Site icon Vistara News

Education News: ವಿದ್ಯಾ ಸಂಸ್ಥೆಯ ಇತಿಹಾಸ, ಗುರಿ ತಿಳಿಯುವುದು ಅತ್ಯವಶ್ಯ: ಹರಿಪ್ರಕಾಶ್‌ ಕೋಣೆಮನೆ

Education News essential to know the history and goals of an educational institution says Hariprakash Koonemane

ಶಿರಸಿ: ಮಕ್ಕಳನ್ನು ಶಾಲೆಗೆ ಸೇರಿಸಿದರೆ ಪೋಷಕರ ಜವಾಬ್ದಾರಿ ಮುಗಿದಂತಲ್ಲ. ಆ ವಿದ್ಯಾ ಸಂಸ್ಥೆಯ ಇತಿಹಾಸ ಹಾಗೂ ಅದರ ಮುಂದಿನ ಗುರಿ‌ ಏನೆಂದು ತಿಳಿದುಕೊಳ್ಳಬೇಕು. ಅದಕ್ಕೆ ಆ ವಿದ್ಯಾ ಸಂಸ್ಥೆಯ ಹಿನ್ನೋಟ ಹಾಗೂ ಮುನ್ನೋಟದ ಕುರಿತು ಅವಲೋಕನ‌ ಮಾಡಬೇಕಿದೆ ಎಂದು ವಿಸ್ತಾರ ನ್ಯೂಸ್‌ನ ಸಿಇಒ, ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ (Hariprakash Koonemane) ಅಭಿಪ್ರಾಯಪಟ್ಟರು.

ನಗರದ ಲಯನ್ಸ್ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹರಿಪ್ರಕಾಶ್ ಕೋಣೆಮನೆ, ಮಕ್ಕಳನ್ನು ಶಾಲೆಗೆ ಸೇರಿಸಿದ ಮಾತ್ರಕ್ಕೆ ನಿಮ್ಮ ಜವಾಬ್ದಾರಿ ಮುಗಿಯದು. ಶಾಲೆಯ ಏಳಿಗೆ ಹಾಗೂ ಅದರ ಒಳಿತಿಗೆ ನಿಮ್ಮ ಕೊಡುಗೆ ಇರಬೇಕು. ಜತೆಗೆ ಶಾಲೆಯ ಇತಿಹಾಸ ಹಾಗೂ ಮುಂದಿನ ಗುರಿಯನ್ನು ತಿಳಿದುಕೊಳ್ಳುವುದು ನಿಮ್ಮ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಶಾಲೆಯ ಏಳಿಗೆ ಹಾಗೂ ಒಳಿತಿಗೆ ನೀವೇ ಜವಾಬ್ದಾರರು.‌ ವಿದ್ಯಾ ಸಂಸ್ಥೆಯ ಕುರಿತು ಪೋಷಕರು ಅವಲೋಕನ ಅತ್ಯಗತ್ಯ. ಆಗ ಮಾತ್ರ ಸಂಸ್ಥೆ ಏಳಿಗೆ ಹೊಂದಲು ಸಾಧ್ಯವಾಗುತ್ತದೆ. ಅದರ ಜತೆ ಮಕ್ಕಳ ಹಾಗೂ ಪಾಲಕರ ಏಳಿಗೆ ಕೂಡ ಆಗುತ್ತದೆ. ಮಕ್ಕಳು ಎಲ್ಲ ರಂಗದಲ್ಲೂ ಪ್ರತಿಭಾವಂತರಾಗಬೇಂಕೆಂದು ಪೋಷಕರು ಬಯಸುತ್ತಾರೆ. ಆದರೆ, ಆ ರೀತಿಯ ಶಿಕ್ಷಣವನ್ನು ಇಂದಿನ ಕಾಲಘಟ್ಟದಲ್ಲಿ ಶಿಕ್ಷಣ ವ್ಯವಸ್ಥೆ ಹಾಗೂ ಸಂಸ್ಥೆಯಲ್ಲಿ ನೀಡಲಾಗುತ್ತಿದೆಯಾ ಎಂಬುದನ್ನು ಪೋಷಕರು ಪರೀಕ್ಷಿಸಬೇಕಿದೆ ಎಂದು ಹೇಳಿದರು.

