ಬೆಂಗಳೂರು: 5 ಮತ್ತು 8ನೇ ತರಗತಿಗಳಿಗೆ ಮಾರ್ಚ್ 13 ರಿಂದ ನಡೆಯಲಿರುವ ಮೌಲ್ಯಂಕನ ಪರೀಕ್ಷೆಯ (Karnataka Board Exams 2023) ಪ್ರವೇಶ ಪತ್ರದ ಮಾದರಿಯನ್ನು ʻಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿʼಯು (KSEEB) ವೆಬ್ಸೈಟ್ನಲ್ಲಿ ಒದಗಿಸಿದ್ದು, ಇದನ್ನು ಶಾಲೆಯ ಮುಖ್ಯ ಶಿಕ್ಷಕರು ಡೌನ್ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಒದಗಿಸಬೇಕೆಂದು ಸೂಚಿಸಲಾಗಿದೆ.
8ನೇ ತರಗತಿಗೆ ಮಾರ್ಚ್ 13 ರಿಂದ 18ರ ವರೆಗೆ ಈ ಪಬ್ಲಿಕ್ ಪರೀಕ್ಷೆ ನಡೆಯಲಿದೆ, 5ನೇ ತರಗತಿಗೆ ಮಾರ್ಚ್ 15 ರಿಂದ 18ರ ವರೆಗೆ ನಡೆಯಲಿದೆ. ಎಲ್ಲ ಪರೀಕ್ಷೆಗಳು ಮಧ್ಯಾಹ್ನ 2.30 ರಿಂದ ಆರಂಭಗೊಂಡು 4.30ಕ್ಕೆ ಮುಕ್ತಾಯವಾಗಲಿವೆ. ಮೌಖಿಕ ಪರೀಕ್ಷೆಯನ್ನು ಈಗಾಗಲೇ ಶಾಲೆಗಳಲ್ಲಿ ಆರಂಭಿಸಲಾಗಿದೆ.
ಪ್ರವೇಶ ಪತ್ರದಲ್ಲಿ ವಿದ್ಯಾರ್ಥಿಯ ಹೆಸರು, SATS id ಶಾಲೆಯ ಡೈಸ್ ಸಂಕೇತ ಮತ್ತು ವಿಳಾಸ, ಕೇಂದ್ರದ ಡೈಸ್ ಸಂಕೇತ ಮತ್ತು ವಿಳಾಸ, ವಿದ್ಯಾರ್ಥಿಯ ಮಾಧ್ಯಮ ಹಾಗೂ ಇನ್ನಿತರೆ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರವನ್ನು ಕೂಡಲೇ ವಿತರಿಸಬೇಕೆಂದು ಮಂಡಳಿಯು ತಿಳಿಸಿದೆ.
ಪ್ರವೇಶ ಪತ್ರವಿಲ್ಲದೆ ಈ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ. ಪರೀಕ್ಷೆಯ ದಿನದಂದು ಮಧ್ಯಾಹ್ನ 2ಗಂಟೆಯೊಳಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. 2.30 ರ ನಂತರ ಪರೀಕ್ಷಾ ಕೇಂದ್ರಕ್ಕೆ ಹಾಜರಾದರೆ ಪರೀಕ್ಷೆ ಬರೆಯಲು ಅವಕಾಶವಿರುವುದಿಲ್ಲ. ಪರೀಕ್ಷೆ ಬರೆಯಲು ಅಗತ್ಯವಿರುವ ಲೇಖನ ಸಾಮಗ್ರಿಗಳಾದ ಪೆನ್ನು, ಪೆನ್ಸಿಲ್, ಜಿಯೋಮೆಟ್ರಿ ಬಾಕ್ಸ್, ರಬ್ಬರ್, ಶಾರ್ಪ್ನರ್ ಇತ್ಯಾದಿಗಳನ್ನು ತರಬೇಕು. ಪರೀಕ್ಷೆಯ ಅವಧಿಯು ಮುಗಿಯವವರೆಗೂ ಪರೀಕ್ಷಾ ಕೊಠಡಿಯಿಂದ ಹೊರ ಹೋಗಲು ಅವಕಾಶವಿರುವುದಿಲ್ಲ ಎಂದು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಂಡಳಿಯು ಸೂಚಿಸಿದೆ.
