ನವದೆಹಲಿ: ದೇಶದಲ್ಲಿ ಶಿಕ್ಷಣ (Education) ಕುರಿತಾದ ದೃಷ್ಟಿಕೋನ ಬದಲಾಗಿದೆ. ವಿದ್ಯಾಭ್ಯಾಸದ ಮಹತ್ವ ಎಲ್ಲರಿಗೂ ಅರಿವಾಗಿದ್ದು ಶಾಲೆಗಳ ದಾಖಲಾತಿ ಹೆಚ್ಚಾಗುತ್ತಿದೆ. ಆದರೆ ಉನ್ನತ ವಿದ್ಯಾಭ್ಯಾಸಕ್ಕೆ ತೆರಳುತ್ತಿರುವವರ ಸಂಖ್ಯೆಯಲ್ಲಿ ತುಂಬ ಮಹತ್ತರ ಬದಲಾವಣೆ ಕಂಡುಬಂದಿಲ್ಲ. ಮಾಹಿತಿ ಮತ್ತು ಸಂಪನ್ಮೂಲದ ಕೊರತೆ ಇದಕ್ಕಿರುವ ಪ್ರಮುಖ ಕಾರಣ ಎನ್ನಲಾಗಿದೆ. ಸ್ನಾತಕೋತ್ತರ (Post-graduation) ಶಿಕ್ಷಣ ಪಡೆಯಲು ಖರ್ಚು ಅಧಿಕವಾಗಿರುವುದರಿಂದ ಅನೇಕರು ಇದನ್ನು ಭರಿಸಲು ಶಕ್ತರಾಗಿರುವುದಿಲ್ಲ ಎನ್ನುವುದು ವಾಸ್ತವ.
ವರದಿ ಏನು ಹೇಳುತ್ತದೆ?
ಸರ್ಕಾರಿ ಮಾಹಿತಿಯೊಂದರ ಪ್ರಕಾರ 2020-21ರ ಶೈಕ್ಷಣಿಕ ವರ್ಷದಲ್ಲಿ 4.14 ಕೋಟಿ ವಿದ್ಯಾರ್ಥಿಗಳು ಶೈಕ್ಷಣಿಕ ಸಂಸ್ಥೆಗಳಿಗೆ ದಾಖಲಾಗಿದ್ದಾರೆ. ಆ ಪೈಕಿ 79.06% ಮಂದಿ ಪದವಿ ಪೂರ್ವ ತರಗತಿ ವಿದ್ಯಾರ್ಥಿಗಳು. ಸ್ನಾತಕೋತ್ತರ ಪದವಿ ತರಗತಿಗೆ ಸೇರ್ಪಡೆಯಾದವರು 11.5% ಮಂದಿ ಮಾತ್ರ. ಆಲ್ ಇಂಡಿಯಾ ಸರ್ವೇ ಆನ್ ಹೈಯರ್ ಎಜುಕೇಷನ್ (AISHE) ವರದಿ ಈ ಮಾಹಿತಿಯನ್ನು ಹಂಚಿಕೊಂಡಿದೆ. ಹೀಗಾಗಿ ಸ್ನಾತಕೋತ್ತರ ಪದವಿ ಓದುವವರಿಗಾಗಿ ಲಭ್ಯವಿರುವ ಮುಖ್ಯ ವಿದ್ಯಾರ್ಥಿ ವೇತನ (scholarships)ಗಳ ಮಾಹಿತಿ ಇಲ್ಲಿದೆ.
ಸೆಂಟ್ರಲ್ ಸ್ಕಾಲರ್‌ಶಿಪ್
ಮೆರಿಟ್ ಹೊಂದಿರುವ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಈ ವಿದ್ಯಾರ್ಥಿವೇತನಗಳನ್ನು ದೊಡ್ಡ ಪ್ರಮಾಣದಲ್ಲಿ ನೀಡಲಾಗುತ್ತದೆ. ಇದು ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿ ಪೂರ್ಣಗೊಳಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಲಭ್ಯ.
AICTE ಪಿಜಿ ಸ್ಕಾಲರ್‌ಶಿಪ್
ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಷನ್ (AICTE) ದೇಶಾದ್ಯಂತ ಓದುತ್ತಿರುವ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ನೆರವು ನೀಡಲು ಈ ಸ್ಕಾಲರ್‌ಶಿಪ್ ಆರಂಭಿಸಿದೆ.
ಯಾರು ಅರ್ಹರು?
