Site icon Vistara News

ಮದ್ರಾಸ್‌ ಐಐಟಿಯಿಂದ ನಾಲ್ಕು ವರ್ಷಗಳ ಆನ್‌ಲೈನ್‌ ಬಿಎಸ್‌ ಪದವಿ ಶುರು

IIT-Madras launches four-year online BS degree programme

#image_title

ಚೆನ್ನೈ: ಮದ್ರಾಸ್‌ ಐಐಟಿಯು ಆನ್‌ಲೈನ್‌ನಲ್ಲಿ ಮತ್ತೊಂದು ನಾಲ್ಕು ವರ್ಷಗಳ ಪದವಿಯನ್ನು ಪರಿಚಯಿಸಿದೆ. ಎಲೆಕ್ಟ್ರಾನಿಕ್ಸ್‌ ಸಿಸ್ಟಮ್‌ನಲ್ಲಿ ಬಿಎಸ್‌ ಪದವಿಯನ್ನು ನೀಡಲಾಗುತ್ತಿದ್ದು, ಇದನ್ನು ದ್ವಿತೀಯ ಪಿಯುಸಿ ಓದಿರುವ ಯಾರು ಬೇಕಾದರೂ ಪಡೆದುಕೊಳ್ಳಬಹುದಾಗಿದೆ.

ಎಲೆಕ್ಟ್ರಾನಿಕ್ಸ್‌ ಕ್ಷೇತ್ರದಲ್ಲಿ ಕೌಶಲ ಹೊಂದಿರುವ ಪದವೀಧರರ ಕೊರತೆ ಇದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಮದ್ರಾಸ್‌ ಐಐಟಿಯ ಈ ಕ್ರಮ ಮಹತ್ವ ಪಡೆದಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಈ ಪದವಿ ನೀಡುವ ಶೈಕ್ಷಣಿಕ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿದ್ದಾರೆ. ಮದ್ರಾಸ್‌ ಐಐಟಿಯ ಪದವಿ ನೀಡುವ ಈ ಕಾರ್ಯಕ್ರಮ ಐತಿಹಾಸಿಕವಾದದು ಎಂದು ಅವರು ಬಣ್ಣಿಸಿದ್ದಾರೆ.

ಪದವಿಗೆ ಅರ್ಹತೆ ಏನು?

ಈ ಪದವಿಯನ್ನು ಎಲೆಕ್ಟ್ರಾನಿಕ್‌ ಸಿಸ್ಟಮ್‌ನಲ್ಲಿ ಆಸಕ್ತಿ ಹೊಂದಿದ ಯಾರು ಬೇಕಾದರೂ ಪಡೆದುಕೊಳ್ಳಬಹುದು. ಇದು ಆನ್‌ಲೈನ್‌ ಪದವಿಯಾಗಿರುವುದರಿಂದ ವಯಸ್ಸಿನ ನಿರ್ಬಂಧಗಳಿಲ್ಲ. ಆದರೆ ವಿದ್ಯಾರ್ಥಿಯು ದ್ವಿತೀಯ ಪಿಯುಸಿಯಲ್ಲಿ ಗಣಿತ ಮತ್ತು ಭೌತಶಾಸ್ತ್ರವನ್ನು ಓದಿರಬೇಕು.

