Site icon Vistara News

Exam Tips : ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಬೇಕು, ಹೆದರಬಾರದು!

exam tips

exam tips

ರಾ. ಹ. ತಿಮ್ಮೇನಹಳ್ಳಿ
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಮಾತ್ರ ಆತಂಕ, ಭಯದಿಂದ ಓದಿನ ಕಡೆಗೆ ಗಮನ ಕೊಡುತ್ತಿದ್ದಾರೆ. ಇನ್ನು ಪಬ್ಲಿಕ್‌ ಪರೀಕ್ಷೆ ಇದೆ ಎಂದರಂತೂ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹೀಗೆ ಎಲ್ಲರೂ ಆತಂಕದಲ್ಲಿಯೇ ಪರೀಕ್ಷೆ ಎದುರಿಸುವ ಸ್ಥಿತಿ ನಿರ್ಮಾಣವಾಗುತ್ತಿದೆ.

ಶೈಕ್ಷಣಿಕ ವರ್ಷ ಆರಂಭವಾದ ಜೂನ್ ತಿಂಗಳಿಂದ ಫೆಬ್ರವರಿಯವರೆಗೂ ಸಮಯವನ್ನು ಸದ್ಭಳಕೆ ಮಾಡಿಕೊಳ್ಳದೆ ಪರೀಕ್ಷೆ ಹತ್ತಿರ ಸಮೀಪಿಸುತ್ತಿದ್ದಂತೆ ಪರೀಕ್ಷೆಯ ಒತ್ತಡಕ್ಕೊಳಗಾಗುವುದು ಸರ್ವೇ ಸಾಮಾನ್ಯವಾಗಿದೆ. ಈ ಒತ್ತಡವನ್ನು ಸರಿಯಾಗಿ ನಿಭಾಯಿಸಲಾಗದೆ ಕೆಲವರು ತಪ್ಪು ಹಾದಿ ಹಿಡಿದ ಪ್ರಕರಣಗಳೂ ಇವೆ.

ಪೋಷಕರು ತಮ್ಮ ಮಕ್ಕಳು ಶಾಲೆಯಲ್ಲಿ ಕಲಿಕೆಯ ಯಾವ ಹಂತದಲ್ಲಿದ್ದಾರೆ. ಅವನ ನ್ಯೂನ್ಯತೆಗಳೇನು? ಆತನ ಬೇಕು ಬೇಡಗಳೇನು? ಎಂಬ ವಿಷಯಗಳ ಬಗ್ಗೆ ವರ್ಷವಿಡೀ ಗಮನ ನೀಡದ ವರ್ಷದ ಕೊನೆಯಲ್ಲಿ ಪರೀಕ್ಷೆ ಸಮೀಪಿಸುತ್ತಿದ್ದಂತೆಯೇ ಮಗುವನ್ನು ಓದಿಸಿ ಬೆಳಕು ಹರಿಯುವುದರಲ್ಲಿ ಆತನಲ್ಲಿ ಪವಾಡವನ್ನು ನಿರೀಕ್ಷಿಸುವುದು ಸಾಮಾನ್ಯವಾಗಿದೆ. ಇದೆಷ್ಟು ಸರಿ? ಪೋಷಕರು ಸ್ವಲ್ಪ ಚಿಂತಿಸಬೇಕು.

ಮಕ್ಕಳಿಗೆ ಪರೀಕ್ಷಾ ಭಯ ಬಂದೊದಗುವುದಕ್ಕೆ ನಗರ ಪ್ರದೇಶಗಳ ಕೌಟುಂಬಿಕ ಸ್ಥಿತಿ ಗತಿಯು ಕಾರಣ. ತಂದೆ – ತಾಯಿಗಳಿಬ್ಬರು ದುಡಿಯಲೇಬೇಕಾದಂತಹ ಇಂದಿನ ಅನಿವಾರ್ಯ ಪರಿಸ್ಥಿತಿಯಲ್ಲಿ ಪ್ರತಿಯೊಂದು ಮನೆಯಲ್ಲೂ ಮಕ್ಕಳು ಒಂಟಿತನದ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಮಕ್ಕಳಿಗೆ ವಿದ್ಯಾಭ್ಯಾಸದ ಮೇಲಿನ ಆಸಕ್ತಿ ಕುಂಠಿತವಾಗುತ್ತಿದೆ. ಹಿಂದಿನ ಕಾಲದಲ್ಲಿ ಟ್ಯೂಷನ್‌ಗೆ ಮಕ್ಕಳನ್ನು ಕಳುಹಿಸುವುದು ಎಂದರೆ ಅವಮಾನ ಕರ ಎಂಬ ಭಾವನೆ ಇತ್ತು. ಮಗು ಕಲಿಕೆಯಲ್ಲಿ ತುಂಬಾ ಹಿಂದೆ ಬಿದ್ದಿದ್ದಾನೆ ಎಂಬ ದೋರಣೆ ಇತ್ತು. ಆದರೆ ಈಗ ಎಲ್.ಕೆ.ಜಿ. ಮಗು ಶಾಲೆಯಿಂದ ಸೀದಾ ಟ್ಯೂಷನ್‌ಗೆ ಹೋಗಿ ಬರುವುದು ಸರ್ವ ಸಾಮಾನ್ಯವಾಗಿದೆ.