ಪರೀಕ್ಷಾ ಕೊಠಡಿಯೊಳಗೆ ಪರೀಕ್ಷಾ ವಿಷಯಕ್ಕೆ ಸಂಬಂಧಿಸಿದ ಯಾವುದೇ ಪುಸ್ತಕ, ಕೈಬರಹದ ಚೀಟಿ, ವಿದ್ಯುನ್ಮಾನ ಉಪಕರಣಗಳು ಅಥವಾ ಮೊಬೈಲ್ ಫೋನ್, ಡಿಜಿಟಲ್ ಮತ್ತು ಸ್ಮಾರ್ಟ್ ಕೈಗಡಿಯಾರಗಳ ಬಳಕೆಯನ್ನು ನಿಷೇಧಿಸಲಾಗಿರುತ್ತದೆ ಎಂದು ಮಂಡಳಿಯು ತಿಳಿಸಿದೆ.
ಹೇಗಿರಲಿದೆ ಪರೀಕ್ಷೆ?
ಲಿಖಿತ ಪರೀಕ್ಷೆಯ ಪ್ರತಿ ವಿಷಯದ ಪ್ರಶ್ನೆ ಪತ್ರಿಕೆಯು 40 ಅಂಕಗಳಿಗೆ ಪ್ರಶ್ನೆಗಳನ್ನು ಒಳಗೊಂಡಿರಲಿದ್ದು, 20 ಅಂಕಗಳಿಗೆ ಎಂ.ಸಿ.ಕ್ಯೂ ಪಶ್ನೆಗಳನ್ನು ( ಒಂದು ಪ್ರಶ್ನೆಗೆ ನಾಲ್ಕು ಉತ್ತರ ನೀಡಲಾಗಿರುತ್ತದೆ. ಇದರಲ್ಲಿ ಸರಿಯಾದ ಉತ್ತರವನ್ನು ವಿದ್ಯಾರ್ಥಿಯು ಗುರುತಿಸಬೇಕಿರುತ್ತದೆ ) ಹಾಗೂ ಉಳಿದ 20 ಅಂಕಗಳಿಗೆ ವಾಕ್ಯ ರೂಪದಲ್ಲಿನ ಬರವಣಿಗೆಯನ್ನಾಧರಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಉತ್ತರ ಬರೆಯಲು ಎರಡು ಗಂಟೆ ಕಾಲಾವಕಾಶ ನೀಡಲಾಗಿರುತ್ತದೆ. ಮಾದರಿ ಪ್ರಶ್ನೆ ಪತ್ರಿಕೆಯಲ್ಲಿ ಇದನ್ನು ಸ್ಪಷ್ಟವಾಗಿ ತೋರಿಸಲಾಗಿದೆ.
ಮಾದರಿ ಪ್ರಶ್ನೆ ಪತ್ರಿಕೆಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ (Click Here ) ಮಾಡಿ
ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಮಾದರಿಯಲ್ಲಿ ಮಾದರಿ ಪ್ರಶ್ನೆ ಪತ್ರಿಕೆಯನ್ನು ರೂಪಿಸಲಾಗಿದ್ದು, ವಿದ್ಯಾರ್ಥಿಗಳು ತಾವು ಓದುವ ಮಾಧ್ಯಮದ ಪತ್ರಿಕೆಯನ್ನು ಡೌನ್ಲೋಡ್ ಮಾಡಿಕೊಂಡು ಪರೀಕ್ಷೆಗೆ ಸಿದ್ಧತೆ ನಡೆಸಬಹುದಾಗಿದೆ.