ಬೆಂಗಳೂರು: ಈ ಬಾರಿಯ ಬಜೆಟ್‌ನಲ್ಲಿ (Karnataka Budget 2023) ಶಿಕ್ಷಣಕ್ಕೆ ಶೇ.12 ರಷ್ಟು ಎಂದರೆ 37,960 ಕೋಟಿ ನೀಡಿರುವುದನ್ನು ಸ್ವಾಗತಿಸಿರುವ ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ. ಎಂ.ಆರ್. ದೊರೆಸ್ವಾಮಿ, ಶಿಕ್ಷಣದ ಪ್ರೋತ್ಸಾಹಕ್ಕೆ ಹಲವಾರು ಯೋಜನೆಗಳನ್ನು ಪ್ರಕಟಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸಿದ್ದಾರೆ.
ರಾಜ್ಯದಲ್ಲಿ ವಿವೇಕ ಯೋಜನೆಯಡಿ ಅನುಮೋದನೆಯಾದ 7,601 ಶಾಲಾ ಕೊಠಡಿಗಳು ಸೇರಿದಂತೆ 9,556 ಶಾಲಾ ಕೊಠಡಿ ಹಾಗೂ 73 ಕರ್ನಾಟಕ ಪಬ್ಲಿಕ್ ಶಾಲೆಯ ನಿರ್ಮಾಣಕ್ಕೆ ಹಣ ನೀಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ʻಮುಖ್ಯಮಂತ್ರಿ ವಿದ್ಯಾಶಕ್ತಿʼ ಯೋಜನೆಯಡಿ ಸರ್ಕಾರಿ ಪದವಿಪೂರ್ವ ಮತ್ತು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ ನೀಡಿರುವುದು ಅತ್ಯಂತ ಸೂಕ್ತವಾದದು ಎಂದು ಬಣ್ಣಿಸಿದ್ದಾರೆ.
ಪಿಎಂ ಶ್ರೀ ಯೋಜನೆಯಡಿ ಉತ್ತಮ ಮೂಲಭೂತ ಸೌಕರ್ಯ ಹಾಗೂ ಕಲಿಕಾ ಸಂಪನ್ಮೂಲ ಒದಗಿಸಲು 100 ಕೋಟಿ ರೂ. ಅನುದಾನ ನೀಡಿರುವುದು, ಎಲ್ಲ ವಿವಿಗಳ ಪಠ್ಯಕ್ರಮ ಹಾಗೂ ರೆಫರೆನ್ಸ್ ಪುಸ್ತಕಗಳನ್ನು ಕನ್ನಡಕ್ಕೆ ಭಾಷಾಂತರಿಸಲು ಕ್ರಮ ತೆಗೆದುಕೊಂಡಿರುವುದು, ಚಿಕ್ಕಮಗಳೂರಿನಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪಿಸುತ್ತಿರುವುದು ಹಾಗೂ ಬಂಕಾಪುರದ ಸರ್ಕಾರಿ ಪಾಲಿಟೆಕ್ನಿಕ್ ಅನ್ನು ಎಂಜಿನಿಯರಿಂಗ್ ಕಾಲೇಜಿಗಾಗಿ ಪರಿವರ್ತಿಸುತ್ತಿರುವುದು ಸ್ವಾಗತಾರ್ಹ ಎಂದು ಅವರು ಹೇಳಿದ್ದಾರೆ.
500 ಕೋಟಿ ವೆಚ್ಚದಲ್ಲಿ ಚಿತ್ರದುರ್ಗದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ಪ್ರಕಟಿಸಿರುವುದು ಬಹಳ ಮಹತ್ವದ ನಿರ್ಧಾರ ಎಂದಿರುವ ಅವರು, ಒಂದು ಸಾವಿರ ಮಕ್ಕಳ ಬಸ್ಸಿಗಾಗಿ ನೂರು ಕೋಟಿ ನೀಡಿರುವುದು ಗ್ರಾಮೀಣ ಭಾಗದಲ್ಲಿನ ಸಾರಿಗೆ ಸೌಕರ್ಯದ ಸಮಸ್ಯೆಗಳನ್ನು ಬಗೆಹರಿಸಲಿದೆ. ಅಲ್ಲದೆ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಘೋಷಿಸಿರುವುದರಿಂದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಿದಂತಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಜೆಟ್‌ನಲ್ಲಿ ಶಿಕ್ಷಣಕ್ಕೆ ಒತ್ತು ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಸಲಹೆ ನೀಡಿದ್ದ ಪ್ರೊ. ಎಂ.ಆರ್. ದೊರೆಸ್ವಾಮಿ, ಕರ್ನಾಟಕ ಪಬ್ಲಿಕ್ ಶಾಲೆಗಳು ಮತ್ತು 50 ಆದರ್ಶ ವಿದ್ಯಾಲಯಗಳಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ʼಸೃಷ್ಟಿʼ ಟಿಂಕರಿಂಗ್ ಪ್ರಯೋಗಾಲಯಗಳ ಸ್ಥಾಪನೆ ಮಾಡಲು ಮುಂದಾಗಿರುವುದು ಉತ್ತಮವಾದ ಕ್ರಮ. ಎಸ್.ಎಸ್.ಎಲ್.ಸಿ. ಫಲಿತಾಂಶಕ್ಕಾಗಿ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ʻಅಭ್ಯುದಯ ಕಾರ್ಯಕ್ರಮʼ ಎಂಬ ಕಾರ್ಯಕ್ರಮ ಪ್ರಕಟಿಸಿರುವುದು ಸೂಕ್ತವಾಗಿದೆ ಎಂದಿದ್ದಾರೆ.
ಇದನ್ನೂ ಓದಿ : Karnataka Budget 2023: ವಿದ್ಯಾಶಕ್ತಿ, ಮಕ್ಕಳ ಬಸ್ಸು, ಹಳ್ಳಿಮುತ್ತು… ಶಿಕ್ಷಣ ಕ್ಷೇತ್ರದಲ್ಲಿ ಹಲವು ಹೊಸ ಘೋಷಣೆ