವಹನ ಜಾಲದ ಬಗ್ಗೆ ಕಲಿಯುತ್ತಾರೆ.

ಸಿಎಸ್‌ಇ ವಿಭಾಗವು ಕಂಪ್ಯೂಟರ್ ವಿಜ್ಞಾನದ ತತ್ತ್ವಗಳು, ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ಕಂಪ್ಯೂಟಿಂಗ್ ಮೇಲೆ ಕೇಂದ್ರೀಕರಿಸುತ್ತದೆ. ಇದು ಅಲ್ಗಾರಿದಮ್‌ಗಳು, ಡೇಟಾ ರಚನೆಗಳು ಮತ್ತು ಸಾಫ್ಟ್‌ವೇರ್ ಸಿಸ್ಟಮ್‌ಗಳನ್ನು ವಿನ್ಯಾಸಗೊಳಿಸುವುದು, ಕಾರ್ಯಗತಗೊಳಿಸುವುದು ಮತ್ತು ವಿಶ್ಲೇಷಿಸುವುದನ್ನು ಒಳಗೊಂಡಿರುತ್ತದೆ. ವಿಡಿಯೋ ಗೇಮ್‌ಗಳಿಂದ ಕೃತಕ ಬುದ್ಧಿಮತ್ತೆಯವರೆಗೆ ಸಿಎಸ್‌ಇ ಪದವೀಧರರು ತಮ್ಮ ಕೋಡಿಂಗ್ ಪರಿಣತಿಯೊಂದಿಗೆ ಉದ್ಯಮಗಳನ್ನು ಕ್ರಾಂತಿಗೊಳಿಸುವುದರ ಬಗ್ಗೆ ಕಲಿಯುತ್ತಾರೆ.


ಇಸಿಇ ಮತ್ತು ಸಿಎಸ್‌ಇ ನಡುವಿನ ಪ್ರಮುಖ ವ್ಯತ್ಯಾಸಗಳೇನು?

ಇಸಿಇ ಎನ್ನುವುದು ಹಾರ್ಡ್‌ವೇರ್ ಆಧಾರಿತವಾಗಿದ್ದು, ಸಿಎಸ್‌ಇ ಸಾಫ್ಟ್‌ವೇರ್ ಆಧಾರಿತವಾಗಿದೆ.

ಇಸಿಇ ಎಲೆಕ್ಟ್ರಾನಿಕ್ಸ್, ಸಂವಹನ ವ್ಯವಸ್ಥೆ ಮತ್ತು ಸಿಗ್ನಲ್ ಪ್ರೊಸೆಸಿಂಗ್ ಅಧ್ಯಯನವಾಗಿದ್ದು, ಸಿಎಸ್‌ಇ ಎನ್ನುವುದು ಸಾಫ್ಟ್‌ವೇರ್ ಅಭಿವೃದ್ಧಿ, ಅಲ್ಗಾರಿದಮ್‌ಗಳು ಮತ್ತು ಸಮಸ್ಯೆ ಪರಿಹರಿಸುವ ಅಧ್ಯಯನವಾಗಿದೆ.

ಇಸಿಇ ಎಲೆಕ್ಟ್ರಾನಿಕ್ ಸಾಧನಗಳನ್ನು ವಿನ್ಯಾಸಗೊಳಿಸುತ್ತದೆ ಮತ್ತು ಅಭಿವೃದ್ಧಿಪಡಿಸುತ್ತದೆ ಮತ್ತು ಸಿಎಸ್‌ಇ ಸಾಫ್ಟ್ ವೇರ್ ಸಿಸ್ಟಮ್, ಅಲ್ಗಾರಿದಮ್‌ಗಳು ಮತ್ತು ಡೇಟಾ ರಚನೆಗಳನ್ನು ವಿನ್ಯಾಸ ಮತ್ತು ಅಳವಡಿಕೆ ಮಾಡುವ ಕೌಶಲವನ್ನು ಕಲಿಸುತ್ತದೆ.

ಇಸಿಇನಲ್ಲಿ ಸರ್ಕ್ಯೂಟ್ ಡಿಸೈನ್, ಸಿಗ್ನಲ್ ಪ್ರೊಸೆಸಿಂಗ್, ಸಂವಹನ ಕೌಶಲವನ್ನು ಕಲಿತರೆ, ಸಿಎಸ್ ಇ ನಲ್ಲಿ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್, ಅಲ್ಗಾರಿದಮ್‌, ಸಾಫ್ಟ್ ವೇರ್ ಅಭಿವೃದ್ಧಿಯನ್ನು ಕಲಿಯಬಹುದು.

