ನವ ದೆಹಲಿ: ಐಐಟಿ ಬಾಂಬೆ ಇಂದು ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಫಲಿತಾಂಶ (JEE Advanced Result ) ಪ್ರಕಟಿಸಿದ್ದು, ಅದರಲ್ಲಿ ಸೂರತ್ನ ಮಹಿತ್ ಗಢಿವಾಲಾ 9ನೇ ಶ್ರೇಯಾಂಕ ಪಡೆದು ಸಾಧನೆ ಮಾಡಿದ್ದಾರೆ. ಐಐಟಿ ಪ್ರವೇಶ ಪರೀಕ್ಷೆಯಾದ ಜೆಇಇ ಅಡ್ವಾನ್ಸ್ಡ್ನಲ್ಲಿ 360ಕ್ಕೆ 285 ಅಂಕ ಗಳಿಸಿದ್ದಾರೆ. ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಕಠಿಣ ಇತ್ತು. ಆದರೆ ನನ್ನಲ್ಲಿ ಆತ್ಮಸ್ಥೈರ್ಯ ಮೂಡಿಸಿದ್ದು ‘ಪುಷ್ಪಾ’ ಸಿನಿಮಾದ ಸಿಗ್ನೇಚರ್ ಡೈಲಾಗ್ ಎನ್ನಿಸಿಕೊಂಡ ‘main jhukega nahi’ (ನಾನು ತಲೆ ಬಾಗುವುದಿಲ್ಲ ಎಂಬ ವಾಕ್ಯ’ ಎಂದು ತಿಳಿಸಿದ್ದಾರೆ.
2021ರ ಅಂತಾರಾಷ್ಟ್ರೀಯ ರಸಾಯನಶಾಸ್ತ್ರ ಒಲಿಂಪಿಯಾಡ್ನಲ್ಲಿ ಎರಡು ಬೆಳ್ಳಿ ಪದಕ ಮತ್ತು 2022ರಲ್ಲಿ ನಡೆದ ಭೌತಶಾಸ್ತ್ರ ಒಲಿಂಪಿಯಾಡ್ನಲ್ಲಿ ಕಂಚಿನ ಪದಕ ಗೆದ್ದಿರುವ ಮಹಿತ್, ನೀಟ್ ಪರೀಕ್ಷೆಯನ್ನೂ ಬರೆದು ಅದರಲ್ಲಿ 720ಕ್ಕೆ 600 ಅಂಕ ಗಳಿಸಿದ್ದರು. ‘ನನಗೆ ಗುಜರಾತ್ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಸಿಗುತ್ತಿತ್ತೋ ಏನೋ, ಆದರೆ ನನಗೆ ಕಂಪ್ಯೂಟರ್ ಸೈನ್ಸ್ ಬಗ್ಗೆ ಇರುವಷ್ಟು ಆಸಕ್ತಿ ವೈದ್ಯಕೀಯ ಕ್ಷೇತ್ರದಲ್ಲಿ ಇಲ್ಲ. ಹಾಗಾಗಿ ಪ್ರಯತ್ನ ಮಾಡಲಿಲ್ಲ. ಇದೀಗ ಜೆಇಇ ರಿಸಲ್ಟ್ ಬಂದಿದೆ. ಈಗಾಗಲೇ ಯುಎಸ್ ಮತ್ತು ಕೆನಡಾದ ಕೆಲವು ಯೂನಿವರ್ಸಿಟಿಗಳಿಂದ ಆಫರ್ ಕೂಡ ಬಂದಿದೆ. ಆದರೆ ನಾನು ಅಲ್ಲಿಗೆ ಹೋಗುವುದಿಲ್ಲ. ಇಲ್ಲಿಯೇ ಇದ್ದು ಕನಸು ನನಸು ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.
ಪರೀಕ್ಷೆಯ ಬಗೆಗಿನ ಒತ್ತಡದ ಬಗ್ಗೆ ಮಾತನಾಡಿದ ಮಹಿತ್, ‘ನಾನು ಓದುತ್ತಿದ್ದೆ. ಸಹಜವಾಗಿಯೇ ಒತ್ತಡ ಆಗುತ್ತಿತ್ತು. ಆಗೆಲ್ಲ ನನ್ನ ಆಯ್ಕೆ ಪುಷ್ಪಾ ಸಿನಿಮಾ ನೋಡುವುದೇ ಆಗಿತ್ತು. ಒಟಿಟಿಯಲ್ಲಿ ಅದನ್ನು ನೋಡುತ್ತಿದೆ. ಅಂದರೆ ಓದಿನ ನಂತರ ಊಟಕ್ಕೆ ಬಿಡುವು ಪಡೆದಾಗ ಪುಷ್ಪಾ ಚಲನಚಿತ್ರ ನೋಡುತ್ತಿದ್ದೆ. ಅದರಲ್ಲಿ ನಾಯಕ ಸದಾ ಹೇಳುವ main jhukega nahi ಡೈಲಾಗ್ ನನಗೆ ಸದಾ ಸ್ಫೂರ್ತಿ ಕೊಡುತ್ತಿತ್ತು. ಪರೀಕ್ಷೆ ಬರೆಯುವಾಗ ಪ್ರಶ್ನೆ ಕಠಿಣವಿದ್ದರೂ ನಾನು ಇದೇ ಡೈಲಾಗ್ ನೆನಪಿಸಿಕೊಂಡು, ಆತ್ಮ ವಿಶ್ವಾಸದಿಂದ ಬರೆದೆ’ ಎಂದಿದ್ದಾರೆ.
ಇದನ್ನೂ ಓದಿ: JEE Advanced Result 2022 | ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಫಲಿತಾಂಶ ಪ್ರಕಟ; ಬೆಂಗಳೂರು ಹುಡುಗ ಟಾಪರ್