ಮಕ್ಕಳು ಸಾಧ್ಯವಾದಷ್ಟು ಹೆಚ್ಚಿನ ಅಂಕಗಳೊಂದಿಗೆ ತೇರ್ಗಡೆಯಾಗಿ ಮೆರಿಟ್ ಸೀಟು ಪಡೆಯಬೇಕೆಂಬ ಹಂಬಲ ಪೋಷಕರಲ್ಲಿ ಇಂದಿನ ದಿನಗಳಲ್ಲಿ ಸಾಮಾನ್ಯವಾಗುತ್ತಿರುವ ಈ ಬೆಳವಣಿಗೆ ಸಹಜವಾಗಿಯೇ ಮಕ್ಕಳ ಮಾನಸಿಕ ಸ್ಥಿತಿಯ ಮೇಲೆ ಅಪಾರ ಪರಿಣಾಮ ಬೀರುತ್ತಿದೆ. ಸ್ಪರ್ಧಾತ್ಮಕ ದಿನಗಳಲ್ಲಿ ಗರಿಷ್ಠ ಪೈಪೋಟಿ ಎದುರಿಸಿ ಉತ್ತಮ ಅಂಕಗಳಿಸಬೇಕಾದ ಅನಿವಾರ್ಯತೆ ಮತ್ತು ಪೋಷಕರು, ಶಿಕ್ಷಕರ ಒತ್ತಡಗಳಿಂದಾಗಿ ಜರ್ಝರಿತವಾಗುತ್ತಿರುವ ವಿದ್ಯಾರ್ಥಿ ಸಮೂಹ ನಿಧಾನವಾಗಿ ಖಿನ್ನತೆ, ಭಯ ಮತ್ತಿತರ ಮಾನಸಿಕ ಸಮಸ್ಯೆಗಳಿಗೆ ತುತ್ತಾಗುತ್ತಿದೆ.

ಪರೀಕ್ಷೆ ಭಯ ನಿವಾರಣೆ ಹೇಗೆ?

ಪ್ರತಿಯೊಬ್ಬ ವಿದ್ಯಾರ್ಥಿಯೂ ತಾನು ಓದಲು ಕೂರುವ ಸ್ಥಳದಲ್ಲಿ ವೇಳಾ ಪಟ್ಟಿ ದಿನಚರಿಯ ಪಟ್ಟಿಯನ್ನು ಸದಾ ಕಣ್ಣಿಗೆ ಕಾಣುವಂತೆ ಇರಿಸಿಕೊಳ್ಳಬೇಕು. ತರಗತಿಯಲ್ಲಿ ತನಗಿಂತ ಹೆಚ್ಚು ಅಂಕ ಪಡೆದ ಸಹಪಾಠಿಯನ್ನು ಕಂಡು ಅಸೂಯೆ ಪಡದೆ ಅವನ ಓದಿನ ವಿಧಾನವನ್ನು ಅರಿತು ತಾನೂ ಅದನ್ನು ಕ್ರಮೇಣ ಅಳವಡಿಸಿಕೊಳ್ಳಬಹುದು.

ಓದುವಾಗ ಏಕಾಗ್ರತೆ ಹೆಚ್ಚಲು ತನಗೆ ತಾನೆ ಸಕಾರತ್ಮಾಕವಾದ ಅಂಶಗಳನ್ನು ಹೇಳಿಕೊಂಡು ಓದಲು ಕೂರುವ ಮುನ್ನ ಎಲ್ಲವನ್ನು ಬಳಿಯಲ್ಲಿರಿಸಿಕೊಂಡು ಒಂದೆಡೆ ಏಕಾಗ್ರತೆಯಿಂದ ಕೂತು ಕಲಿಯಲು ಪ್ರಯತ್ನಿಸಬೇಕು. ೧೦ ನಿಮಿಷಗಳ ನಂತರ ಪುಸ್ತಕವನ್ನು ಮುಚ್ಚಿ ಅಲ್ಲಿಯವರೆಗೆ ಓದಿದ್ದನ್ನು ಮನನ ಮಾಡಬೇಕು. ಪರೀಕ್ಷೆಯ ಸಮಯದಲ್ಲಾಗಲಿ ಇತರ ದಿನಗಳಲ್ಲಾಗಲಿ, ವಿದ್ಯಾರ್ಥಿ ೮ ಗಂಟೆಗಳ ನಿದ್ರೆ ಅತ್ಯಾವಶ್ಯಕ. ಪರೀಕ್ಷೆಯ ಸಮಯದಲ್ಲಿ ಓದಿನ ಜೊತೆಗೆ ನಿದ್ರೆಯೂ ಇರಬೇಕು.

ಪೋಷಕರು ಮಕ್ಕಳನ್ನು ವಿನಾಕಾರಣ ದೂಷಿಸುವುದಾಗಲಿ, ಮತ್ತೊಬ್ಬರೊಡನೆ ಹೋಲಿಸಿ ಶಿಕ್ಷಿಸುವುದಾಗಲಿ ಮಾಡಬಾರದು. ಅವನು ಒಬ್ಬ ಡಾಕ್ಟರ್, ಎಂಜಿನಿಯರ್ ಕನಸು ಕಾಣಬಾರದು ಹಾಗೂ ಮಗುವಿನ ಮಾನಸಿಕ ಸಮತೋಲನ ಏರುಪೇರಾಗುವಂತಹ ಒತ್ತಡಗಳನ್ನು ತರಬಾರದು. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಯೂ ವಿದ್ಯಾಭ್ಯಾಸ ಮಾಡಿದ್ದಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾರ್ಥಕವಾಗುತ್ತದೆ.

ಇದನ್ನೂ ಓದಿ : Motivational Story: ಸೋಲಿನ ಭಯದಲ್ಲೇ ಇದ್ದ ಅವನಿಗೆ ಕೇಶವ ಮೂರ್ತಿ ಹೇಳಿದ ಗೆಲುವಿನ ಮಂತ್ರ

Exit mobile version