Site icon Vistara News

Exam Tips: ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಹೀಗೆ ತಯಾರಾಗಿ

exam new

exam new

ಬೆಂಗಳೂರು: ಪ್ರಸ್ತುತ ಸ್ಪರ್ಧಾತ್ಮಕ ಪರೀಕ್ಷೆ (Competitive exams) ಎನ್ನುವುದು ಸಾಮಾನ್ಯ ಎಂಬಂತಾಗಿದೆ. ವಿದ್ಯಾರ್ಥಿ ಇರಲಿ, ಉದ್ಯೋಗಾರ್ಥಿ ಇರಲಿ ಸ್ಪರ್ಧಾತ್ಮಕ ಪರೀಕ್ಷೆ ಎನ್ನುವ ಸವಾಲನ್ನು ದಾಟಿ ಮುಂದೆ ಸಾಗಲೇಬೇಕಿದೆ. ಕೆಲವೊಮ್ಮೆ ನಾವು ಮಾಡುವ ಸಣ್ಣ-ಪುಟ್ಟ ತಪ್ಪುಗಳೇ ನಮ್ಮ ದೊಡ್ಡ ಅವಕಾಶವನ್ನು ಕಸಿದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ನಾವು ಈ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕಂಡು ಬರುವ ಸಾಮಾನ್ಯ ತಪ್ಪುಗಳು ಯಾವುವು? ಅವನ್ನು ಹೇಗೆ ಸರಿಪಡಿಸಬಹುದು? ಎನ್ನುವುದರ ವಿವರ ಇಲ್ಲಿದೆ (Exam Tips).

ಸರಿಯಾದ ತಯಾರಿ ಮತ್ತು ನಿರಂತರ ಅಧ್ಯಯನದಿಂದ ಖಂಡಿತವಾಗಿಯೂ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಾಧ್ಯ. ಸ್ಪರ್ಧಾತ್ಮಕ ಪರೀಕ್ಷೆ ವಿಷಯದಲ್ಲಿ ಇದಕ್ಕಿಂತಲೂ ಇನ್ನೂ ಹೆಚ್ಚಿನ ಗುಣಗಳು ಬೇಕಾಗುತ್ತವೆ. ಅವನ್ನೂ ಮೈಗೂಡಿಸಿಕೊಳ್ಳಬೇಕು. ಬಹುತೇಕರು ‘ಸ್ಪರ್ಧಾತ್ಮಕ ಪರೀಕ್ಷೆ’ ಎಂಬ ಪದ ಕೇಳಿದಾಗ ಒತ್ತಡ ಮತ್ತು ಆತಂಕ ಅನುಭವಿಸುತ್ತಾರೆ. ಮೊದಲು ಈ ರೀತಿಯ ಭಯದಿಂದ, ಋಣಾತ್ಮಕ ಮನೋಭಾವದಿಂದ ಹೊರ ಬರಬೇಕು ಎಂದು ತಜ್ಞರು ಹೇಳುತ್ತಾರೆ. ಇದಲ್ಲದೆ ನಾವು ಮಾಡುವ ಕೆಲವೊಂದು ತಪ್ಪುಗಳು ಮನಸ್ಸಿನ ಮೇಲೆ ಅಗಾಧ ಪ್ರಭಾವ ಬೀರುತ್ತವೆ. ಅವನ್ನು ಹೇಗೆ ನಿಭಾಯಿಸಬಹುದು ಎನ್ನುವುದನ್ನು ನೋಡೋಣ.