ನಾಲ್ಕು ವಾರಗಳ ಅರ್ಹತಾ ಪ್ರಕ್ರಿಯೆಯ ಮೂಲಕ (qualifier process) ಅರ್ಹ ವಿದ್ಯಾರ್ಥಿಗಳನ್ನು ಈ ಪದವಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಅರ್ಹತಾ ಪರೀಕ್ಷೆ ಕೂಡ ನಡೆಯುತ್ತದೆ ಎಂದು ಮದ್ರಾಸ್‌ ಐಐಟಿಯ ನಿರ್ದೇಶಕ ವಿ. ಕಾಮಕೋಟಿ ತಿಳಿಸಿದ್ದಾರೆ. ಮೊಬೈಲ್‌ ಫೋನ್‌, ಇ-ವಾಹನಗಳ ಬಳಕೆ ಹೆಚ್ಚಿರುವುದರಿಂದ ಎಲೆಕ್ಟ್ರಾನಿಕ್‌ ಕ್ಷೇತ್ರದಲ್ಲಿ ನಿಪುಣತೆ ಹೊಂದಿದವರಿಗೆ ಬಹಳ ಬೇಡಿಕೆ ಇದೆ. ಹೀಗಾಗಿ ಈ ಕೋರ್ಸ್‌ ಆರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಮಾತ್ರವಲ್ಲದೆ, ಈಗಾಗಲೇ ವೃತ್ತಿಯಲ್ಲಿರುವವರು ಕೂಡ ತಮ್ಮ ಕೌಶಲವನ್ನು ಹೆಚ್ಚಿಸಿಕೊಳ್ಳಲು ಈ ಪದವಿಯನ್ನು ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಯನ್ನು ಮದ್ರಾಸ್‌ ವಿವಿಯ ವೆಬ್‌ಸೈಟ್‌ನಿಂದ ಪಡೆದುಕೊಳ್ಳಲು ಇಲ್ಲಿ ಕ್ಲಿಕ್‌ ಮಾಡಿ.

ಈ ಪದವಿಯ ಕಾರ್ಯಕ್ರಮದಲ್ಲಿ ಥಿಯರಿ ಮತ್ತು ಲ್ಯಾಬರೋಟರಿ ಕೋರ್ಸ್‌ಗಳಿರಲಿವೆ. ಮದ್ರಾಸ್‌ ಐಐಟಿಯ ಮತ್ತು ಉದ್ಯಮದ ಸಂಪನ್ಮೂಲ ವ್ಯಕ್ತಿಗಳು ಈ ವಿಷಯದ ಕುರಿತು ಪಾಠ ಮಾಡಲಿದ್ದಾರೆ. ವಿದ್ಯಾರ್ಥಿಗಳಿಗೆ ಬೋಧನೆಯ ರೆಕಾರ್ಡ್‌ ಆಗಿರುವ ವಿಡಿಯೋವನ್ನು ಒದಗಿಸಲಾಗುತ್ತದೆ.

ಅಭ್ಯಾಸ ಸಾಮಗ್ರಿಗಳನ್ನು ಒದಗಿಸುವುದರ ಜತೆಗೆ ವಿದ್ಯಾರ್ಥಿಗಳಿಗೆ ತಮ್ಮ ಗೊಂದಲವನ್ನು ಬಗೆಹರಿಸಿಕೊಳ್ಳಲು ಆನ್‌ಲೈನ್‌ ವೇದಿಕೆಯನ್ನು ಕಲ್ಪಿಸಲಾಗುತ್ತದೆ. ಲ್ಯಾಬರೋಟರಿ ಕೋರ್ಸ್‌ಗೆ ವಿದ್ಯಾರ್ಥಿಗಳು ಮದ್ರಾಸ್‌ ಐಐಟಿಗೆ ಹಾಜರಾಗುವುದು ಅವಶ್ಯವಾಗಿದ್ದು, ಪ್ರತಿ ಸೆಮಿಸ್ಟರ್‌ನಲ್ಲಿ ಎರಡು ವಾರಗಳ ಕಾಲ ಅವರು ಲ್ಯಾಬರೋಟರಿ ಕ್ಲಾಸ್‌ಗೆ ಹಾಜರಾಗಿರಬೇಕಿರುತ್ತದೆ ಎಂದು ಐಐಟಿಯು ತಿಳಿಸಿದೆ.

ಇದನ್ನೂ ಓದಿ : Australia -India : ಭಾರತೀಯ ಕಾಲೇಜುಗಳ ಪದವಿಗಳಿಗೆ ಆಸ್ಟ್ರೇಲಿಯಾ ಮಾನ್ಯತೆ

Exit mobile version