Site icon Vistara News

Electric shock : ಶಾಲಾ ಕ್ರೀಡಾಕೂಟದಲ್ಲಿ ಪ್ರವಹಿಸಿದ ವಿದ್ಯುತ್‌; ಪೋಷಕ ಸಾವು, ವಿದ್ಯಾರ್ಥಿ ಗಂಭೀರ

Man Dead student critically injured in electrocution

ಚಿಕ್ಕಬಳ್ಳಾಪುರ: ಇಲ್ಲಿನ ಗೌರಿಬಿದನೂರಿನ ತಾಲೂಕಿನ ಕಲ್ಲಂಕರಾಯನಕುಂಟೆ ಗ್ರಾಮದಲ್ಲಿ ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಪೋಷಕರೊಬ್ಬರು ಕರೆಂಟ್‌ ಶಾಕ್‌ನಿಂದ (Electric shock) ಮೃತಪಟ್ಟಿದ್ದಾರೆ. ರಾಘವೇಂದ್ರ ಮೃತ ದುರ್ದೈವಿ.

ಶ್ರೀರಾಮಕೃಷ್ಣ ಶಾರದಾದೇವಿ ಶಾಲೆಯಲ್ಲಿ ಪೋಷಕರ ಕ್ರೀಡಾಕೂಟ ಆಯೋಜಿಸಲಾಗಿತ್ತು. ಇದಕ್ಕಾಗಿ ಶಾಲಾ ಆವರಣದಲ್ಲಿ ದೊಡ್ಡದಾಗಿ ಪೆಂಡಾಲ್‌ ಹಾಕಲಾಗಿತ್ತು. ಈ ವೇಳೆ ಜೋರಾಗಿ ಗಾಳಿ ಬೀಸಿದ್ದರಿಂದ ಪೆಂಡಾಲ್‌ ಹಾರಿ ಹೈಟೆನ್ಷನ್‌ ತಂತಿಗೆ ತಗುಲಿದೆ.

ಇದರಿಂದ ಶಾರ್ಟ್‌ ಸರ್ಕ್ಯೂಟ್‌ ಸಂಭವಿಸಿದೆ. ವಿದ್ಯುತ್ ಅವಘಡದಲ್ಲಿ ಪೋಷಕ ರಾಘವೇಂದ್ರ ಸ್ಥಳದಲ್ಲೇ ಮೃತಪಟ್ಟರೆ, ಒಬ್ಬ ವಿದ್ಯಾರ್ಥಿ ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಕೂಡಲೇ ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆಯಲ್ಲಿ ಒಟ್ಟು 18 ಮಂದಿ ಗಾಯಗೊಂಡಿದ್ದಾರೆ. ನಾಲ್ವರು ವಿದ್ಯಾರ್ಥಿಗಳು, ಇಬ್ಬರು ಪೋಷಕರು ಹಾಗೂ ಇಬ್ಬರು ಶಿಕ್ಷಕರು ಗಂಭೀರ ಗಾಯಗೊಂಡಿದ್ದಾರೆ. ಗೌರಿಬಿದನೂರು ನಗರದ ಅರುಣಾ ಆಸ್ಪತ್ರೆಯಲ್ಲಿ ಹತ್ತು ಮಂದಿಗೆ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಂಟು ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕುಣಿಗಲ್‌ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಮತ್ತೆ ಏರುಪೇರು

ಕುಣಿಗಲ್‌ ತಾಲೂಕಿನ ಸೀನಪ್ಪನಹಳ್ಳಿ ಗ್ರಾಮದ ಶ್ರೀ ಅಂಬಾ ಭವಾನಿ ಅನುದಾನಿತ ಫ್ರೌಢಶಾಲೆಯಲ್ಲಿ ನೀಡಿದ್ದ ಮೊಸರನ್ನ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳು ಚಿಕಿತ್ಸೆ ಪಡೆದು ಮನೆಗೆ ತೆರಳಿದ ಬಳಿಕ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿದ್ದು, (Tumkur News) ಗುರುವಾರ ತಡರಾತ್ರಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗುರುವಾರ ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಿದ ಬಳಿಕ 24 ಗಂಟೆ ನಿಗಾ ಘಟಕದಲ್ಲಿರಿಸಿ ಆರೋಗ್ಯ ಸ್ಥಿತಿ ಅವಲೋಕಿಸದೇ ವೈದ್ಯರು ಮನೆಗಳಿಗೆ ಕಳುಹಿಸಿದ್ದಾರೆ. ಇದಕ್ಕೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದು ಆಸ್ಪತ್ರೆಗೆ ಆಗಮಿಸಿದ ತಾಲೂಕು ದಂಡಾಧಿಕಾರಿ ವಿಶ್ವನಾಥ್‌, ಮಕ್ಕಳ ಆರೋಗ್ಯ ವಿಚಾರಿಸಿ ಮಾಹಿತಿ ಪಡೆದು ವೈದ್ಯರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಮಕ್ಕಳು ಗುಣಮುಖವಾಗುವವರೆಗೆ ಚಿಕಿತ್ಸೆ ಮುಂದುವರಿಸುವಂತೆ ತಿಳಿಸಿದರು. ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಾಲೆಯಲ್ಲಿ ಘಟನೆಗೆ ಕಾರಣವಾದವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ.

ಡಿಎಚ್‌ಒ ಡಾ. ಮಂಜುನಾಥ್‌ ಆಸ್ಪತ್ರೆಗೆ ಭೇಟಿ ನೀಡಿದರು. ಬಳಿಕ ಮಾತನಾಡಿ, ಪ್ರಾಥಮಿಕ ವರದಿ ಪ್ರಕಾರ ಆಹಾರದಲ್ಲಿ ವ್ಯತ್ಯಾಸವಾಗಿರುವ ಕಾರಣ ಮಕ್ಕಳಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು , ಕ್ರಿಮಿನಾಶಕದಿಂದಲ್ಲ. ಶಾಲಾ ಮಕ್ಕಳನ್ನು ಹೊರತುಪಡಿಸಿದರೆ ಶಾಲೆಯ ಅಕ್ಕಪಕ್ಕ ವಾಸವಿರುವ ಗ್ರಾಮಸ್ಥರಿಗೆ ಯಾವುದೇ ಸಮಸ್ಯೆಯಾಗಿಲ್ಲ ಬಿಸಿಯೂಟದ ಬದಲು ಮೋಸರನ್ನ ನೀಡಿದ್ದೆ ಘಟನೆಗೆ ಕಾರಣವಾಗಿದೆ. ಶಾಲೆಯ ಆಡಳಿತ ಮಂಡಳಿಯವರು ಹಾಗು ಶಿಕ್ಷಕರು ಪ್ರಕರಣವನ್ನು ಮುಚ್ಚಿಹಾಕಲು ಮಾವಿನ ಗಿಡಗಳಿಗೆ ಔಷಧಿ ಸಿಂಪಡಣೆ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುತ್ತಿರುವುದು ಈಗ ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version