ಶಾಲೆಯ ದಿನಗಳ ಸೊಗಸೇ ಬೇರೆ. ಯಾವುದಕ್ಕೂ ತಲೆಬಿಸಿ ಮಾಡುವ ಕೆಲಸವೇ ಇಲ್ಲ, ಓದುವುದು ಮತ್ತು ಹವ್ಯಾಸಗಳನ್ನು ಬಿಟ್ಟು. ಒಮ್ಮೆ ಕಾಲೇಜಿಗೆ ಕಾಲಿಡುತ್ತಿದ್ದಂತೆ ಬದುಕು ಬದಲಾಗುತ್ತದೆ. ಸ್ನೇಹಿತರು, ಓದು-ಪಾಠ, ಓಡಾಟ, ತುಂಟಾಟಗಳು ಮಾತ್ರವೇ ಅಲ್ಲ ಊಟವೂ (healthy eating tips) ಬದಲಾಗಿ ಬಿಡುತ್ತದೆ. ಅದರಲ್ಲೂ ಮನೆ ಬಿಟ್ಟು ಬೇರೆ ಊರುಗಳಿಗೆ ಓದಲೆಂದು ಬಂದವರಿಗೆ ಅಮ್ಮನ ಕೈಯಡುಗೆ ಮತ್ತು ಮನೆಯ ಡಬ್ಬಿಯ ಸುಖವೂ ಇಲ್ಲದೆ, ಕಾಲೇಜ್ ಕ್ಯಾಂಟೀನು, ಹಾಸ್ಟೆಲ್ ಅಥವಾ ಪಿಜಿ ಆಹಾರವೇ ಪಾಲಿಗೆ ಬಂದ ಪಂಚಾಮೃತ. ಹಾಸ್ಟೆಲ್/ಪಿಜಿ ಊಟ ಇಷ್ಟವಾಗದಿದ್ದರೆ ಸಿಕ್ಕಿದ್ದನ್ನು ಸಿಕ್ಕಿದಲ್ಲಿ ತಿನ್ನುವುದು ಅನಿವಾರ್ಯವಾಗುತ್ತದೆ. ಇದಿಷ್ಟರ ನಡುವೆ ಸ್ನೇಹಿತರ ಆಕರ್ಷಣೆ, ಅವರು ಕರೆದಲ್ಲಿ ಹೋಗಲಾರೆನು-ಹೋಗದುಳಿಯಲಾರೆನು ಎಂಬಂಥ ಬವಣೆ. ಮಾತ್ರವಲ್ಲ, ಹೊಟ್ಟೆಗಿಳಿಯುವುದು ಜೇಬಿಗೂ ಭಾರವಾಗದಂತಿರಬೇಕು.
ಪದವಿಪೂರ್ವ ದಿನಗಳನ್ನು ಕಳೆದು ಪದವಿ ಅಥವಾ ಸ್ನಾತಕ ಪದವಿಗಳಿಗಾಗಿ ಮನೆಯಿಂದ ಹೊರಗೆ ಹೋಗುವ ವಿದ್ಯಾರ್ಥಿಗಳಲ್ಲಿ, ಅದರಲ್ಲೂ ಬೇರೆ ರಾಜ್ಯ ಅಥವಾ ಬೇರೆ ದೇಶಗಳಿಗೆ ಹೋಗುವ ವಿದ್ಯಾರ್ಥಿಗಳ ತೂಕ ಹೆಚ್ಚುವುದು ಸಾಮಾನ್ಯವಾಗಿ ಕಾಣುತ್ತದೆ. ಊಟ-ತಿಂಡಿಯೆಲ್ಲಾ ಅಮ್ಮನ ಡಿಪಾರ್ಟ್ಮೆಂಟು ಎಂದು ನೆಮ್ಮದಿಯಿಂದಿದ್ದ ದಿನಗಳ ಬದಲಿಗೆ, ಆಹಾರದ (healthy eating