ಮಾಡೆಲ್‌ ಪರೀಕ್ಷೆ ಎದುರಿಸಿ

ಪರೀಕ್ಷೆಗೆ ತಯಾರಾಗುವ ಜತೆಗೆ ಮಾದರಿ ಪರೀಕ್ಷೆಗಳನ್ನು ಎದುರಿಸುವುದು ಕೂಡ ಮುಖ್ಯ. ಕೆಲವರು ಮಾದರಿ ಪರೀಕ್ಷೆಯನ್ನು ನಿರ್ಲಕ್ಷಿಸುತ್ತಾರೆ. ಇದು ತಪ್ಪು. ಯಾವ ರೀತಿ ಪರೀಕ್ಷೆ ಎದುರಿಸಬಹುದು, ಹೇಗೆಲ್ಲ ಬರೆಯಬೇಕು, ಸಮಯವನ್ನು ಹೇಗೆ ಹೊಂದಿಸಬಹುದು ಎನ್ನುವುದು ಮಾದರಿ ಪರೀಕ್ಷೆ ಮೂಲಕ ಅನುಭವಕ್ಕೆ ಬರುತ್ತದೆ. ಅತ್ಯಧಿಕ ಅಂಕ ಗಳಿಸುವವರು ಈ ರೀತಿಯ ಮಾದರಿ ಪರೀಕ್ಷೆ ಬರೆದಿರುತ್ತಾರೆ ಎನ್ನುವುದನ್ನು ಗಮನಿಸಿ. ಪ್ರತಿ ಪ್ರಶ್ನೆಗೆ ನೀವು ವ್ಯಯಿಸಿದ ಸಮಯ ಮತ್ತು ಪ್ರತಿ ವಿಭಾಗಕ್ಕೆ ಶಿಫಾರಸು ಮಾಡಿದ ಸಮಯವನ್ನು ಹೋಲಿಸಿ ನೋಡಲು ಸಾಧ್ಯವಾಗುತ್ತದೆ. ಸಮಯವನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎನ್ನುವುದನ್ನು ಇದರ ಸಹಾಯದಿಂದ ನಿರ್ಧರಿಸಬಹುದು. ಸಹಜವಾಗಿ ಇದರಿಂದ ಪರೀಕ್ಷೆ ಬರೆಯುವ ನಿಮ್ಮ ವೇಗವನ್ನು ಹೆಚ್ಚಿಸಬಹುದು.

ಪುನರ್‌ ಮನನಕ್ಕೆ ಗಮನ ಹರಿಸಿ

ಕೆಲವರು ಪರೀಕ್ಷೆಯ ದಿನ ಹತ್ತಿರ ದಿನ ಬಂತು ಎನ್ನುವಾಗ ಅಧ್ಯಯನಕ್ಕೆ ತೊಡಗುತ್ತಾರೆ. ಸಮಯದ ಅಭಾವದಿಂದ ಪುನರ್‌ ಮನನ ಮಾಡುವುದು, ಮಾದರಿ ಪರೀಕ್ಷೆ ಎದುರಿಸುವುದನ್ನು ನಿರ್ಲಕ್ಷಿಸುತ್ತಾರೆ. ಇದು ದೊಡ್ಡ ತಪ್ಪು. ಅಧ್ಯಯನ ಮಾಡಿದ್ದನ್ನು ಮತ್ತೆ ಮತ್ತೆ ಮನನ ಮಾಡಿಕೊಂಡಷ್ಟು ಉತ್ತಮ. ನಿರ್ಣಾಯಕ ಕ್ಷಣಗಳಲ್ಲಿ ಮುಖ್ಯ ವಿಷಯಗಳನ್ನು ನೆನಪಿಟ್ಟುಕೊಳ್ಳುವ ನಿಮ್ಮ ಸಾಮರ್ಥ್ಯವನ್ನು ಇದು ಸುಧಾರಿಸುತ್ತದೆ. ನಿಮ್ಮ ನೆನಪಿನ ಸಾಮರ್ಥ್ಯವನ್ನು ಬಲಪಡಿಸುತ್ತದೆ. ಇದಕ್ಕಾಗಿ ವೇಳಾಪಟ್ಟಿಯನ್ನು ತಯಾರಿಸಿಕೊಳ್ಳಿ. ಬರೆದು ಅಧ್ಯಯನ ಮಾಡುವುದನ್ನು ರೂಢಿಸಿಕೊಳ್ಳಿ.

ನಿಮ್ಮ ತಪ್ಪುಗಳನ್ನು ಪರಿಶೀಲಿಸಿ

ಮಾದರಿ ಪರೀಕ್ಷೆ ಎದುರಿಸುವುದರಿಂದ ನಿಮ್ಮ ದೌರ್ಬಲ್ಯ, ಧನಾತ್ಮಕ ಅಂಶಗಳು ಯಾವುವು ಎನ್ನುವುದನ್ನು ತಿಳಿದುಕೊಳ್ಳಬಹುದು. ಅದೇ ತಪ್ಪುಗಳನ್ನು ಮತ್ತೆ ಮತ್ತೆ ಮಾಡುತ್ತಿದ್ದರೆ ಮಾದರಿ ಪರೀಕ್ಷೆ ಎದುರಿಸಿ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಪ್ರತಿ ಸಲವೂ ನಿಮ್ಮ ದೌರ್ಬಲ್ಯವನ್ನು ಮೀರಲು ಪ್ರಯತ್ನಿಸಿ. ನೀವು ಎಲ್ಲಿ ತಪ್ಪು ಮಾಡುತ್ತಿದ್ದೀರಿ? ಎಡವುತ್ತಿರುವುದು ಎಲ್ಲಿ? ಎನ್ನುವುದನ್ನು ಗಮನಿಸಿ. ನಿಮಗೆ ಕಷ್ಟ ಎನಿಸುವ ವಿಷಯಗಳನ್ನು ಇನ್ನೂ ಹೆಚ್ಚು ಅಧ್ಯಯನ ಮಾಡಿ. ಮತ್ತೆ ವಿಷಯಗಳನ್ನು ವೇಗವಾಗಿ ಉತ್ತರಿಸಲು ಪ್ರಯತ್ನಿಸಿ.

