ಕಲಿಕೆ ಎಲ್ಲಿಯೂ ಹೇಗೂ ಸಾಧ್ಯವಿದೆ, ತರಗತಿಗಳಿಗೆ ಸೀಮಿತವಾಗಬೇಕೆಂದಿಲ್ಲ. ಇದರರ್ಥ (Success skills for students) ವಿದ್ಯಾರ್ಥಿಗಳು ಸದಾ ಕ್ಲಾಸಿಗೆ ಚಕ್ಕರ್ ಹೊಡೆದು ಎಲ್ಲೆಲ್ಲೋ ಏನೇನೋ ಕಲಿಯಬೇಕೆಂದಲ್ಲ! ಆದರೆ ನಾಲ್ಕು ಗೋಡೆಗಳೊಳಗೆ ಕಲಿಯುವುದು ಮಾತ್ರವೇ ಕಲಿಕೆ ಎಂಬುದೂ ನಿಜವಲ್ಲ. ಯಾರೊ ಹೇಳಿಕೊಟ್ಟು ಕಲಿಸದೆಯೂ, ಲೋಕಾನುಭವದಿಂದ ಕಲಿಯುವುದು ಮಹತ್ವದ ಕೌಶಲ್ಯಗಳಲ್ಲಿ ಒಂದು. ಇಂಥ ಬಹಳಷ್ಟು ಕೌಶಲ್ಯಗಳು ವಿದ್ಯಾರ್ಥಿ ದಿಸೆಯಲ್ಲಿ ಬೇಕಾಗುತ್ತವೆ. ಸಂಗೀತ, ನೃತ್ಯ, ಕ್ರೀಡೆ, ಸಾಹಸ ಕಲೆಗಳು, ರಿಪೇರಿ ಕೆಲಸಗಳು, ಅಡುಗೆ ಮುಂತಾದ ಕಲಿತು ಮಾಡುವ ಕೌಶಲ್ಯಗಳ ಜೊತೆಗೆ, ಅರಿತು ರೂಢಿಸಿಕೊಳ್ಳುವ ಕುಶಲತೆಗಳೂ ( success skills for students) ಹಲವಾರಿವೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ, ಇಂಥ ಪಠ್ಯೇತರ ಕೌಶಲ್ಯಗಳೇ ಹೆಚ್ಚಿನ ಸಾರಿ ವಿದ್ಯಾರ್ಥಿಗಳನ್ನು ಭವಿಷ್ಯದ ವೃತ್ತಿ ಜೀವನದಲ್ಲಿ ಯಶಸ್ಸಿನ ಹಾದಿಯಲ್ಲಿ ನಡೆಸುತ್ತವೆ. ಹಾಗಾದರೆ ಎಂಥಾ ಕೌಶಲ್ಯಗಳು ಎಳೆಯರಿಗೆ ಅಗತ್ಯ?
ಅವಲೋಕನ ಸಾಮರ್ಥ್ಯ
ಎಲ್ಲರೂ ಮಾತಾಡುವವರೇ ಆದರೆ ಕೇಳುವವರಾರು ಎಂಬ ಮಾತಿದೆ. ಇದೂ ಹಾಗೆಯೇ. ಬಹಳಷ್ಟು ಸಾರಿ ಸುಮ್ಮನೆ ಅವಲೋಕಿಸುವುದು (skills for success) ಮಹತ್ವದ ಮಾಹಿತಿಗಳನ್ನು ಒದಗಿಸಬಲ್ಲವು. ವಿಷಯವನ್ನು ಓದಿ ಗ್ರಹಿಸುವುದಕ್ಕಿಂತ ಅದನ್ನೇ ಅವಲೋಕಿಸಿ ಅರಿಯುವುದು ಬೇರೆಯದೇ ಪರಿಣಾಮವನ್ನು ಬೀರಬಲ್ಲದು; ತಿಳಿವಳಿಕೆಯನ್ನು ಅಪಾರವಾಗಿ ಹೆಚ್ಚಿಸಬಲ್ಲದು.