ಎಂ.ಇ./ ಎಂ.ಟೆಕ್/ ಎಂ.ಆರ್ಕ್/ ಎಂ.ಡಿಇಎಸ್‌ನ ಮೊಲ ವರ್ಷದ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು. ಸಿಎಟಿ, ಸಿಇಇಡಿ ಅಥವಾ ಇತರ ಸಂಬಂಧಿತ ಪ್ರವೇಶ ಪರೀಕ್ಷೆಗಳಲ್ಲಿ ಪಡೆದ ಆಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಬಳಿಕ ಆ ಪಟ್ಟಿಯನ್ನು AICTEಗೆ ಕಳುಹಿಸಲಾಗುತ್ತದೆ. ವೈಯಕ್ತಿಕ ವಿವರಗಳು, ಪ್ರವೇಶದ ದಿನಾಂಕ / ಪ್ರಾರಂಭದ ದಿನಾಂಕ ಮತ್ತು ಇತರ ವಿವರಗಳನ್ನು ಪರಿಶೀಲಿಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಹೆಣ್ಣು ಮಕ್ಕಳಿಗಾಗಿ ಪೋಸ್ಟ್ ಗ್ರಾಜ್ಯುಯೇಟ್ ಇಂದಿರಾ ಗಾಂಧಿ ಸ್ಕಾಲರ್ ಶಿಪ್
ವೃತ್ತಿಪರವಲ್ಲದ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡಲು ಬಯಸುವ ಹುಡುಗಿಯರಿಗೆ ಸರ್ಕಾರ ಈ ವಿದ್ಯಾರ್ಥಿ ವೇತನವನ್ನು ನೀಡುತ್ತದೆ. ಪ್ರತೀ ವರ್ಷ 12,000 ವಿದ್ಯಾರ್ಥಿನಿಯರಿಗೆ ಈ ಸ್ಕಾಲರ್ ಶಿಪ್ ನೀಡಲಾಗುತ್ತದೆ. 2 ವರ್ಷಗಳ ತನಕ ಪ್ರತಿ ತಿಂಗಳು 2,000 ರೂ. ನೀಡುವ ಯೋಜನೆ ಇದಾಗಿದೆ.
ಯಾರು ಅರ್ಹರು?
30 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ, ಯಾವುದೇ ಒಡಹುಟ್ಟಿದವರು ಇಲ್ಲದ ವಿದ್ಯಾರ್ಥಿನಿಯರು ಈ ವಿದ್ಯಾರ್ಥಿ ವೇತನ ಪಡೆಯಲು ಅರ್ಹರು. ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಶೀಲನೆ ನಡೆಸಿ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಇಷ್ಟು ಮಾತ್ರವಲ್ಲದೆ ಕೇಂದ್ರ ಸರ್ಕಾರದಿಂದ ವಿವಿಧ ಸ್ಕಾಲರ್ ಶಿಪ್‌ಗಳನ್ನು ಒದಗಿಸಲಾಗುತ್ತದೆ. ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಾದ ಮುಸ್ಲಿಂ, ಸಿಖ್, ಪಾರ್ಸಿ, ಬೌದ್ಧರು ಮತ್ತು ಕ್ರಿಶ್ಚಿಯನ್ನರಿಗಾಗಿ ಮೌಲಾನ ಆಜಾದ್ ನ್ಯಾಷನಲ್ ಫೆಲೋಶಿಪ್ ಲಭ್ಯವಿದೆ. ಸೈನ್ಸ್, ಹ್ಯುಮಾನಿಟೀಸ್, ಸೋಷಿಯಲ್ ಸೈನ್ಸ್ ಮತ್ತು ಎಂಜಿನಿಯರಿಂಗ್ & ಟೆಕ್ನಾಲಜಿಯಲ್ಲಿನ ಎಂ.ಫಿಲ್/ಪಿಎಚ್‌ಡಿ ಓದುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ಲಭ್ಯ. ಆ ಪೈಕಿ ಅಲ್ಪಸಂಖ್ಯಾತ ವಿಭಾಗದ ಶೇ. 3ರಷ್ಟು ಭಾಗ ವಿಶೇಷ ಚೇತನರಿಗಾಗಿ ಮೀಸಲಿಡಲಾಗುತ್ತದೆ.
ಖಾಸಗಿ ಸಂಸ್ಥೆಗಳ ಸ್ಕಾಲರ್ ಶಿಪ್
ಸರಕಾರೇತರ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ದೇಶದ ವಿದ್ಯಾರ್ಥಿಗಳ ನೆರವಿಗೆ ಸ್ಕಾಲರ್ ಶಿಪ್ ಒದಗಿಸುತ್ತವೆ. ಕೆಲವೊಂದು ಕಂಪನಿಗಳು ವಿದ್ಯಾರ್ಥಿಗಳ ಶುಲ್ಕದ ಶೇ. 100ರಷ್ಟನ್ನೂ ಭರಿಸುತ್ತವೆ.