ಇಸಿಇನಲ್ಲಿ ಗಣಿತ, ಮತ್ತು ಭೌತಶಾಸ್ತ್ರ ಪಠ್ಯಕ್ರಮವನ್ನು ಒಳಗೊಂಡಿದ್ದರೆ ಸಿಎಸ್ ಇ ಪಠ್ಯಕ್ರಮವು ಗಣಿತ ಮತ್ತು ಅಲ್ಗಾರಿದಮ್‌ಗಳನ್ನು ಒಳಗೊಂಡಿದೆ.

ಇಸಿಇನಲ್ಲಿ ಸರ್ಕ್ಯೂಟ್ ಥಿಯರಿ ಮತ್ತು ನೆಟ್ವರ್ಕ್ಸ್, ಸಂಕೇತಗಳು ಮತ್ತು ವ್ಯವಸ್ಥೆಗಳು, ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಸರ್ಕ್ಯೂಟ್‌ಗಳು.

ಯಾವುದರಲ್ಲಿ ಏನು ಕಲಿಯಬಹುದು?

ಡಿಜಿಟಲ್ ಎಲೆಕ್ಟ್ರಾನಿಕ್ಸ್, ವಿದ್ಯುತ್ಕಾಂತೀಯ ಕ್ಷೇತ್ರಗಳು ಮತ್ತು ಅಲೆಗಳ ಕುರಿತು ಅಧ್ಯಯನಕ್ಕೆ ಅವಕಾಶವಿದ್ದು, ಸಿಎಸ್‌ಇನಲ್ಲಿ ಡೇಟಾ ರಚನೆಗಳು ಮತ್ತು ಕ್ರಮಾವಳಿಗಳು, ಆಪರೇಟಿಂಗ್ ಸಿಸ್ಟಮ್ಸ್, ಡೇಟಾಬೇಸ್ ಮ್ಯಾನೇಜ್ಮೆಂಟ್ ಸಿಸ್ಟಮ್ಸ್, ಕಂಪ್ಯೂಟರ್ ನೆಟ್ವರ್ಕ್ಸ್, ವೆಬ್ ತಂತ್ರಜ್ಞಾನಗಳ ಕುರಿತು ಕಲಿಯಬಹುದು.

ತಂತ್ರಜ್ಞಾನ ಕ್ಷೇತ್ರದಲ್ಲಿ ಇಸಿಇಯಲ್ಲಿ ಇಂಟರ್ನೆಟ್ ಆಫ್ ಥಿಂಗ್ಸ್ (IoT), ಎಡ್ಜ್ ಕಂಪ್ಯೂಟಿಂಗ್, ರೊಬೊಟಿಕ್ಸ್ ಮತ್ತು ಆಟೊಮೇಷನ್., ನವೀಕರಿಸಬಹುದಾದ ಶಕ್ತಿ, 5 ಜಿ ಇತ್ಯಾದಿಗಳನ್ನು ಕಲಿಸಿದರೆ, ಸಿಎಸ್ಇ ನಲ್ಲಿ ಕೃತಕ ಬುದ್ಧಿಮತ್ತೆ (AI), ಯಂತ್ರ ಕಲಿಕೆ (ML), ಕ್ಲೌಡ್ ಕಂಪ್ಯೂಟಿಂಗ್, ಬಿಗ್ ಡೇಟಾ ಅನಾಲಿಟಿಕ್ಸ್, ವರ್ಧಿತ ರಿಯಾಲಿಟಿ (AR), ವರ್ಚುವಲ್ ರಿಯಾಲಿಟಿ (ವಿಆರ್) ಬಗ್ಗೆ ಕಲಿಯಬಹುದು.