tips) ಆಯ್ಕೆಯನ್ನು ತಾವೇ ಮಾಡಬೇಕಾದ ದಿನಗಳು ಎದುರಾದಾಗ ಮೊದಲಿಗೆ ಎಡವುವುದು ಸಹಜವೇ. ಅಂದರೆ, ಒತ್ತಡದ ಓದಿನ ನಡುವೆ ಫಾಸ್ಟ್‌ಫುಡ್‌ಗಳನ್ನು ನಾಲಿಗೆ ಬಯಸುತ್ತದೆ. ನಡುರಾತ್ರಿ ಅಥವಾ ತಡರಾತ್ರಿಯವರೆಗೆ ಓದುವ ಸಂದರ್ಭದಲ್ಲಿ ಕಾಡುವ ಹಸಿವನ್ನು ತಣಿಸಲು ಚಿಪ್ಸ್ ತಕ್ಷಣಕ್ಕೆ ದೊರೆಯುತ್ತದೆ ಅಥವಾ ಫುಡ್ ಆಪ್‌ಗಳ ಮೂಲಕ ನೂಡಲ್ಸ್ ಅಥವಾ ಪೀಜಾ ಸುಲಭಕ್ಕೆ ಸಿಗುತ್ತದೆ. ಮಳೆಯ ಈ ದಿನಗಳಲ್ಲಿ ಸಮೋಸಾ, ಗೋಬಿಮಂಚೂರಿಗಳು ಪ್ರಿಯವಾಗಬಹುದು. ಹೀಗಾದರೆ ತೂಕ ಏರದೇ ಇನ್ನೇನಾಗುತ್ತದೆ? ಇದರ ಫಲಿತಾಂಶವೇನು ಎಂದು ನೋಡಿದರೆ- ದೈಹಿಕ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಕ್ಷೀಣಿಸಿ, ಪೌಷ್ಟಿಕ ಆಹಾರಗಳತ್ತ (healthy eating tips) ಒಲವು ಕಡಿಮೆಯಾಗಿ, ಕ್ಯಾಲರಿ ಹೆಚ್ಚಾದರೂ ಆಹಾರದ ಸತ್ವ ನಶಿಸಿ, ನಿದ್ದೆಯೂ ಕಡಿಮೆಯಾಗುವುದರ ಫಲವಾಗಿ ಜಾಣರಾಗಿದ್ದ ಮಕ್ಕಳು ಮಂಕುದಿಣ್ಣೆಯಂತಾಗುತ್ತಾರೆ. ಆರೋಗ್ಯವೂ ನಮಃಶಿವಾಯ ಎಂಬಂತಾಗಿ, ದೂರದೂರಿನಲ್ಲಿರುವ ಹೆತ್ತವರಿಗೆ ನಿತ್ಯವೂ ತಲೆಬಿಸಿ!
ಏನು ಮಾಡಬೇಕು?
ಇದೀಗ ಮುಂದಿನ ಪ್ರಶ್ನೆ. ಕಾಲೇಜು-ವಿದ್ಯಾರ್ಥಿ ಜೀವನದ ಒತ್ತಡದ ನಡುವೆ ಕಾಲಕಾಲಕ್ಕೆ ಸರಿಯಾಗಿ ಕೂತುಣ್ಣಬೇಕು, ದಿನಕ್ಕೆ ಎಂಟು ತಾಸು ನಿದ್ರಿಸಬೇಕು ಎಂಬಂಥ ಕ್ರಮಗಳು ಹೇಳುವುದಕ್ಕೆ ಸೂಕ್ತವಾದರೂ ಪಾಲನೆಗೆ ಕಷ್ಟ. ಹಾಗಾದರೆ ಏನು ಮಾಡಬಹುದು?