ಕನಿಷ್ಠ ಪಿಯುಸಿ ಹಂತದವರೆಗಾದರೂ ಮಕ್ಕಳನ್ನು ನಮ್ಮ ಜತೆಯಲ್ಲೇ ಇಟ್ಟುಕೊಂಡು ಶಿಕ್ಷಣ ಕೊಡಿಸಿದರೆ ಪಾಲಕರೊಂದಿಗೆ ಬಾಂಧವ್ಯ ಬೆಳೆಯುವುದಕ್ಕೆ ಕಾರಣವಾಗುತ್ತದೆ. ಉನ್ನತ ಶಿಕ್ಷಣ ನೀಡಿದರೆ ಮಕ್ಕಳು ಉತ್ತಮ ವೈದ್ಯರು, ಎಂಜಿನಿಯರ್ ಆಗಬಹುದು. ಆದರೆ, ಮಕ್ಕಳು ನಮ್ಮ ಮಕ್ಕಳಾಗೇ ಇರುತ್ತಾರೆಯೇ ಎಂಬುದು ಮುಖ್ಯವಾಗುತ್ತದೆ. ನಮ್ಮ ಸಂಸ್ಕೃತಿ, ಸಂಸ್ಕಾರ, ನಮ್ಮ ಜಾಯಮಾನವನ್ನು ಉಳಿಸಿಕೊಳ್ಳಬೇಕು. ಮಕ್ಕಳಲ್ಲಿ ಒಂದು ಹಂತದ ತಿಳಿವಳಿಕೆ ಬರುವವರೆಗೆ ಊರಿನ ಶಿಕ್ಷಣ ಸಂಸ್ಥೆಗಳಲ್ಲಿ ಓದಿಸಬೇಕು ಎಂದು ಹರಿಪ್ರಕಾಶ್ ಕೋಣೆಮನೆ ಹೇಳಿದರು.

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಪಾಲಕರನ್ನು ನೋಡಿಕೊಳ್ಳುವ ಮನಸ್ಥಿತಿ ಬೆಳೆಯಬೇಕು. ಮಕ್ಕಳಲ್ಲಿ ಬದುಕಿನ ಕೌಶಲ್ಯ, ಆತ್ಮಸ್ಥೈರ್ಯ ಬೆಳೆಸಬೇಕು. ಇವೆಲ್ಲ ನಮ್ಮ ಮಗು ಸ್ವಾಭಿಮಾನಿ, ಸ್ವತಂತ್ರ ಮಗು ಆಗಬೇಕು. ಅದಕ್ಕೆ ನೈಸರ್ಗಿಕವಾಗಿ ಬೆಳವಣಿಗೆ ಸಾಧಿಸಬೇಕು. ಆಗ ಅವರು ಹಳ್ಳಿಯಿಂದ ನಗರಕ್ಕೆ ತೆರಳಿದರೂ ನಮ್ಮ ಮೂಲ ನೆಲದತ್ತ ಕಾಳಜಿ ವಹಿಸುತ್ತಾರೆ ಎಂದರು.

ಇದನ್ನೂ ಓದಿ: Wood Smuggling: ಮರಗಳ ಕಡಿತ ಪ್ರಕರಣ; ವಿಕ್ರಮ್‌ ಸಿಂಹಗೆ ಜಾಮೀನು ಮಂಜೂರು

ಲಯನ್ಸ್ ಸ್ಕೂಲ್ ಅಧ್ಯಕ್ಷ ಪ್ರಭಾಕರ್ ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷ ಕೆ.ಬಿ.ಲೋಕೇಶ ಹೆಗಡೆ, ಗೌರವ ಕಾರ್ಯದರ್ಶಿ ಪ್ರೋ. ರವಿ ನಾಯಕ್, ಖಜಾಂಚಿ ಉದಯ ಸ್ವಾದಿ, ಶ್ಯಾಮಸುಂದರ ಭಟ್ಟ, ಶ್ರೀಕಾಂತ ಹೆಗಡೆ, ಜ್ಯೋತಿ ಹೆಗಡೆ, ವಿನಯಾ ಹೆಗಡೆ, ಪ್ರಾಚಾರ್ಯ ಶಶಾಂಕ ಹೆಗಡೆ ಇತರರು ಇದ್ದರು.

Exit mobile version