ಇದನ್ನೂ ಓದಿ: NTA Website: ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಮಾಡಲು ಎನ್‌ಟಿಎ ವೆಬ್‌ಸೈಟ್‌ ಹ್ಯಾಕ್‌? ಸಂಸ್ಥೆ ಹೇಳೋದಿಷ್ಟು

ಉದ್ಯೋಗವಕಾಶ

ಎಲೆಕ್ಟ್ರಾನಿಕ್ಸ್ ಅಂಡ್‌ ಕಮ್ಯುನಿಕೇಷನ್

ಇಸಿಇ ಕಲಿತವರಿಗೆ ದೂರಸಂಪರ್ಕ, ಎಂಬೆಡೆಡ್ ಸಿಸ್ಟಮ್ಸ್, ಸೆಮಿಕಂಡಕ್ಟರ್ ಉದ್ಯಮ, ಪವರ್ ಆಂಡ್ ಎನರ್ಜಿ, ರಕ್ಷಣಾ ಮತ್ತು ಏರೋಸ್ಪೇಸ್‌ನಲ್ಲಿ ಉದ್ಯೋಗಾವಕಾಶ ಲಭ್ಯವಿದೆ. ಈ ವಿಭಾಗದಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದವರು ಖಾಸಗಿ ಮಾತ್ರವಲ್ಲ, ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರಿಯನ್ನೂ ಹೆಚ್ಚಿನ ಪ್ರಮಾಣದಲ್ಲಿ ಪಡೆಯಬಹುದು. ಮುಂಬರುವ ದಿನಗಳಲ್ಲಿ ಸೆಮಿ ಕಂಡಕ್ಟರ್‌ ಉದ್ಯಮ ಭಾರತದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದಲಿದೆ. ಹಾಗಾಗಿ ಎಲೆಕ್ಟ್ರಾನಿಕ್ಸ್ ಅಂಡ್‌ ಕಮ್ಯುನಿಕೇಷನ್ ಓದಿದವರಿಗೆ ಸಾಕಷ್ಟು ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ. ಈ ವಿಭಾಗದಲ್ಲಿ ಓದಿದವರು ಪೂರಕ ಕೋರ್ಸ್‌ಗಳನ್ನು ಮಾಡುವ ಮೂಲಕ ಸಾಫ್ಟ್‌ವೇರ್‌ ಉದ್ಯಮದಲ್ಲೂ ಉದ್ಯೋಗ ಗಿಟ್ಟಿಸಲು ಅವಕಾಶ ಇರುತ್ತದೆ. ಈ ವಿಭಾಗದಲ್ಲಿ ಕಂಪ್ಯೂಟರ್‌ ಸೈನ್ಸ್‌ಗೆ ಹೋಲಿಸಿದರೆ ವೇತನ ಪ್ಯಾಕೇಜ್‌ ಸದ್ಯ ಸ್ವಲ್ಪ ಕಡಿಮೆ ಇದೆ. ಆದರೆ ಆರ್ಥಿಕ ಕುಸಿತ ಇತ್ಯಾದಿ ಸಂದರ್ಭಗಳಲ್ಲಿ ದಿಢೀರ್‌ ಉದ್ಯೋಗ ಕುಸಿತ ಆಗುವ ಅಪಾಯ ಕಡಿಮೆ. ಕ್ರಿಯಾಶೀಲ ಮನಸ್ಸಿನ ಮತ್ತು ಸ್ವಂತ ಉದ್ದಿಮೆ ಸ್ಥಾಪಿಸುವ ಕನಸಿರುವ ಯುವ ಜನತೆಗೆ ಈ ವಿಭಾಗ ಸೂಕ್ತ.