ವಿಮರ್ಶಾ ಸಾಮರ್ಥ್ಯ
ಬದುಕಿನ ಎಲ್ಲಾ ಹಂತಗಳಲ್ಲೂ ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕು. ಮಗುವಿದ್ದಾಗ ಇಷ್ಟದ ಐಸ್‌ಕ್ರೀಮ್ ಆಯ್ಕೆ ಮಾಡುವುದರಿಂದ ಹಿಡಿದು, ಇಷ್ಟದ ವೃತ್ತಿಯನ್ನು ಆಯ್ದುಕೊಳ್ಳುವವರೆಗೆ ಬಹಳಷ್ಟು ನಿರ್ಣಾಯಕ ಘಳಿಗೆಗಳು ಎದುರಾಗುತ್ತವೆ. ಇಂಥ ಸಂದರ್ಭಗಳನ್ನು ಎದುರಿಸಲು ವಿಮರ್ಶಾ ದೃಷ್ಟಿ (skills for success) ಅಗತ್ಯ. ಇದು ಮಾನಸಿಕ ಮತ್ತು ಬೌದ್ಧಿಕ ವಿಕಾಸಕ್ಕೂ ನೆರವಾಗಬಲ್ಲದು
ಸಂಶೋಧನಾ ಕೌಶಲ
ಸಂಶೋಧನೆಯ ಮಹತ್ವ ತರಗತಿ ಮತ್ತು ಫಲಿತಾಂಶಗಳಿಗಿಂತ ಎಷ್ಟೋ ಹೆಚ್ಚಿನದ್ದು. ಆಡುವಾಗ ನೆಲದಡಿಯ ಸಣ್ಣ ಹುಳುವನ್ನು ಅಗೆದು ತೆಗೆಯುವುದರಿಂದ ಹಿಡಿದು, ಪ್ರಯೋಗಾಲಯಗಳ ಕೆಲಸಗಳವರೆಗೆ, ಕಾಲಕಾಲಕ್ಕೆ ಜ್ಞಾನ ಹೆಚ್ಚಿಸಿಕೊಳ್ಳಲು, ಹೊಸದನ್ನು ಕಲಿಯಲು ಮತ್ತು ಕಲಿತಿದ್ದನ್ನು ಒರೆಗೆ ಹಚ್ಚಲು ಸಂಶೋಧನೆ ಬೇಕೇಬೇಕು. ಹೊಸ ಜನ, ಹೊಸ ಜಾಗ, ಹೊಸ ಜ್ಞಾನ ಮುಂತಾದ ಎಲ್ಲಾ ಹೊಸದನ್ನು ಒಳಗಿಳಿಸಿಕೊಳ್ಳಲು ಕುತೂಹಲ ಮತ್ತು ಶೋಧನೆ ಅಡಿಪಾಯವಿದ್ದಂತೆ.