ಬೆಳಗಿನ ತಿಂಡಿ ಅಗತ್ಯ
ಎಷ್ಟೇ ಗಡಿಬಿಡಿ ಇದ್ದರೂ, ಬೆಳಗಿನ ಕ್ಲಾಸು, ಟ್ಯೂಷನ್ನುಗಳ ಧಾವಂತವಿದ್ದರೂ ಬೆಳಗಿನ ತಿಂಡಿಯನ್ನು ತಪ್ಪಿಸುವಂತಿಲ್ಲ. ರಾತ್ರಿಡೀ ಖಾಲಿಯಿದ್ದ ಹೊಟ್ಟೆಗೆ ಬೆಳಗ್ಗೆ ಆಹಾರ ನೀಡದಿದ್ದರೆ ಇಡೀ ದಿನದ ಕೆಲಸ ಕೆಡುತ್ತದೆ. ಕಾರಣ, ಏಕಾಗ್ರತೆ ಮೂಡುವುದಿಲ್ಲ. ಬೇರೇನೂ ಸಾಧ್ಯವಿಲ್ಲದಿದ್ದರೆ ಒಂದು ಮೊಟ್ಟೆ ಅಥವಾ ಒಂದು ಸೇಬು ತಿಂದು, ಹಾಲು ಕುಡಿದರೂ ಸರಿಯೆ- ಆದರೆ ಬೆಳಗಿನ ತಿಂಡಿ ಬೇಕು.
ಆಯ್ಕೆ ನಿಮ್ಮದೇ ತಾನೆ?
ಮನೆಯ ಆಹಾರ ಲಭ್ಯವಿದ್ದರೆ ಅದಕ್ಕಿಂತ ಸುಖ ಇನ್ನೊಂದಿಲ್ಲ. ನಿಮ್ಮ ಆರೋಗ್ಯಕ್ಕೆ ಯಾವುದು ಸೂಕ್ತ ಎಂಬುದು ಅಮ್ಮನ ಆಯ್ಕೆಯಾಗಿರುತ್ತದೆ. ಹಾಗಿಲ್ಲದಿದ್ದರೆ ಹೊರಗೆ ತಿನ್ನುವಾಗಲೂ ಒಂದಿಷ್ಟು ಆಯ್ಕೆ ನಿಮಗಿರಬಹುದು. ಉದಾ, ಸಂಜೆಯ ಕಳ್ಳ ಹಸಿವಿಗೆ ಮಸಾಲೆಪುರಿ, ಸಮೋಸಾಗಳ ಬದಲಿಗೆ ಬಾಳೆಹಣ್ಣಿನ ಮಿಲ್ಕ್‌ಶೇಕ್ ಅಥವಾ ಡ್ರೈಫ್ರೂಟ್/ ನಟ್‌ಗಳನ್ನೂ ಆಯ್ಕೆ ಮಾಡಬಹುದಲ್ಲ.
ಕ್ಯಾಲ್ಶಿಯಂ ಬೇಕು
ಹಾಲು ಸೇರುವುದಿಲ್ಲ, ಮೊಸರು ಅಭ್ಯಾಸವಿಲ್ಲ ಎಂಬಂಥ ಕಾರಣಗಳು ಬೇಕಾದಷ್ಟು ದೊರೆಯಬಹುದು ಹೇಳುವುದಕ್ಕೆ. ಆದರೆ ಈಗ ತಿನ್ನುವ ಆಹಾರಗಳೇ ನಾಳಿನ ಬದುಕಿನ ಗ್ರಾಸ ಎನ್ನುವುದು ನೆನಪಿರಲಿ. ಹಾಗಾಗಿ ಫ್ರೋಜನ್ ಯೋಗರ್ಟ್, ಕಡಿಮೆ ಕೊಬ್ಬಿರುವ ಚೀಸ್, ಪಾಲಕ್, ರಾಗಿ ಮುಂತಾದವು ಬೆಳವಣಿಗೆಯ ಹಂತವನ್ನು ಈಗಷ್ಟೇ ದಾಟಿರುವವರಿಗೆ ಬೇಕು.
ಜಂಕ್ ಬೇಕೆ?