ಸಮಯ ನಿರ್ವಹಣೆ ಸರಿಯಾಗಿರಲಿ

ಯಾವುದೇ ಪರೀಕ್ಷೆ ಇರಲಿ ಸಮಯದ ಸದುಪಯೋಗ ಬಹಳ ಮುಖ್ಯ. ಸಮಯ ನಿರ್ವಹಣಾ ಸಾಮರ್ಥ್ಯಗಳು ಯೋಜನಾ ಹಂತದಲ್ಲಿ ಮಾತ್ರವಲ್ಲ, ನೀವು ಪರೀಕ್ಷಾ ಕೊಠಡಿಯಲ್ಲಿ ಬರೆಯುವಾಗಲೂ ಅಗತ್ಯ. ಸುಲಭ ಪ್ರಶ್ನೆಗಳಿಗೆ ವೇಗವಾಗಿ, ಮೊದಲು ಉತ್ತರಿಸಿ. ಇದರಿಂದ ಕಷ್ಟದ ಪ್ರಶ್ನೆಗಳಿಗೆ ಇನ್ನಷ್ಟು ಸಮಯ ವ್ಯಯಿಸಲು ಸಾಧ್ಯವಾಗುತ್ತದೆ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಅಂಕಗಳ ಬಗ್ಗೆ ಗಮನವಿರಲಿ

ನೀವು ಎದುರಿಸುತ್ತಿರುವ ಪರೀಕ್ಷೆಯಲ್ಲಿ ಎಷ್ಟು ಅಂಕ ಗಳಿಸಬೇಕು ಎನ್ನುವುದನ್ನು ಮೊದಲೇ ನಿರ್ಧರಿಸಿ. ಇದರಿಂದ ನೀವು ಬಿಟ್ಟುಬಿಡಬಹುದಾದ ವಿಷಯಗಳನ್ನು ಗುರುತಿಸಲು ಸಾಧ್ಯ. ಇದರಿಂದ ಇನ್ನಷ್ಟು ಹೆಚ್ಚಿನ ಸಮಯಾವಕಾಶ ಲಭಿಸುತ್ತದೆ. ಉದಾಹರಣೆಗೆ, ಎನ್ಎಂಐಎಂಎಸ್ ಎಂಬಿಎ (NMIMS MBA) ಆಕಾಂಕ್ಷಿಗಳು 290+ ಅಂಕಗಳ ಗುರಿಯನ್ನು ಬೆನ್ನಟ್ಟುವ ಬದಲು ಕಟ್ ಆಫ್‌ಗೆ ಬೇಕಾದ 250 ಅಂಕಗಳ ಗುರಿ ನಿಗದಿಪಡಿಸಬಹುದು. ವಿದೇಶದಲ್ಲಿ ಉತ್ತಮ ಯುಜಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಬಯಸುವವರು ತಮ್ಮ ಎಸ್ಎಟಿಗಳಲ್ಲಿ (SAT) 1400+ ಸ್ಕೋರ್ ಗಳಿಸುವ ಗುರಿಯನ್ನು ಹೊಂದಬಹುದು. ಅಲ್ಲದೆ ಕೆಲವೊಂದು ಪರೀಕ್ಷೆಗಳಲ್ಲಿ ಮೈನಸ್‌ ಅಂಕಗಳೂ ಇರುವುದರಿಂದ ಇದರತ್ತಲೂ ಗಮನ ಹರಿಸಿ.

ಇದನ್ನೂ ಓದಿ: Education News : ಪದವೀಧರ ಶಿಕ್ಷಕರ ಜ್ಯೇಷ್ಠತೆ ಸಮಸ್ಯೆ ಬಗ್ಗೆ ಸಿಎಂ ಜತೆ ಶೀಘ್ರ ಚರ್ಚೆ: ಮಧು ಬಂಗಾರಪ್ಪ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿ

Exit mobile version