ನವ ದೆಹಲಿ : ಆಫ್ರಿಕಾದ ತಾಂಜಾನಿಯಾದಲ್ಲಿ ಸದ್ಯವೇ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (Indian Institute of Technology-IIT) ಕ್ಯಾಂಪಸ್ ಆರಂಭವಾಗಲಿದೆ (education news). ಇದು ವಿದೇಶದಲ್ಲಿನ ಮೊಟ್ಟ ಮೊದಲ ಐಐಟಿ ಕ್ಯಾಂಪಸ್ ಎಂಬ ಹೆಗ್ಗಳಿಗೆ ಪಾತ್ರವಾಗಲಿದೆ. ವಿದೇಶಾಂಗ ಸಚಿವ ಎಸ್ ಜಯಶಂಕರ್ ತಾಂಜಾನಿಯಾದಕ್ಕೆ ಭೇಟಿ ನೀಡದ ಸಂದರ್ಭದಲ್ಲಿ ಈ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ವಿದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವುದು, ವಿದೇಶಿ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಅವಕಾಶ ನೀಡುವುದು ಈಗ ಭಾರತದ ವಿದೇಶಾಂಗ ನೀತಿಯ ಭಾಗವಾಗಿದ್ದು, ಇದರಂತೆಯೇ ತಾಂಜಾನಿಯಾದಲ್ಲಿ ಐಐಟಿಯನ್ನು ಆರಂಭಿಸಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ-2020 ರಲ್ಲಿ ಕೂಡ ʻʻದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಿಗೆ ವಿದೇಶಗಳಲ್ಲಿ ಕ್ಯಾಂಪಸ್ ಆರಂಭಿಸಲು ಪ್ರೋತ್ಸಾಹ ನೀಡಲಾಗುವುದುʼʼ ಎಂದು ಹೇಳಲಾಗಿದೆ.
ಐಐಟಿ ಮದ್ರಾಸ್ ತಾಂಜಾನಿಯಾದ ಜಾನ್‌ಜಿಬರ್‌ನಲ್ಲಿ ಈ ಕ್ಯಾಂಪಸ್ ಆರಂಭಿಸಲಿದ್ದು, ಇದಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಎರಡೂ ದೇಶಗಳ ಶಿಕ್ಷಣ ಸಚಿವರ ಸಹಿ ಹಾಕಿದ್ದಾರೆ. ಮುಂದಿನ ಅಕ್ಟೋಬರ್‌ನಿಂದ ಇಲ್ಲಿ ಕೋರ್ಸ್ ಆರಂಭವಾಗಲಿವೆ ಎಂದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ (Click Here) ಮಾಡಿ.
ಐಐಟಿ ಮದ್ರಾಸ್ ವಿದ್ಯಾರ್ಥಿಗಳ ಪ್ರವೇಶಕ್ಕೆ ಮಾನದಂಡವನ್ನು ನಿಗದಿಪಡಿಸಲಿದೆ. ವಿದೇಶದಲ್ಲಿನ ಕ್ಯಾಂಪಸ್ ಅನ್ನು ಮುನ್ನೆಡೆಸುವ ಜವಾಬ್ದಾರಿಯನ್ನು ಕೂಡ ಮದ್ರಾಸ್ ಐಐಟಿಗೇ ವಹಿಸಲಾಗಿದೆ. ಇದು ಭಾರತದ ಶಿಕ್ಷಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವ ಮೊದಲ ಹೆಜ್ಜೆಯಾಗಿದೆ ಎಂದು ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಇದನ್ನೂ ಓದಿ : Education Guide : ನಂ.1 ಜಾಬ್ ಗ್ಯಾರಂಟಿ ಕೋರ್ಸ್; ಆರ್ಟಿಫಿಷಿಯಲ್ ಇಂಟಲಿಜೆನ್ಸಿ
2021 ರಲ್ಲಿಯೇ ಕೇಂದ್ರ ಸರ್ಕಾರ ವಿದೇಶದಲ್ಲಿ ನಮ್ಮ ದೇಶದ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ಅನ್ನು ಆರಂಭಿಸಲು ಅಗತ್ಯವಾದ ಚೌಕಟ್ಟು ರೂಪಿಸಲು 16 ಸದಸ್ಯರ ಸಮಿತಿಯೊಂದನ್ನು ರಚಿಸಿತ್ತು. ಐಐಟಿ ಕೌನ್ಸಿಲ್‌ನ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ರಾಧಕೃಷ್ಣನ್ ಈ ಸಮಿತಿಯ ಮುಖ್ಯಸ್ಥರಾಗಿದ್ದರು. ಈ ಸಮಿತಿಯು ವರದಿ ಸಲ್ಲಿಸಿದ್ದು, ಐಐಟಿಗಳ ನೇತೃತ್ವದಲ್ಲಿ ವಿದೇಶಗಳಲ್ಲಿ ಕ್ಯಾಂಪಸ್ ಆರಂಭಿಸಬೇಕೆಂದು ಸಲಹೆ ನೀಡಲಾಗಿತ್ತು. ಅದರಂತೆಯೇ ಈ ಕ್ಯಾಂಪಸ್ ಆರಂಭವಾಗುತ್ತಿದೆ.