ಸಂಪರ್ಕ ಕುಶಲತೆ
ಇದನ್ನು ನೆಟ್‌ವರ್ಕಿಂಗ್ ಸ್ಕಿಲ್ ಎಂದೂ ಕರೆಯಬಹುದು. ಸೂಕ್ತ ಜನರ ಸಂಪರ್ಕ ಇರುವುದು ಮತ್ತು ಅವರನ್ನು ಸರಿಯಾದ ಅವಕಾಶದಲ್ಲಿ ಬಳಸಿಕೊಳ್ಳುವುದು ಚತುರತೆಯ ವಿಷಯ. ಸಮಾನ ಮನಸ್ಸು, ಪ್ರವೃತ್ತಿ ಮತ್ತು ಆಸಕ್ತಿಯ ಜನರೊಂದಿಗೆ ಸ್ನೇಹ ಗಳಿಸುವುದು ಒಂದೆಡೆಯಾದರೆ, ವಿವಿಧ ಮಜಲುಗಳ ಜನರೊಂದಿಗೆ ಸಂಪರ್ಕ ಇರಿಸಿಕೊಳ್ಳುವುದೂ ಬಹಳಷ್ಟು ಉಪಯೋಗಗಳನ್ನು ತರಬಲ್ಲದು. ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲ, ನಾವು ಕೇಳಿದಾಕ್ಷಣ ನಮಗಾಗಿ ಏನನ್ನಾದರೂ ಮಾಡಿಕೊಡುವಷ್ಟು ವೈಯಕ್ತಿಕ ಮಟ್ಟದಲ್ಲಿ ಗೆಳೆತನ ಗಳಿಸಿಕೊಳ್ಳುವುದು ಬಹಳಷ್ಟು ಬಾರಿ ನಮ್ಮನ್ನು ರಕ್ಷಿಸಬಲ್ಲದು
ಸಹಯೋಗ ಸಾಧ್ಯತೆ
ಒಂದೇ ಜಾಗದಲ್ಲಿ ಕೆಲಸ ಮಾಡುವಾಗ ನಮ್ಮ ಆದ್ಯತೆ ಕೆಲಸದ ಕುರಿತಾಗಿ ಇರಬೇಕೆ ಹೊರತು ಕೆಲಸಗಾರರ ಬಗ್ಗೆಯಲ್ಲ. ನಮ್ಮ ಸಹವರ್ತಿಗಳು ಯಾರೇ ಇರಲಿ, ಎಂಥವರೇ ಆಗಿರಲಿ, ಅವರೊಂದಿಗೆ ಹೊಂದಿಕೆಯಿಂದ ಕೆಲಸ ಮಾಡುವ ಅನಿವಾರ್ಯತೆ ಇದ್ದೇಇರುತ್ತದೆ. ಇದನ್ನು ಶಾಲೆಯ ದಿನಗಳಿಂದಲೇ ಮೈಗೂಡಿಸಿಕೊಳ್ಳುವುದು ಅಗತ್ಯ. ಇದಕ್ಕಾಗಿ ತಾಳ್ಮೆ, ಸಹನೆ ಕೆಲವೊಮ್ಮೆ ಕರುಣೆಯಂಥ ಗುಣಗಳೂ ಮೇಳೈಸಬೇಕಾಗುತ್ತದೆ
ಡಿಜಿಟಲ್ ಕೌಶಲ
ತಂತ್ರಜ್ಞಾನದ ವಿಷಯದಲ್ಲಿ ನಿರಕ್ಷರಿಗಳಾದರೆ ಎಲ್ಲಿಯೂ ಸಲ್ಲದವರಾಗುವ ಅಪಾಯ ಕಟ್ಟಿಟ್ಟಿದ್ದು. ಹಾಗಾಗಿ ತಾಂತ್ರಿಕ ನೈಪುಣ್ಯ ಇಲ್ಲದಿದ್ದರೂ, ಖರ್ಚಿಗೆ ಸಾಕಾಗುವಷ್ಟು ಡಿಜಿಟಲ್ ಕಲಿಕೆ ಇರಲೇಬೇಕು. ಶಾಲೆಯ ದಿನಗಳಲ್ಲಿ ತಂತ್ರಜ್ಞಾನದ ಉಪಯೋಗ ಅಭ್ಯಾಸ ಆಗಿಯೇ ಇರುತ್ತದೆ. ಕಾಲೇಜಿನ ದಿನಗಳಲ್ಲಿ ಆಸಕ್ತಿ ಹರಿವು ಎಲ್ಲಿದೆ ಎಂಬುದನ್ನು ತಿಳಿದುಕೊಂಡರೆ ಆಳವಾದ ಅಧ್ಯಯನ ಸಾಧ್ಯ.