ರಿಲಯನ್ಸ್ ಫೌಂಡೇಷನ್ ಪೋಸ್ಟ್ ಗ್ರಾಜ್ಯುವೇಟ್ ಸ್ಕಾಲರ್‌ಶಿಪ್
ಭಾರತೀಯ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಪಡೆಯುವ ಕನಸನ್ನು ರಿಲಯನ್ಸ್ ಫೌಂಡೇಷನ್ ನನಸು ಮಾಡುತ್ತಿದೆ. ಇದು ಸುಮಾರು 6 ಲಕ್ಷ ರೂ.ವರೆಗೆ ಸ್ಕಾಲರ್ ಶಿಪ್ ಒದಗಿಸುತ್ತದೆ. ಸ್ಕಾಲರ್‌ಶಿಪ್‌ನ ಶೇ. 80ರಷ್ಟು ಪಾಲನ್ನು ಶೈಕ್ಷಣಿಕ ವರ್ಷ ಆರಂಭದಲ್ಲೇ ಅಂದರೆ ಟ್ಯೂಷನ್ ಫೀಸ್, ವಿದ್ಯಾಭ್ಯಾಸ ಸಾಮಗ್ರಿಗಳ ಖರೀದಿಗಾಗಿ ನೀಡಲಾಗುತ್ತದೆ. ಇನ್ನುಳಿದ ಶೇ. 20ರಷ್ಟನ್ನು ಅರ್ಜಿ ಸಲ್ಲಿಸಿದ ಬಳಿಕ ನೀಡಲಾಗುತ್ತದೆ.
ಯಾರು ಅರ್ಹರು?
ಸ್ವದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವ ಭಾರತೀಯ ನಾಗರಿಕರು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು GATE ಅಥವಾ ಸಂಬಂಧಿತ ಪರೀಕ್ಷೆಯಲ್ಲಿ 550-1000 ಅಂಕಗಳನ್ನು ಹೊಂದಿರಬೇಕು. ವಿವಿಧ ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಮೊದಲಿಗೆ, ಅರ್ಜಿದಾರರ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ನಂತರ ಆಪ್ಟಿಟ್ಯೂಡ್ ಪರೀಕ್ಷೆ ನಡೆಸಲಾಗುತ್ತದೆ. ಅರ್ಜಿಯ ಭಾಗವಾಗಿ ವಿದ್ಯಾರ್ಥಿಗಳು ದಾಖಲೆಗಳು, ಪ್ರಬಂಧಗಳು ಮತ್ತು ಉದ್ದೇಶದ ಹೇಳಿಕೆಗಳನ್ನು ಸಲ್ಲಿಸಬೇಕು. ಆಪ್ಟಿಟ್ಯೂಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಸಂದರ್ಶನಕ್ಕೆ ಕರೆಯಲಾಗುತ್ತದೆ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
IDFC Bank ಎಂಬಿಎ ಸ್ಕಾಲರ್‌ಶಿಪ್
ಈ ಸ್ಕಾಲರ್‌ಶಿಪ್ ಭಾರತದಲ್ಲಿ ಎಂಬಿಎ ಮಾಡುವ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತದೆ. ವಿದ್ಯಾರ್ಥಿ ಎರಡು ವರ್ಷಗಳಿಗೆ 2 ಲಕ್ಷ ರೂ. ಪಡಯುತ್ತಾನೆ. ಈ ವರ್ಷ ಸುಮಾರು 350 ಈ ರೀತಿಯ ವಿದ್ಯಾರ್ಥಿ ವೇತನ ವಿತರಿಸಲಾಗಿದೆ.
ಯಾರು ಅರ್ಹರು?
ಕುಟುಂಬದ ಆದಾಯ 6 ಲಕ್ಷ ರೂ.ಗಿಂತ ಕಡಿಮೆ ಇರುವ ಭಾರತೀಯ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಅಲ್ಲಿಸಬಹುದು. ಅರ್ಜಿ ಮತ್ತು ದಾಖಲೆಗಳ ಪರಿಶೀಲನೆಯ ಬಳಿಕ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Rashtrotthana Parishat: ತಪಸ್-ಸಾಧನಾ ಯೋಜನೆಗೆ ಅರ್ಜಿ ಆಹ್ವಾನ; ಪಿಯುಸಿ ಜತೆಗೆ ಜೆಇಇ, ನೀಟ್ ಉಚಿತ ತರಬೇತಿ
ಇದು ಮಾತ್ರವಲ್ಲದೆ ಉನ್ನತ ಶಿಕ್ಷಣ ಪಡೆಯುವವರಿಗಾಗಿ ಟಾಟಾ ಟ್ರಸ್ಟ್ ಸ್ಕಾಲರ್‌ಶಿಪ್, ನಾರೋತಮ್ ಸೆಖ್ಸರಿಯ ಫೌಂಡೇಷನ್ ಸ್ಕಾಲರ್‌ಶಿಪ್ ಮುಂತಾದ ದೊರೆಯುತ್ತದೆ.