ನವ ದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ಜೆಇಇ (ಮೇನ್) 2023 (JEE Main 2023) ಪತ್ರಿಕೆ-2ರ (BArch and BPlanning) ಫಲಿತಾಂಶವನ್ನು ಪ್ರಕಟಿಸಿದೆ.
ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ ಸ್ಕೋರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಏಪ್ರಿಲ್ 12 ರಂದು ಪತ್ರಿಕೆ -2 ರ ಪರೀಕ್ಷೆ ನಡೆಸಲಾಗಿತ್ತು. ಜೆಇಇ (ಮೇನ್) 2022 ಸೆಷನ್-2ರ ಪರೀಕ್ಷೆಯ ಫಲಿತಾಂಶ ಈಗಾಗಲೇ ಪ್ರಕಟವಾಗಿದೆ. ಒಟ್ಟು 43 ವಿದ್ಯಾರ್ಥಿಗಳು ಶೇ. ನೂರಕ್ಕೆ ನೂರು ಅಂಕ ಪಡೆದಿದ್ದರು. ಇದರಲ್ಲಿ ನಮ್ಮ ರಾಜ್ಯದ ವಿದ್ಯಾರ್ಥಿನಿ ರಿಧಿ ಕಮಲೇಶ್ ಕುಮಾರ್ ಮಹೇಶ್ವರಿಯೂ ಸೇರಿದ್ದಾರೆ.
ಇಂಗ್ಲಿಷ್, ಹಿಂದಿ, ಕನ್ನಡ, ಉರ್ದು, ಅಸ್ಸಾಮಿ, ಬೆಂಗಾಳಿ, ಗುಜರಾತಿ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಭಾಷೆಗಳಲ್ಲಿ ಈ ಜೆಇಇ ಮೇನ್ ಪರೀಕ್ಷೆ ನಡೆದಿತ್ತು. ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶಕ್ಕಾಗಿ ನಡೆಸಲಾಗುವ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಇದಾಗಿದೆ.
ಫಲಿತಾಂಶ ನೋಡಲು ವೆಬ್‌ಸೈಟ್ ವಿಳಾಸ: https://jeemain.nta.nic.in
ಜೆಇಇ ಪರೀಕ್ಷೆ ಹೇಗಿರುತ್ತದೆ?
ಜೆಇಇ ಮೇನ್ ಪರೀಕ್ಷೆಯನ್ನು ಎರಡು ಸೆಷನ್‌ಗಳಲ್ಲಿ ನಡೆಸಲಾಗುತ್ತದೆ. ಸೆಷನ್ -1ಕ್ಕೆ ಹಾಜರಾಗಿರುವ ವಿದ್ಯಾರ್ಥಿಗಳು ಕೂಡ ಸೆಷನ್- 2 ರಲ್ಲಿ ಪರೀಕ್ಷೆಗೆ ಹಾಜರಾಗಬಹುದು. ಎರಡರಲ್ಲಿ ಯಾವುದರಲ್ಲಿ ಹೆಚ್ಚು ಅಂಕಪಡೆದಿರುತ್ತಾರೋ ಅವರನ್ನು ಜೆಇಇ ಅಡ್ವಾನ್ಸ್‌ಗೆ ಪರಿಗಣಿಸಲಾಗುತ್ತದೆ.
ಜನವರಿ ಮತ್ತು ಏಪ್ರಿಲ್‌ನಲ್ಲಿ ಸೆಷನ್-1 ಮತ್ತು ಸೆಷನ್-2 ರ ಪರೀಕ್ಷೆ ನಡೆಸಲಾಗುತ್ತದೆ. ಈ ಬಾರಿ ತೆಲಂಗಾಣ ರಾಜ್ಯದ 11 ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಪಡೆದಿರುವುದರಿಂದ ಈ ರಾಜ್ಯ ಮೊದಲ ಸ್ಥಾನದಲ್ಲಿದೆ, ರಾಜಸ್ಥಾನ ಮತ್ತು ಆಂಧ್ರಪ್ರದೇಶದ ತಲಾ ಐವರು ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಪಡೆದಿದ್ದಾರೆ.
ಕಳೆದ ವರ್ಷ ನಡೆದ ಜೆಇಇ ಅಡ್ವಾನ್ಸ್ ಪರೀಕ್ಷೆ ಬರೆಯಲು ಉತ್ತರ ಪ್ರದೇಶ ರಾಜ್ಯದಿಂದ ಅತ್ಯಂತ ಹೆಚ್ಚು ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದರು. ನಂತರದ ಸ್ಥಾನವನ್ನು ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳು ಪಡೆದಿದ್ದವು.
ಇದನ್ನೂ ಓದಿ : JEE Advanced Result | ಜೆಇಇ ಅಡ್ವಾನ್ಸ್ಡ್ನಲ್ಲಿ 26ನೇ ಶ್ರೇಯಾಂಕ ಪಡೆದ ವಿದ್ಯಾರ್ಥಿಯಲ್ಲಿದೆ ವಿಶೇಷತೆ