ಕಂಪ್ಯೂಟರ್‌ ಸೈನ್ಸ್‌

ಸಿಎಸ್‌ಇ ಕಲಿತವರಿಗೆ ಸಾಫ್ಟ್‌ವೇರ್ ಅಭಿವೃದ್ಧಿ, ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್, ಕೃತಕ ಬುದ್ಧಿಮತ್ತೆ (AL) ಮತ್ತು ಯಂತ್ರ ಕಲಿಕೆ (ML), ಸೈಬರ್ ಭದ್ರತೆ, ವೆಬ್ ಅಭಿವೃದ್ಧಿ ಮತ್ತು ಇ-ಕಾಮರ್ಸ್ ಕ್ಷೇತ್ರದಲ್ಲಿ ಉದ್ಯೋಗ ಅವಕಾಶ ಲಭ್ಯವಾಗಲಿದೆ. ಪಿಯುಸಿ ಮುಗಿಸಿದ ಬಹುತೇಕ ವಿದ್ಯಾರ್ಥಿಗಳ ಮೊದಲ ಆಯ್ಕೆ ಕಂಪ್ಯೂಟರ್‌ ಸೈನ್ಸ್‌ ಆಗಿರುತ್ತದೆ. ಸಾಫ್ಟ್‌ವೇರ್‌ ಉದ್ಯಮ ಅತ್ಯಂತ ವಿಶಾಲವಾಗಿದೆ. ಹಾಗಾಗಿ ಲಕ್ಷಾಂತರ ಉದ್ಯೋಗವಕಾಶ ಇಲ್ಲಿದೆ. ಕಂಪ್ಯೂಟರ್‌ ಸೈನ್ಸ್‌ನಲ್ಲಿ ಎಐ, ರೊಬಾಟಿಕ್‌, ಡೇಟಾ ಸೈನ್ಸ್‌ ಇತ್ಯಾದಿ ಹಲವಾರು ವಿಭಾಗಗಳಿವೆ. ಖ್ಯಾತನಾಮ ಸಾಫ್ಟ್‌ವೇರ್‌ ಬ್ರಾಂಡ್‌ನ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿದರೆ ಕೈತುಂಬ ಸಂಬಳ ಸಂಪಾದಿಸಬಹುದು. ಎಲೆಕ್ಟ್ರಾನಿಕ್ಸ್ ಅಂಡ್‌ ಕಮ್ಯುನಿಕೇಷನ್ ವಿಭಾಗಕ್ಕೆ ಹೋಲಿಸಿದರೆ ಇಲ್ಲಿ ಸಂಬಳದ ಪ್ಯಾಕೇಜ್‌ ತುಸು ಹೆಚ್ಚೇ ಇರುತ್ತದೆ. ಆದರೆ ಇಲ್ಲಿ ಪೈಪೋಟಿಯೂ ವಿಪರೀತ ಹೆಚ್ಚಿದೆ. ತಂತ್ರಜ್ಞಾನ ಆಗಾಗ ಅಪ್‌ಡೇಟ್‌ ಆಗುತ್ತ ಇರುತ್ತದೆ. ಕಂಪ್ಯೂಟರ್‌ ಸೈನ್ಸ್‌ನಲ್ಲಿ ಎಂಜಿನಿಯರಿಂಗ್‌ ಓದಿದರೂ ಪೂರಕವಾಗಿ ಹೊಸ ಹೊಸ ತಂತ್ರಜ್ಞಾನದ ಕೋರ್ಸ್‌ ಕಲಿಯಲೇಬೇಕಾಗುತ್ತದೆ. ಇಲ್ಲಿ ಉದ್ಯೋಗವಕಾಶ ಹೆಚ್ಚಿದೆ, ಸಂಬಳವೂ ಹೆಚ್ಚಿದೆ. ಆದರೆ ಆಗಾಗ ಉಂಟಾಗುವ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಉದ್ಯೋಗ ಅಭದ್ರತೆಯ ಅಪಾಯವೂ ಇರತ್ತದೆ.

ಅಂತಿಮವಾಗಿ ಹೇಳಬೇಕೆಂದರೆ: ಪೋಷಕರ ಒತ್ತಾಯಕ್ಕೆ ಅಥವಾ ಯಾರೋ ಈ ಕೋರ್ಸ್‌ ಮಾಡಿದ್ದಾರೆ ಎಂಬ ಪ್ರಭಾವಕ್ಕೆ ಒಳಗಾಗದೆ ನಿಮಗೆ ಯಾವ ವಿಷಯದಲ್ಲಿ ಆಸಕ್ತಿ ಇದೆಯೋ ಆ ಕೋರ್ಸನ್ನೇ ಆಯ್ಕೆ ಮಾಡುವುದು ಉತ್ತಮ. ಏಕೆಂದರೆ ಬಿಇ ಅಥವಾ ಬಿಟೆಕ್‌ ಮುಗಿದ ಮೇಲೆ ಈ ಪದವಿಗಿಂತ ಹೆಚ್ಚಾಗಿ ನಿಮ್ಮ ಆಸಕ್ತಿ ಮತ್ತು ಕ್ರಿಯಾಶೀಲತೆಯ ಮೇಲೆ ನಿಮ್ಮ ಉದ್ಯೋಗದ ಉಜ್ವಲ ಭವಿಷ್ಯ ನಿಂತಿರುತ್ತದೆ.

Exit mobile version