ಸಂವಹನಾ ಚತುರತೆ
ಬಾಯಿದ್ದರೆ ತಾಯಿ ಇದ್ದಂತೆ ಎಂಬ ಮಾತಿದೆ. ಹೌದು, ಆಡುಮಾತಿನಲ್ಲೇ ಹೇಳುವುದಾದರೆ ಮಾತು ಸರಿಯಾಗಿರಬೇಕು. ಸಂವಹನಾ ಚತುರರಿಗೆ ಯಶಸ್ಸು ಸುಲಭಸಾಧ್ಯ ಎಂಬುದು ನಿರೂಪಿತವಾಗಿದೆ. ಕೇಳುವುದು ಸಹ ಸಂವಹನದ ಭಾಗವೇ ಹೌದು. ದ್ವಿಪಕ್ಷೀಯ ಸಂವಹನ ಸರಿಯಾಗಿರಬೇಕೆಂದರೆ ಬಾಯಿ ಮತ್ತು ಕಿವಿ ಎರಡೂ ಚುರುಕಾಗಿ ಇರಬೇಕು
ಸಮಯ ನಿರ್ವಹಣೆ
ವಿದ್ಯಾರ್ಥಿ ಜೀವನದಲ್ಲಿ ಓದು, ಹವ್ಯಾಸ, ಆಸಕ್ತಿ, ಸ್ನೇಹಿತರು ಎಂದು ಬಿಡುವಿಲ್ಲದಂತಿರುತ್ತದೆ. ಇವಿಷ್ಟರ ನಡುವೆ ತಾಳ ತಪ್ಪದಂತೆ ಇರಬೇಕಾದರೆ ಸೂಕ್ತ ರೀತಿಯಲ್ಲಿ ಸಮಯ ನಿರ್ವಹಣೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ಉದಾ: ಶಾಲೆಯ ದಿನಗಳಲ್ಲಿ ಎನ್‌ಸಿಸಿ, ಯೋಗ, ಕ್ರಿಕೆಟ್ ಎಂದೆಲ್ಲಾ ಓಡಾಡುತ್ತಿರುವಾಗ ಓದುವುದಕ್ಕೆ ಸಮಯ ಹೊಂದಿಸುವುದು ಎಲ್ಲಿ ಮತ್ತು ಹೇಗೆ ಎಂಬುದು ತಿಳಿದಿದ್ದರೆ ಪರೀಕ್ಷೆಯ ದಿನಗಳಲ್ಲಿ ದುಸ್ವಪ್ನಗಳು ಕಾಡುವುದಿಲ್ಲ.
ನಾಯಕತ್ವದ ಸಾಮರ್ಥ್ಯ
ಜೀವನದ ಯಾವುದೋ ತಿರುವಿನಲ್ಲಿ ಧುತ್ತನೆ ಎದುರಾಗುವ ಸತ್ವ ಪರೀಕ್ಷೆಗಳಿಗೆ ಈ ಸಾಮರ್ಥ್ಯ ಇರಲೇಬೇಕು. ಸಹವರ್ತಿಗಳನ್ನು ಬಿಟ್ಟುಕೊಡದೆ ಜೊತೆಗಿರುವುದು, ಒಟ್ಟಾಗಿ ಕೆಲಸ ಮಾಡುವುದು, ಅವರವರ ಸಾಮರ್ಥ್ಯಕ್ಕೆ ತಕ್ಕ ಕೆಲಸಗಳನ್ನು ವಹಿಸುವುದು ಮುಂತಾದ ಕೆಲಸಗಳು ಮುಂಚೂಣಿಯಲ್ಲಿರುವವರಿಗೆ ಇರಲೇಬೇಕಾದ ಗುಣಗಳು.
ಇದನ್ನೂ ಓದಿ: Education News : ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ಮರುಪಾವತಿ ನೀತಿ ಜಾರಿಗೆ ಯುಜಿಸಿ ಸೂಚನೆ