ಬೆಂಗಳೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮನವಿಯಂತೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಮೊತ್ತ 10 ಸಾವಿರ ರೂಪಾಯಿಯಿಂದ 25 ಸಾವಿರ ರೂಪಾಯಿಗಳಿಗೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಅಲ್ಲದೆ, ಶಿಕ್ಷಕರ ಶಾಲೆಯ (Education News) ಅಭಿವೃದ್ಧಿಗಾಗಿ ನೀಡಲಾಗುತ್ತಿದ್ದ 50,000 ರೂಪಾಯಿಗಳ ಅನುದಾನವನ್ನು ಮುಂದುವರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಅವರು ರಾಜ್ಯ ಸರ್ಕಾರವನ್ನು ಅಭಿನಂದಿಸಿದ್ದಾರೆ.
ಬಹು ದಿನಗಳ ಬೇಡಿಕೆ ಹಾಗೂ ನಿರಂತರ ಪ್ರಯತ್ನದಿಂದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ನೀಡುವ ಗೌರವಧನದ ಮೊತ್ತವನ್ನು ಹೆಚ್ಚಿಸಲಾಗಿದೆ. ಬಹುಮಾನದ ಮೊತ್ತವನ್ನು ಹೆಚ್ಚಿಸಲು ಸಹಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಶಿಕ್ಷಣ ಇಲಾಖೆಯ (Education News) ಪ್ರಧಾನ ಕಾರ್ಯದರ್ಶಿ, ಆಯುಕ್ತರಿಗೆ, ಶಿಕ್ಷಕರ ಕಲ್ಯಾಣ ನಿಧಿಯ ಎಲ್ಲ ಗೌರವಾನ್ವಿತ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಸಮಯೋಚಿತ ಸಲಹೆ ಮತ್ತು ಅವರ ಪ್ರಾಮಾಣಿಕ ಪ್ರಯತ್ನದಿಂದ ಬಹುಮಾನದ ಮೊತ್ತ ಹೆಚ್ಚಿಗೆ ಆಗಿದೆ ಎಂದು ಚಂದ್ರಶೇಖರ ನುಗ್ಗಲಿ ಸಂತಸ ವ್ಯಕ್ತಪಡಿಸಿದ್ದಾರೆ.
ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಮೊತ್ತ ಏರಿಕೆ ಸಂಬಂಧ ಸರ್ಕಾರದ ಆದೇಶ ಪತ್ರ
ಇದನ್ನೂ ಓದಿ: Bus Ticket : ದುಪ್ಪಟ್ಟಾಯ್ತು ಖಾಸಗಿ ಬಸ್ ಪ್ರಯಾಣ; ಆ.15ರ ಎಫೆಕ್ಟ್!
ಶಿಕ್ಷಣ ಇಲಾಖೆಗೆ ಅಭಿನಂದನೆ
ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರ ಶಾಲೆಯ ಅಭಿವೃದ್ಧಿಗಾಗಿ 50,000 ರೂಪಾಯಿಗಳ ಅನುದಾನ ಕೊಡುವ ವ್ಯವಸ್ಥೆಯನ್ನು ಮುಂದುವರಿಸಲಾಗಿದೆ. ಈ ಬಗ್ಗೆ ಸಂಘ ಮನವಿ ಮಾಡಿತ್ತು. ಶಿಕ್ಷಣ ಇಲಾಖೆ ನಮ್ಮ ಮನವಿಯನ್ನು ಪುರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಧನ್ಯವಾದ ಹೇಳಬಯಸುತ್ತೇನೆ ಎಂದು ಚಂದ್ರಶೇಖರ ನುಗ್ಗಲಿ ಹೇಳಿದರು.