ಬೆಂಗಳೂರು: ಇಂದಿರಾ ಕ್ಯಾಂಟೀನ್ (Indira Canteen) ಬಡವರ ಹಸಿವು ನೀಗಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಸರ್ಕಾರವು ಕ್ಯಾಂಟೀನ್ ಹೆಚ್ಚಳ ಮಾಡುವ ಬಗ್ಗೆ ನಿರ್ಧಾರ ಮಾಡಿದ್ದು, ಸದ್ಯ ಜ್ಞಾನಭಾರತಿ ಆವರಣದಲ್ಲಿ (Bengaluru University) ಇಂದಿರಾ ಕ್ಯಾಂಟೀನ್ ತೆರೆಯುವಂತೆ ಬೇಡಿಕೆ ಇಟ್ಟಿದ್ದಾರೆ.
ಹಿಂದಿನ ಸರಕಾರದಲ್ಲಿ ಇಂದಿರಾ ಕ್ಯಾಂಟಿನ್ ಕೊಂಚ ಮೂಲೆ ಗುಂಪು ಆಗಿತ್ತು. ಇದಕ್ಕೆ ಸದ್ಯ ಸಿದ್ದರಾಮಯ್ಯ ಸರ್ಕಾರ ಬೂಸ್ಟ್ ನೀಡಿದ್ದು, ಸೂಕ್ತ ಅನುದಾನ ಮೀಸಲಿಡುವುದಾಗಿ ಹೇಳಿದೆ. ಅಲ್ಲದೆ ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ಗಳನ್ನು ಹೆಚ್ಚಳ ಮಾಡುವುದಕ್ಕೆ ಸಹ ನಿರ್ಧರಿಸಿದೆ. ಸರ್ಕಾರದ ಈ ನಿರ್ಧಾರ ಬೆನ್ನಲ್ಲೇ ನಮಗೂ ಒಂದು ಇಂದಿರಾ ಕ್ಯಾಂಟೀನ್ ಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದಾರೆ.
ಇದನ್ನೂ ಓದಿ: karnataka weather forecast : ಚಿಕ್ಕಮಗಳೂರಲ್ಲಿ ಸಂಜೆಯಿಂದ ಬಿರುಮಳೆ; ನಾಳೆವರೆಗೂ 8 ಜಿಲ್ಲೆಗಳಿಗೆ ಅಲರ್ಟ್
ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ಬೆಂಗಳೂರು ವಿವಿಗೆ ಸಾವಿರಾರು ಮಂದಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ದೂರದ ಊರುಗಳಿಂದ ಬಂದು ವ್ಯಾಸಂಗ ಮಾಡುತ್ತಾರೆ. ಹೀಗಾಗಿ ಅವರ ಅನುಕೂಲಕ್ಕಾಗಿ ಜ್ಞಾನಭಾರತಿ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಘ ಆಗ್ರಹ ಮಾಡಿದೆ.
ಬೆಂಗಳೂರು ವಿವಿಗೆ ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಸೇರಿ ಹಲವು ಜಿಲ್ಲೆಗಳಿಂದ ವಿದ್ಯಾರ್ಥಿಗಳು ಸಂಚಾರ ಮಾಡುತ್ತಾರೆ. ವಿದ್ಯಾರ್ಥಿಗಳು ಊಟಕ್ಕೆಂದು ನೂರಾರು ರೂಪಾಯಿ ವ್ಯಯ ಮಾಡುತ್ತಾರೆ. ಹೀಗಾಗಿ ಇಂದಿರಾ ಕ್ಯಾಂಟೀನ್ ನಮಗೂ ಬೇಕು ಎನ್ನುತ್ತಿದ್ದಾರೆ. ವಿದ್ಯಾರ್ಥಿಗಳ ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ವಿವಿ, ಈ ಬಗ್ಗೆ ಸಿಂಡಿಕೇಟ್ ಸಭೆ ನಡೆಸಿ ಸದಸ್ಯರ ಒಪ್ಪಿಗೆ ಮೇರೆಗೆ ಸರ್ವಾನುಮತದಿಂದ ಅಂಗೀಕಾರ ಪಡೆದು ಸರ್ಕಾರಕ್ಕೆ ಹಾಗೂ ಬಿಬಿಎಂಪಿಗೆ ಮನವಿ ಸಲ್ಲಿಸುವುದಾಗಿ ಆಡಳಿತ ಮಂಡಳಿ ಮೂಲಗಳು ಮಾಹಿತಿ ನೀಡಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