ಸೋಡಾ, ಸಕ್ಕರೆ ಭರಿತ ಹಣ್ಣಿನ ರಸ, ಸ್ಪೋರ್ಟ್ ಡ್ರಿಂಕ್ಸ್ ಮುಂತಾದವು ದೇಹಕ್ಕೆ ಸಿಕ್ಕಾಪಟ್ಟೆ ಸಕ್ಕರೆ ಸೇರಿಸುತ್ತವೆ. ಸೀರಿಯಲ್ ತಿನ್ನುವ ಭರದಲ್ಲಿ ಸಕ್ಕರೆಭರ್ತಿ ಇರುವಂಥವು ಬೇಡ. ಸಾಲಡ್ ತಿನ್ನುವ ನೆಪದಲ್ಲಿ ಮೇಯೊನೀಸ್ ಅಥವಾ ಚೀಸ್ ಡ್ರೆಸ್ಸಿಂಗ್ ಸುರಿದುಕೊಂಡರೆ ಸರ್ವ ಬಣ್ಣ ಬಸಿ ನುಂಗಿದಂತಾಗುತ್ತದೆ. ಮರೆಯದಿರಿ, ದೇಹಕ್ಕೆ ಪೌಷ್ಟಿಕವಲ್ಲದ ಯಾವುದೇ ಕ್ಯಾಲರಿಯನ್ನೂ ಜಂಕ್ ಎಂದೇ ಪರಿಗಣಿಸಬಹುದು.
ಏನಿರಬೇಕು?
ಆರೋಗ್ಯಕರ ಊಟ ಅಂದುಕೊಂಡಷ್ಟು ಕಷ್ಟವಲ್ಲ ಎಂಬುದೇ ಖಷಿಯ ವಿಷಯ. ಉದಾ, ದಿನಕ್ಕೆರಡು ಬಾರಿ ಹಣ್ಣು-ತರಕಾರಿಗಳ ಸರ್ವಿಂಗ್ ಆವಶ್ಯಕ. ಅದು ಹಸಿ ತರಕಾರಿ ಆದರೂ ಸರಿ, ಪಲ್ಯದಂಥ ಖಾದ್ಯಗಳಾದರೂ ತೊಂದರೆಯಿಲ್ಲ. ಋತುಮಾನಕ್ಕೆ ತಕ್ಕ ಹಣ್ಣುಗಳು ತಿಂದಷ್ಟೂ ಒಳ್ಳೆಯದೇ. ಆಹಾರದ ಒಂದು ಭಾಗದಲ್ಲಿ ಅಕ್ಕಿ, ರಾಗಿ, ಜೋಳ, ಗೋಧಿಯಂಥ ಯಾವುದೇ ಧಾನ್ಯಗಳ ಖಾದ್ಯಗಳಿರಲಿ. ಜೊತೆಗೆ ಪನೀರ್, ತೋಫು, ಮೊಳಕೆ ಕಾಳುಗಳು, ಮೊಟ್ಟೆ, ಚಿಕನ್ ಮುಂತಾದ ಯಾವುದೇ ಬಗೆಯ ಪ್ರೊಟೀನ್ ಸ್ವಲ್ಪ ಬೇಕು. ಮೊಸರು ಸಹ ಊಟದ ಭಾಗವಾಗಿರಲಿ.
ನೀರು-ವ್ಯಾಯಾಮ
ಇವೆರಡೂ ಕಾಲೇಜು ಜೀವನದ ನಿತ್ಯ ಸಂಗಾತಿಗಳಾಗಿರಲಿ. ದಿನಕ್ಕೆ ಮೂರು ಲೀ. ನೀರು ಕುಡಿದು, ಬೆವರಿಳಿಯುವಂತೆ ವ್ಯಾಯಾಮ ಮಾಡಿ, ಒಳ್ಳೆಯ ಆಹಾರ ಸೇವಿಸಿದರೆ, ಇದಕ್ಕಿಂತ ದೊಡ್ಡ ಬ್ಯೂಟಿ ಸೀಕ್ರೆಟ್ ಯಾವುದಿದೆ ಹೇಳಿ!